masthmagaa.com:

ಕೊರೋನಾ ವೈರಸ್​​ಗೆ ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಲಸಿಕೆ 70.4% ಪರಿಣಾಮಕಾರಿ ಅಂತ ಕಂಪನಿ ಘೋಷಿಸಿಕೊಂಡಿದೆ. ಆಕ್ಸ್​ಫರ್ಡ್​-ಆಸ್ಟ್ರಾಝೆನೆಕಾ ಒಟ್ಟು ಎರಡು ಡೋಸ್​ಗಳನ್ನ ಅಭಿವೃದ್ಧಿಪಡಿಸುತ್ತಿದೆ. ಅದರಲ್ಲಿ ಒಂದು ಡೋಸ್ 90% ಪರಿಣಾಮಕಾರಿಯಾಗಿದ್ರೆ, ಮತ್ತೊಂದು ಡೋಸ್ 62% ಪರಿಣಾಮಕಾರಿಯಾಗಿದೆ. ಮೊದಲಿಗೆ ಅರ್ಧ ಡೋಸ್​ ಕೊಟ್ಟಾಗ 62% ಪರಿಣಾಮಕಾರಿ ಅಂತ ಗೊತ್ತಾಗಿದೆ. ಒಂದು ತಿಂಗಳ ಬಳಿಕ ಫುಲ್ ಡೋಸ್ ಕೊಟ್ಟಾಗ 90% ಪರಿಣಾಮಕಾರಿ ಅನ್ನೋದು ಗೊತ್ತಾಗಿದೆ. ಎರಡನ್ನೂ ಸೇರಿಸಿ ತಮ್ಮ ಲಸಿಕೆ ಒಟ್ಟಾರೆಯಾಗಿ 70.4% ಪರಿಣಾಮಕಾರಿ ಅಂತ ಕಂಪನಿ ಹೇಳಿಕೊಂಡಿದೆ. ಲಸಿಕೆ ಪಡೆದ 14 ದಿನಗಳಲ್ಲಿ ಟಿ-ಸೆಲ್​ಗಳು ಗರಿಷ್ಟ ಮಟ್ಟವನ್ನ ತಲುಪಿದ್ರೆ, 28 ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಅಥವಾ ಪ್ರತಿಕಾಯಗಳು ಗರಿಷ್ಠ ಮಟ್ಟವನ್ನ ತಲುಪಿತ್ತು ಅಂತ ಕಂಪನಿ ತಿಳಿಸಿದೆ. ದೇಹದೊಳಗೆ ಯಾವುದಾದ್ರೂ ವೈರಾಣು ಪ್ರವೇಶಿಸಿದ್ರೆ ಅದರ ವಿರುದ್ಧ ಕ್ರಮ ಕೈಗೊಳ್ಳಿವಂತೆ ರೋಗ ನಿರೋಧಕ ವ್ಯವಸ್ಥೆಗೆ ಸೂಚಿಸುವ ಕೆಲಸವನ್ನ ಪ್ರತಿಕಾಯಗಳು ಮಾಡುತ್ತವೆ. ಟಿ-ಸೆಲ್ ಅನ್ನೋದು ಒಂದು ರೀತಿಯ ಬಿಳಿ ರಕ್ತ ಕಣವಾಗಿದ್ದು, ಇವುಗಳು ದೇಹದಲ್ಲಿ ಸೋಂಕು ತಗಲಿರುವ ಸೆಲ್ ಅಥವಾ ಕೋಶಗಳನ್ನ ನಾಶಪಡಿಸುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲಾ ಲಸಿಕೆಗಳು ಈ ಎರಡೂ ಕೆಲಸವನ್ನ ಮಾಡುತ್ತವೆ.

ಅಮೆರಿಕದ ಫೈಝರ್ (Pfizer) ಮತ್ತು ಬಯೋಎನ್​ಟೆಕ್ (BioNTech) ಅಭಿವೃದ್ಧಿಪಡಿಸಿರುವ ಲಸಿಕೆ 95% ಪರಿಣಾಮಕಾರಿ ಅಂತ ಇತ್ತೀಚೆಗೆ ಕಂಪನಿ ಘೋಷಿಸಿತ್ತು. ಅಮೆರಿಕದ ಮೊಡೆರ್ನಾ ಕಂಪನಿ ತನ್ನ ಲಸಿಕೆ 94.5% ಪರಿಣಾಮಕಾರಿ ಅಂತ ಹೇಳಿತ್ತು. ರಷ್ಯಾದ ‘ಸ್ಪುಟ್ನಿಕ್-V’ ಲಸಿಕೆ 92% ಪರಿಣಾಮಕಾರಿ ಅಂತ ಕಂಪನಿ ಹೇಳಿತ್ತು. ಈ ಲಸಿಕೆಗಳಿಗೆ ಹೋಲಿಸಿದ್ರೆ ಆಕ್ಸ್​ಫರ್ಡ್​ ಲಸಿಕೆಯ ಎಫೆಕ್ಟಿವ್​ನೆಸ್​ ಕಮ್ಮಿ ಇದೆ. ಆದ್ರೆ ಆಕ್ಸ್​ಫರ್ಡ್​ ಲಸಿಕೆ ತುಂಬಾ ಚೀಪ್. ಜೊತೆಗೆ ಈ ಲಸಿಕೆಯ ಶೇಖರಣೆ ಮತ್ತು ಸಾಗಣೆ ಕೂಡ ತುಂಬಾ ಸುಲಭ. ಇದನ್ನ ಫ್ರೀಝರ್ ಬದಲು ಫ್ರಿಜ್​ನಲ್ಲೂ ಶೇಖರಿಸಿಡಬಹುದು. ಭಾರತದಲ್ಲಿ ಇದರ ಎರಡು ಡೋಸ್​ಗೆ 1,000 ರೂಪಾಯಿ ಅಥವಾ ಅದಕ್ಕಿಂತಲೂ ಕಮ್ಮಿ ಆಗಬಹುದು. 2021ರಲ್ಲಿ 300 ಕೋಟಿ ಡೋಸ್​ಗಳನ್ನ ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ ಅಂತ ಕಂಪನಿ ಹೇಳಿದೆ.

-masthmagaa.com

Contact Us for Advertisement

Leave a Reply