ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಹೈಡ್ರಾಮ: 90 ಕಾಂಗ್ರೆಸ್‌ ಶಾಸಕರು ರಾಜೀನಾಮೆ!

masthmagaa.com:

ಭಾರತ್‌ ಜೋಡೋ ಯಾತ್ರೆ ಮಾಡ್ತಿರೋ ಕಾಂಗ್ರೆಸ್‌ಗೆ ಈಗ ಆಂತರಿಕ ಬಿಸಿ ದೊಡ್ಡದ್ದಾಗಿ ತಟ್ಟುತ್ತಿದೆ. ರಾಜಸ್ಥಾನ ರಾಜಕೀಯದಲ್ಲಿ, ಅದರಲ್ಲೂ ಅಲ್ಲಿನ ಆಡಳಿತರೂಢ ಕಾಂಗ್ರೆಸ್‌ನಲ್ಲಿ ಭಾರಿ ಹೈಡ್ರಾಮ ನಡೀತಿದೆ. AICC ಅಧ್ಯಕ್ಷ ಸ್ಥಾನಕ್ಕೆ ಅಶೋಕ್‌ ಗೆಹ್ಲೋಟ್‌ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗ್ತಿದ್ದಂತೆ ಅವರ ಸ್ವಪಕ್ಷೀಯ ಎದುರಾಳಿ ಸಚಿನ್‌ ಪೈಲೆಟ್‌ ಸಿಎಂ ಕುರ್ಚಿ ಮೇಲೆ ಕಣ್ಣಾಕಿದ್ರು. ಬಹುತೇಕ ಅವರೇ ರಾಜಸ್ಥಾನದ ಮುಂದಿನ ಸಿಎಂ ಅಂತ ಕೂಡ ಹೇಳಲಾಗ್ತಿತ್ತು. ಆದ್ರೆ ಈಗ ಅದು ಅಷ್ಟು ಸುಲಭ ಅಲ್ಲ ಅನ್ನೋದು ಈಗ ಗೊತ್ತಾಗ್ತಿದೆ. ಯಾಕಂದ್ರೆ ಅಶೋಕ್‌ ಗೆಹ್ಲೋಟ್‌ ಬಣದ ದೊಡ್ಡ ಸಂಖ್ಯೆಯ ಶಾಸಕರು ಸಚಿನ್‌ ಪೈಲೆಟ್‌ ಆಯ್ಕೆಗೆ ವಿರೋಧಿಸಿದ್ದಾರೆ. ಇದರ ಬೆನ್ನಲ್ಲೇ ಈ ಬಿಕ್ಕಟ್ಟನ್ನ ಬಗೆಹರಿಸೋ ಸಲುವಾಗಿ ಹಿರಿಯ ನಾಯಕ ಮಲ್ಲಿಕಾರ್ಜುನಾ ಖರ್ಗೆ ಮತ್ತಿತ್ತರ ನಾಯಕರನ್ನ ನಿನ್ನೆ ಜೈಪುರಕ್ಕೆ ಕಳುಹಿಸಲಾಗಿತ್ತು. ಈ ಬಗ್ಗೆ ಮೀಟಿಂಗ್‌ ಕೂಡ ನಡೆಸಲಾಗಿತ್ತು. ಆದ್ರೆ ಇದು ಕಂಪ್ಲೀಟ್‌ಲೀ ಫೇಲ್‌ ಆಗಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಆ ಸಭೆಗೆ ಅಶೋಕ್‌ ಬಣದ ಸುಮಾರು 90 ಶಾಸಕರು ಅಟ್ಟೆಂಡೇ ಮಾಡಿಲ್ಲ.ಅಲ್ದೇ ಆ 90 ಶಾಸಕರು ಪ್ರತ್ಯೇಕ ಸಭೆ ಬೇರೆ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ಘೋಷಿಸಿ ಆ ಪತ್ರವನ್ನ ಅಲ್ಲಿನ ಸ್ಪೀಕರ್‌ಗೂ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಕೂಡ ಅರ್ಜೆಂಟ್‌ ಮೀಟಿಂಗ್‌ ಮಾಡಿದ್ದು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಗೆಹ್ಲೋಟ್‌ ಹೆಸರನ್ನೇ ಹೊರಗಿಡೋಕೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಲಹೆ ನೀಡಿದೆ. ಅಷ್ಟೇ ಅಲ್ಲ ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ಗೆಹ್ಲೋಟ್ ಬಣದ ಶಾಸಕರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಲದೂ ಅಂತ ಗೆಹ್ಲೋಟ್ ವಿರುದ್ಧವೇ ಪಕ್ಷದ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ. ಅವರ ಮೇಲೆ ನಂಬಿಕೆ ಇಡೋದು ಮತ್ತು ಪಕ್ಷದ ಹೊಣೆಗಾರಿಕೆ ನೀಡೋದು ಒಳ್ಳೇದಲ್ಲ. ಪಕ್ಷದ ಉನ್ನತ ನಾಯಕರು ಅಂದ್ರೆ (ʻಗಾಂಧಿ ಕುಟುಂಬದವರು) ಗೆಹ್ಲೋಟ್ ಸ್ಪರ್ಧೆಯನ್ನು ಮರು ಪರಿಗಣಿಸಬೇಕು ಅಂತ ಒತ್ತಾಯ ಮಾಡಿದ್ದಾರೆ ಅಂತ ಮೂಲಗಳು ತಿಳಿಸಿವೆ. ಅಂದ್ಹಾಗೆ ಇಲ್ಲಿ ಗಾಂಧಿ ಕುಟುಂಬ ಅಧಿಕೃತವಾಗಿ ಎಲ್ಲೂ ತಮ್ಮ ಅಧ್ಯಕ್ಷ ಅಭ್ಯರ್ಥಿ ಅಂತ ಗೆಹ್ಲೋಟ್‌ ಹೆಸರನ್ನ ನೇರವಾಗಿ ಹೇಳಿಲ್ಲ. ಆದ್ರೆ ಗೆಹ್ಲೋಟ್‌ರೇ ಗಾಂಧಿ ಕುಟುಂಬದ ಫೇವರೆಟ್‌ ಅನ್ನೋದು ಕೂಡ ಅಷ್ಟು ಗುಟ್ಟಾಗೇನೂ ಉಳಿದುಕೊಂಡಿಲ್ಲ. ಹೀಗಾಗಿ ಬೇರೆಯವರನ್ನ ನೋಡಿ ಅಂತ ಕಾಂಗ್ರೆಸ್‌ನ ಒಳಗೇ ಸೋನಿಯಾಗಾಂಧಿಗೆ ಸಲಹೆ ನೀಡಲಾಗ್ತಿದೆ. ಇದರ ನಡುವೆಯೇ ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯಪ್ರದೇಶದ ಮಾಜಿ ಸಿಎಂ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್‌ರನ್ನ ಬರುವಂತೆ ಸೂಚನೆ ನೀಡಿದೆ.ಈಗಿನ ಬೆಳವಣಿಗೆಗಳನ್ನ ಗಮನಿಸಿದ್ರೆ ಅಶೋಕ್‌ ಗೆಹ್ಲೋಟ್‌ ಬಹುತೇಕ ಈ ರೇಸ್‌ನಿಂದ ಔಟ್‌ ಆಗುವ ಸಾಧ್ಯತೆ ದಟ್ಟವಾಗಿದೆ. ಇತ್ತ ಇಷ್ಟೆಲ್ಲಾ ಸೂಕ್ಷ್ಮವಾಗಿ ಗಮನಿಸ್ತಿರೋ ಬಿಜೆಪಿ ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗ್ಬೇಕು ಅಂತ ಒತ್ತಾಯ ಮಾಡಿದೆ.

-masthmagaa.com

Contact Us for Advertisement

Leave a Reply