ನೂತನ ಸಂಸತ್‌ ಭವನವನ್ನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ!

masthmagaa.com:

ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ನೂತನ ಸಂಸತ್‌ ಭವನವನ್ನ ಲೋಕಾರ್ಪಣೆಗೊಳಿಸದ್ದಾರೆ. ಉದ್ಘಾಟನೆಗೂ ಮುನ್ನ ಹೋಮ-ಪೂಜೆಗಳನ್ನ ನೆರವೇರಿಸಿದ್ದು, ಅಧೀನಂ ಸ್ವಾಮೀಜಿಗಳಿಂದ ʻಸೆಂಗೋಲ್‌ʼ ಸ್ವೀಕರಿಸಿ ಅದನ್ನ ಸಂಸತ್‌ ಭವನದ ಒಳಗೆ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ರಾಜದಂಡಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಸಂಪ್ರದಾಯ ಬದ್ದವಾಗಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತ್ರ ಮೋದಿಯವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವ್ರೊಂದಿಗೆ ಸಂಸತ್‌ ಭವನವನ್ನ ಉದ್ಘಾಟಿಸಿದ್ದಾರೆ. ʻಇದೇ ವೇಳೆ ದೇಶದ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯೊಂದಿಗೆ ನಮ್ಮ ಹೃದಯಗಳು ಹೆಮ್ಮೆ, ನಿರೀಕ್ಷೆ ಮತ್ತು ಭರವಸೆಗಳಿಂದ ತುಂಬಿವೆ. ಈ ಕಟ್ಟಡ ಸಬಲೀಕರಣದ ತೊಟ್ಟಿಲಾಗಲಿ ಅಂತ ಮೋದಿ ಹಾರೈಸಿದ್ದಾರೆ. ಇನ್ನು ಇದೇ ವೇಳೆ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಹಗಲಿರುಳು ದುಡಿದ ಕಾರ್ಮಿಕರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡುವ ಮೂಲಕ ಗೌರವ ನೀಡಲಾಗಿದೆ. ಜೊತೆಗೆ ನೂತನ ಸಂಸತ್‌ ಭವನದ ಸ್ಮರಾಣರ್ಥವಾಗಿ 75 ರೂಪಾಯಿ ಕಾಯಿನ್‌ನ್ನ ಮೋದಿ ಬಿಡುಗಡೆ ಮಾಡಿದ್ದಾರೆ. ಅಲ್ದೇ ನೂತನ ಸಂಸತ್‌ ಭವನದಲ್ಲಿ ಸರ್ವ ಧರ್ಮಗಳ ಪ್ರಾರ್ಥನಾ ಸಭೆಯನ್ನ ಆಯೋಜಿಸಿದ್ದು, ಅದ್ರಲ್ಲಿ ಮೋದಿಯವರು ಕೂಡ ಭಾಗವಹಿಸಿದ್ದಾರೆ. ಬಳಿಕ ಭಾಷಣ ಮಾಡಿದ ಮೋದಿ, ಭಾರತ ‘ಪ್ರಜಾಭುತ್ವದ ತಾಯಿ’ಇದ್ದಂತೆ. ಜಗಜ್ಯೋತಿ ಬಸವೇಶ್ವರರ ಅನುಭವ ಮಂಟಪದಲ್ಲಿ ಪ್ರಜಾತಂತ್ರವನ್ನು ಕಾಣಬಹುದಾಗಿತ್ತು. ಹಲವು ವರ್ಷಗಳ ವಿದೇಶಿಗರ ಆಳ್ವಿಕೆ ನಮ್ಮ ಹೆಮ್ಮೆಯನ್ನು ಕಸಿದುಕೊಂಡಿತ್ತು. ಇಂದು ಆ ವಸಾಹತುಶಾಹಿ ಮನಸ್ಥಿತಿಯನ್ನು ಭಾರತ ತೊಡೆದುಹಾಕಿದೆ. ಸೆಂಗೋಲ್‌ನ ಹೆಮ್ಮೆಯನ್ನು ಮರು ಸ್ಥಾಪನೆ ಮಾಡ್ತಿರೋದು ನಮ್ಮ ಅದೃಷ್ಟ. ಸದನದ ಕಲಾಪ ನಡೆದಾಗ ಸೆಂಗೋಲ್ ನಮಗೆ ಸ್ಫೂರ್ತಿ ನೀಡಲಿದೆ, ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಾವು ರೂಪಿಸಬೇಕು ಅಂತ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಇತ್ತ ಹೊಸ ಸಂಸತ್‌ ಕಟ್ಟಡವನ್ನ ಟೀಕಿಸುವ ಭರದಲ್ಲಿ ಬಿಹಾರದ ಆರ್‌ಜೆಡಿ ಪಕ್ಷ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಶವಪೆಟ್ಟಿಗೆ ಹಾಗೂ ಹೊಸ ಸಂಸತ್‌ ಭವನದ ಫೋಟೋಗಳನ್ನ ಹಾಕಿ ʻಏನಿದುʼ? ಅಂತ RJD ಟ್ವೀಟ್‌ ಮಾಡಿದೆ. ಇದಕ್ಕೆ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ʻನೂತನ ಸಂಸತ್‌ ಭವನವನ್ನ ಶವಪೆಟ್ಟಿಗೆಗೆ ಹೋಲಿಸಿರುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದೆ. ಅಲ್ದೇ 2024ರಲ್ಲಿ ಈ ದೇಶದ ಜನರು ನಿಮ್ಮನ್ನು ಶವಪೆಟ್ಟಿಗೆಯಲ್ಲಿ ಹೂತು ಹಾಕುತ್ತಾರೆ ಅಂತ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ. ಸಂಸದ ಅಸಾದುದ್ದೀನ್‌ ಓವೈಸಿ ಕೂಡ ʻಆರ್‌ಜೆಡಿಯವರು ಬೇರೆ ರೀತಿ ಟೀಕೆ ಮಾಡಬೋದಿತ್ತು. ಆರ್‌ಜೆಡಿಗೆ ಯಾವುದೇ ನಿಲುವು ಇಲ್ಲ ಅಂತ ಕಿಡಿಕಾರಿದ್ದಾರೆ. ಇನ್ನು ವಿವಾದ ಭುಗಿಲೇಳುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ RJD, ಪ್ರಜಾಪ್ರಭುತ್ವವನ್ನ ಸಮಾಧಿ ಮಾಡಲಾಗುತ್ತಿದೆ ಅನ್ನೋದನ್ನ ಹೇಳೋಕೆ ಶವಪೆಟ್ಟಿಗೆ ಚಿತ್ರವನ್ನ ಬಳಸಲಾಗಿತ್ತು. ಬೇರೆ ಉದ್ದೇಶದಿಂದ ಅಲ್ಲ. ಸಂಸತ್ತು ಪ್ರಜಾಪ್ರಭುತ್ವದ ದೇವಾಲಯ ಅಂತ ತಮ್ಮ ಡ್ಯಾಮೇಜ್‌ ಕಂಟ್ರೋಲ್‌ ಮಾಡೋಕೆ ಮುಂದಾಗಿದೆ .

-masthmagaa.com

Contact Us for Advertisement

Leave a Reply