ಒಲಂಪಿಕ್‌ ಜ್ಯೋತಿಯ ಇತಿಹಾಸ ನಿಮ್ಗೆ ಗೊತ್ತಾ?

masthmagaa.com:

ಒಲಿಂಪಿಕ್ ಜ್ಯೋತಿ ಇವತ್ತು ಜಪಾನ್ ರಾಜಧಾನಿ ಟೋಕಿಯೋ ಪ್ರವೇಶಿಸಿದೆ. ಆದ್ರೆ ಈ ಸಮಾರಂಭದ ವೀಕ್ಷಣೆಗೆ ಯಾವುದೇ ಪ್ರೇಕ್ಷಕರಿರಲಿಲ್ಲ. ಕೆಲವೇ ಕೆಲವು ಪತ್ರಕರ್ತರು ಮತ್ತು ಪ್ರಮುಖರು ಮಾತ್ರವೇ ಹಾಜರಿದ್ರು. ಲಾಟೀನಿನಲ್ಲಿದ್ದ ಈ ಅಗ್ನಿಯನ್ನು ಟೋಕಿಯೋ ಗವರ್ನರ್​ ಯುರಿಕೋ ಕೊಯ್ಕೆಗೆ ಹಸ್ತಾಂತರ ಮಾಡಲಾಯ್ತು. ಈಗಾಗಲೇ ಟೋಕಿಯೋದಲ್ಲಿ ವೈರಸ್ ಎಮರ್ಜೆನ್ಸಿ ಘೋಷಿಸಲಾಗಿದ್ದು, ಬಹುತೇಕ ಆಟಗಳು ಪ್ರೇಕ್ಷಕರಿಲ್ಲದೇ ನಡೆಯಲಿವೆ. ಹೀಗಾಗಿ ಒಲಿಂಪಿಕ್ ಜ್ಯೋತಿ ಹಸ್ತಾಂತರ ಕಾರ್ಯಕ್ರಮದಲ್ಲೂ ಜನರೇ ಇರಲಿಲ್ಲ. ಈ ಒಲಿಂಪಿಕ್ ಜ್ಯೋತಿಗೂ ಒಂದು ಇತಿಹಾಸ ಇದೆ. ಗ್ರೀಸ್​​ನಲ್ಲಿ ಅಗ್ನಿಯನ್ನು ಪವಿತ್ರವಾಗಿ ನೋಡಲಾಗುತ್ತೆ. ಹೀಗಾಗಿ ಇಲ್ಲಿನ ದೇವತೆಗಳಾದ ಹೇರಾ, ಹೇಸ್ಟಿಯಾ ಮತ್ತು ಜೋಯಸ್ ಮಂದಿರಗಳಲ್ಲಿ ನಿರಂತರವಾಗಿ ಬೆಂಕಿ ಉರಿಯುತ್ತಲೇ ಇರುತ್ತೆ. ಆದ್ರೆ 1896ರಲ್ಲಿ ಮೊಟ್ಟ ಮೊದಲಿಗೆ ಗ್ರೀಸ್​​ನ ಅಥೆನ್ಸ್​ನಲ್ಲೇ ಒಲಿಪಿಂಕ್ಸ್​ ನಡೆದರೂ ಆಗ ಒಲಿಂಪಿಕ್ಸ್ ಜ್ಯೋತಿಯ ಸಂಪ್ರದಾಯ ಇರಲಿಲ್ಲ. 1936ರಲ್ಲಿ ಜರ್ಮನಿಯ ಬರ್ಲಿನ್​​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಗ್ರೀಸ್​​ನ ಒಲಿಂಪಿಯಾ ನಗರದಿಂದ ಜ್ಯೋತಿಯನ್ನು ತಂದು ಬರ್ಲಿನ್​​ನಲ್ಲಿ ಬೆಳಗಿಸಲಾಯ್ತು. ಇಲ್ಲಿಂದ ಒಲಿಂಪಿಕ್ ಜ್ಯೋತಿಯ ಸಂಪ್ರದಾಯ ಶುರುವಾಯ್ತು. ಪ್ರತಿ ವರ್ಷ ಯಾವುದೇ ದೇಶದಲ್ಲಿ ಒಲಿಂಪಿಕ್ಸ್ ಆಯೋಜನೆಯಾದ್ರೂ ಕೂಡ ಗ್ರೀಸ್​​ನ ಒಲಿಂಪಿಯಾದಿಂದಲೇ ಅಗ್ನಿಯನ್ನು ತರಲಾಗುತ್ತೆ. ಅಲ್ಲಿ ಸೂರ್ಯನ ಬಿಸಿಲಿಗೆ ದರ್ಪಣ ಇಟ್ಟು, ಪಂಜನ್ನು ಹೊತ್ತಿಸಲಾಗುತ್ತೆ. ನಂತರ ಅಲ್ಲಿಂದ ಆಟಗಾರರು ಕೈಯಿಂದ ಕೈಗೆ ಬದಲಿಸುತ್ತಾ ರಿಲೇ ಮೂಲಕ ಗ್ರೀಸ್​ ರಾಜಧಾನಿ ಅಥೆನ್ಸ್​ಗೆ ತರುತ್ತಾರೆ. ಅಲ್ಲಿಂದ ಹಡಗು, ವಿಮಾನದಂತ ಸಾರಿಗೆ ವ್ಯವಸ್ಥೆ ಮೂಲಕ ಒಲಿಂಪಿಕ್ಸ್ ನಡೆಯೋ ದೇಶಗಳಿಗೆ ಸಾಗುತ್ತೆ. ಅಲ್ಲಿ ಪುನಃ ಈ ಒಲಿಂಪಿಕ್ಸ್ ಜ್ಯೋತಿಯ ರಿಲೇ ನಡೆಯುತ್ತೆ. ಒಲಿಂಪಿಕ್ ನಡೆಯೋ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, ಒಲಿಂಪಿಕ್ಸ್ ಓಪನಿಂಗ್ ಸಮಾರಂಭದ ವೇಳೆ ಜ್ಯೋತಿಯನ್ನು ಕ್ರೀಡಾಂಗಣದಲ್ಲಿ ಬೆಳಗಿಸಲಾಗುತ್ತೆ. ಅದು ಒಲಿಂಪಿಕ್ಸ್ ಮುಗಿಯೋವರೆಗೂ ಉರಿಯುತ್ತಲೇ ಇರುತ್ತೆ. ಅಂದಹಾಗೆ ಈಗ ಜಪಾನ್​​​​​ನ ಟೋಕಿಯೋಗೆ ಬಂದಿರೋದು ಕೂಡ ಗ್ರೀಸ್​ನಿಂದ ತಂದ ಬೆಂಕಿಯೇ.. ಜಪಾನ್​ನಲ್ಲಿ ಕಳೆದ ವರ್ಷ ಒಲಿಂಪಿಕ್ಸ್ ನಡೆಯಬೇಕಿತ್ತು. ಹೀಗಾಗಿ ಈ ಜ್ಯೋತಿ ಲಾಟೀನಿನಲ್ಲಿ 2020ರ ಮಾರ್ಚ್​ 20ರಂದು ಗ್ರೀಸ್​​ನಿಂದ ಜಪಾನ್​​​​​​ಗೆ ಬಂದಿತ್ತು. ಇದನ್ನ ಒಲಿಂಪಿಯಾದ ಹೇರಾ ದೇವತೆಯ ಮಂದಿರದಲ್ಲಿ ಮಾರ್ಚ್​ 12ರಂದು ಹೊತ್ತಿಸಲಾಗಿತ್ತು. ಆದ್ರೆ ಕೊರೋನಾ ಹಾವಳಿಯಿಂದಾಗಿ ಕಳೆದ ವರ್ಷ ಒಲಿಂಪಿಕ್ಸ್ ಮುಂದೂಡಿಕೆಯಾಗಿದ್ದರಿಂದ ಆ ಜ್ಯೋತಿಯನ್ನು ಸುರಕ್ಷಿತವಾಗಿ ಇಡಲು ಟೋಕಿಯೋ ಫೈರ್ ಡಿಮಾರ್ಟ್​​ಮೆಂಟ್​​ಗೆ ವಹಿಸಲಾಯ್ತು. ನಂತರದಲ್ಲಿ ಅದನ್ನು ಸುರಕ್ಷಿತವಾಗಿ ಟೋಕಿಯೋದಲ್ಲಿರೋ ಒಲಿಂಪಿಕ್ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ನಂತರ ಇದೇ ವರ್ಷ ಮಾರ್ಚ್​ 25ರಂದು ಫುಕುಶಿಮಾದಿಂದ ರಿಲೇ ಶುರುವಾಗಿತ್ತು. ಅಲ್ಲಿಂದ ಇವತ್ತಿನವರೆಗೆ ಸುಮಾರು 47 ಪ್ರಾಂತ್ಯ, 857 ಮುನ್ಸಿಪಾಲಿಟಿಗಳನ್ನು ದಾಟಿರೋ ಈ ಜ್ಯೋತಿ ಈಗ ಟೋಕಿಯೋಗೆ ಬಂದಿದೆ. ಜಪಾನ್​​ನಲ್ಲಿ ಒಲಿಂಪಿಕ್ ಜ್ಯೋತಿ ಈ ಪ್ರಯಾಣದ ವೇಳೆ ಹಲವಾರು ಅಡಚಣೆಗಳನ್ನು ಎದುರಿಸಿತ್ತು. ಇತ್ತೀಚೆಗೆ ಓರ್ವ ಮಹಿಳೆಯಂತೂ ನೀರು ಎರಚಿ ಜ್ಯೋತಿ ಆರಿಸೋಕೆ ಯತ್ನಿಸಿದ್ರು. ಅಂದಹಾಗೆ ಜಪಾನ್​​ನಲ್ಲಿ ಈ ಒಲಿಂಪಿಕ್ ಜ್ಯೋತಿಯ ರಿಲೇಯಲ್ಲಿ 10 ಸಾವಿರ ಮಂದಿ ಭಾಗಿಯಾಗಿದ್ರು. ಇದೇ ಜುಲೈ 23ರಂದು ಒಲಿಂಪಿಕ್ ಶುರುವಾಗಲಿದೆ.

-masthmagaa.com

Contact Us for Advertisement

Leave a Reply