masthmagaa.com:

ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಪ್ರಧಾನಿ ಮೋದಿ ಧುಮುಕಿದ್ದು ಇಂದು ಒಟ್ಟು ಮೂರು ರ್‍ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಬಿಹಾರದ ಸಸಾರಾಮ್​ನಲ್ಲಿ ನಡೆದ ಮೊದಲ ರ್‍ಯಾಲಿಯಲ್ಲಿ  ಮಾತನಾಡಿದ ಪ್ರಧಾನಿ ಮೋದಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.

‘ಕೊರೋನಾ ವಿರುದ್ಧ ನಿತೀಶ್ ಕುಮಾರ್ ಸರ್ಕಾರ ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಳ್ಳದಿದ್ದರೆ ಬಿಹಾರದಲ್ಲಿ ಊಹಿಸಲಾಗದಷ್ಟು ಸಾವು ಸಂಭವಿಸಿತ್ತು. ಆದ್ರೆ ಇವತ್ತು ಬಿಹಾರ ಕೊರೋನಾ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುತ್ತಿದೆ. ಕೊರೋನಾ ವಿರುದ್ಧ ಬಿಹಾರದ ಜನತೆ ಹೋರಾಡಿದ ರೀತಿಗೆ ನನ್ನ ಅಭಿನಂದನೆಗಳು.’

‘ಬಿಹಾರ ಈಗ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ. ಲಾಟೀನ್ ಯುಗ (ಆರ್​ಜೆಡಿ ಪಕ್ಷದ ಚಿಹ್ನೆ) ಅಂತ್ಯವಾಗಿದೆ. ಬಿಹಾರವನ್ನು ಈಗ ಯಾರೂ ಅಸಹಾಯಕ ರಾಜ್ಯ ಅಂತ ಕರೆಯಲು ಸಾಧ್ಯವಿಲ್ಲ.’

‘ಕೇಂದ್ರದ ಎನ್​ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದೆ. ಆದ್ರೆ ಕೆಲವರು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ತರ್ತೀವಿ ಅಂತ ಹೇಳ್ತಿದ್ದಾರೆ. ಹೀಗೆ ಹೇಳಿದ ನಂತರವೂ ಅವರು ಬಿಹಾರದಲ್ಲಿ ವೋಟ್​ ಕೇಳುತ್ತಿದ್ದಾರೆ. ಇದು ಬಿಹಾರಕ್ಕೆ ಮಾಡುತ್ತಿರುವ ಅವಮಾನವಲ್ವಾ..? ದೇಶದ ರಕ್ಷಣೆಗಾಗಿ ಬಿಹಾರ ತನ್ನ ಮಕ್ಕಳನ್ನು ಗಡಿಗೆ ಕಳಿಸುತ್ತಿದೆ. ಭಾರತಕ್ಕಾಗಿ ಬಿಹಾರದ ಮಕ್ಕಳು ಗಾಲ್ವಾನ್ ಕಣಿವೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪುಲ್ವಾಮಾದಲ್ಲೂ ಬಿಹಾರದ ಯೋಧರು ಹುತಾತ್ಮರಾಗಿದ್ದಾರೆ. ನಾನು ಅವರ ಪಾದಗಳಿಗೆ ತಲೆ ಬಾಗುತ್ತೇನೆ ಮತ್ತು ಗೌರವ ಸಲ್ಲಿಸುತ್ತೇನೆ.’

‘ಮಂಡಿ ಮತ್ತು ಎಂಎಸ್​ಪಿಗಳು ಕೇವಲ ಒಂದು ನೆಪ ಮಾತ್ರ. ವಾಸ್ತವದಲ್ಲಿ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳನ್ನ ಉಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಲೋಕಸಭೆ ಚುನಾವಣೆಗೂ ಮೊದಲು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುವ ಕೆಲಸ ಶುರುವಾದಾಗ ಅದಕ್ಕೂ ವಿರೋಧ ವ್ಯಕ್ತಪಡಿಸಿದ್ರು. ರಫೇಲ್ ವಿಮಾನಗಳನ್ನ ಖರೀದಿಸಿದಾಗಲೂ ಅವರು ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ರೀತಿಯಲ್ಲಿ ಮಾತನಾಡುತ್ತಿದ್ದರು.’

-masthmagaa.com

Contact Us for Advertisement

Leave a Reply