ನಾನು ರಾಯಲ್ ಎನ್​​ಫೀಲ್ಡ್​​​..! ನನ್ನ ಕಥೆ ನಿಮಗೆ ಗೊತ್ತಾ..?

masthmagaa.com:

ಹಾಯ್ ಫ್ರೆಂಡ್ಸ್, ನನ್ ಹೆಸ್ರು ರಾಯಲ್ ಎನ್ ಫೀಲ್ಡ್.. ನನ್ ಹುಟ್ಟು ಹೆಸ್ರು ಇದಲ್ಲ.. ಆರಂಭದಲ್ಲಿ ಬೇರೆ ಹೆಸರುಗಳೂ ಇದ್ವು. ನನ್ನ ಮಾತೃಭೂಮಿ ಇಂಗ್ಲೆಂಡ್.. ಇಂಗ್ಲೆಂಡ್‍ನಲ್ಲಿ ಹುಟ್ಟಿದ ನನ್ನನ್ನು ಭಾರತಕ್ಕೆ ಕರೆತಂದು ಬೆಳೆಸಿದ್ರು. ನನ್ ಬಗ್ಗೆ ನೀವು ಟಿವಿಗಳಲ್ಲೆಲ್ಲಾ ಜಾಹೀರಾತು ನೋಡಿರಲ್ಲ.. ಯಾಕಂದ್ರೆ ನನಗೆ ಅದ್ರ ಅಗತ್ಯನೇ ಇಲ್ಲ.. ನಾನಂದ್ರೆ ನನ್ ಫ್ಯಾನ್ಸ್‍ಗೆ ಎಷ್ಟು ಇಷ್ಟ ಅಂದ್ರೆ ನನಗೋಸ್ಕರ ತಿಂಗಳುಗಟ್ಲೆ ಕಾಯ್ತಾ ಇರ್ತಾರೆ..

1892ರಲ್ಲಿ ಆಲ್ಬರ್ಟ್ ಏಡಿ ಮತ್ತು ರಾಬರ್ಟ್ ವಾಲ್ಕರ್ ಸ್ಮಿತ್ ಅನ್ನೋರು ನನ್ನ ಮಾತೃಸಂಸ್ಥೆಯನ್ನು ಹುಟ್ಟುಹಾಕಿದ್ರು. ಅದಕ್ಕೆ ಎಡಿ ಮೆನುಫ್ಯಾಕ್ಚರಿಂಗ್ ಲಿಮಿಟೆಡ್ ಅಂತ ಕರೆಯಲಾಗ್ತಾ ಇತ್ತು. ಆರಂಭದಲ್ಲಿ ಈ ಸಂಸ್ಥೆ ರಾಯಲ್ ಸ್ಮಾಲ್ ಆಮ್ರ್ಸ್ ಫ್ಯಾಕ್ಟರಿಗೆ ಬಂದೂಕುಗಳ ಬಿಡಿಭಾಗಗಳನ್ನು ಸಿದ್ಧಪಡಿಸ್ತಿತ್ತು. ನಂತ್ರ 1896ರಲ್ಲಿ ಎಡಿ ಮೆನುಫ್ಯಾಕ್ಟರಿಂಗ್ ಕಂಪನಿ ಅಡಿಯಲ್ಲೇ ದಿ ನ್ಯು ಎನ್‍ಫೀಲ್ಡ್ ಸೈಕಲ್ ಕಂಪನಿಯನ್ನು ಸ್ಥಾಪಿಸಲಾಯ್ತು. ಇದು ಸೈಕಲ್ ಮತ್ತು ಅದರ ಬಿಡಿಭಾಗಗಳನ್ನು ಉತ್ಪಾದಿಸುತ್ತಿತ್ತು. 1899ರಲ್ಲಿ ನನ್ನ ಕಂಪನಿಗೆ ಹೊಸ ಐಡಿಯಾ ಹೊಳೀತು.. 4 ಚಕ್ರಗಳಿರೋ ಸೈಕಲ್ ನಿರ್ಮಿಸಿತು. ಇದಾದ 2 ವರ್ಷಗಳ ಬಳಿಕ 1901ರಲ್ಲಿ ಸೈಕಲ್‍ಗೇ ಇಂಜಿನ್ ಜೋಡಿಸಿ ನನ್ನನ್ನು ಸೃಷ್ಟಿಸಿದ್ರು. ಇದ್ರಲ್ಲಿ ಮಿನರ್ವಾ ಎಂಬ ಕಂಪನಿಯ ಇಂಜಿನ್ ಬಳಸಲಾಗಿತ್ತು.

1903ರಲ್ಲಿ ನನ್ನ ಸಂಸ್ಥೆ ಕಾರುಗಳ ಉತ್ಪಾದನೆಗೂ ಕೈ ಹಾಕಿತು. ಇದ್ರಿಂದ ತುಂಬಾ ನಷ್ಟವನ್ನು ಕೂಡ ಅನುಭವಿಸಬೇಕಾಯ್ತು. ಹೀಗಾಗಿ 1907ರಲ್ಲಿ ತನ್ನ ಕಾರು ಉತ್ಪಾದನಾ ಸಂಸ್ಥೆಯನ್ನು ಆಲ್‍ಡೇ & ಆನಿಯನ್‍ಗೆ ಮಾರಿಬಿಡ್ತು. 1913ರಲ್ಲಿ ನನ್ನ ಮೇಲೆ ಹೆಚ್ಚಿನ ಗಮನ ಕೊಟ್ಟ ಬಳಿಕ 1914ರಲ್ಲಿ ದೊಡ್ಡ ಯಶಸ್ಸು ಸಿಕ್ತು. ಅದೇ 1914ರ ಮಹಾಯುದ್ಧ. ಈ ವೇಳೆ ಬ್ರಿಟಿಷ್ ವಾರ್ ಡಿಪಾರ್ಟ್‍ಮೆಂಟ್ ಕಡೆಯಿಂದ ನನಗಾಗಿ ಆರ್ಡರ್ ಬಂತು.. ಇದೇ ವೇಳೆ ರಷ್ಯಾ ಸರ್ಕಾರದಿಂದಲೂ ನನಗಾಗಿ ದೊಡ್ಡ ದೊಡ್ಡ ಆರ್ಡರ್ ಬಂತು. ಎನ್‍ಫೀಲ್ಡ್ ಹೆಸರಲ್ಲಿ ನಾನು ಇಡೀ ವಿಶ್ವಕ್ಕೆ ಪ್ರಸಿದ್ಧವಾಗ್ತಾ ಹೋದೆ. 1931ರಲ್ಲಿ ನನಗೆ ಹೊಸ ರೂಪ ನೀಡಿ, ಬುಲೆಟ್ ಅಂತ ಕರೆಯಲಾಯ್ತು.. ಆಗ ನನ್ನ ಲೋಗೋ ಕೂಡ ಫಿರಂಗಿಯಾಗಿತ್ತು. 2ನೇ ಮಹಾಯುದ್ಧದ ವೇಳೆಯಂತೂ ಬ್ರಿಟಿಷ್ ಆಡಳಿತ ದೊಡ್ಡ ಪ್ರಮಾಣದಲ್ಲಿ ನನಗಾಗಿ ಬೇಡಿಕೆ ಇಟ್ರು. 2ನೇ ವಿಶ್ವಯುದ್ಧದಲ್ಲಂತೂ ನನ್ನನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಲಾಯ್ತು.

1949ರಲ್ಲಿ ನಾನು ಭಾರತಕ್ಕೆ ಬಂದೆ.. ಆದ್ರೆ ಆರಂಭದಲ್ಲಿ ಜನ ನನ್ನ ಅಷ್ಟಾಗಿ ಇಷ್ಟ ಪಡ್ತಾನೇ ಇರಲಿಲ್ಲ. ಜನರ ಮನಸ್ಸು ಗೆಲ್ಲಲು ನನಗೆ 5 ವರ್ಷ ಬೇಕಾಯ್ತು.. 1954ರಲ್ಲಿ ಸೇನೆ ಮತ್ತು ಪೊಲೀಸರ ಬಳಕೆಗೆ ಸರ್ಕಾರ ನನ್ನನ್ನು ನೀಡಿದಾಗ ಜನರಿಗೂ ಇಷ್ಟವಾಯ್ತು. ಆಗ 350 ಸಿಸಿಯ 800 ಬೈಕ್‍ಗಳನ್ನು ತರಿಸಿಕೊಂಡಿದ್ರು. 1955ರಲ್ಲಿ ನನ್ನ ಸಂಸ್ಥೆ ಮದ್ರಾಸ್ ಮೋಟಾರ್ಸ್ ಸಂಸ್ಥೆ ಜೊತೆ ಪಾಲುದಾರಿಕೆಯಲ್ಲಿ ನನ್ನ ಉತ್ಪಾದನೆ ಶುರುವಾಯ್ತು. ಈ ರೀತಿ ಭಾರತದಲ್ಲಿ ರಾಯಲ್ ಎನ್‍ಫೀಲ್ಡ್ ಹೆಸರಲ್ಲಿ ನನ್ನ ಉತ್ಪಾದನೆ ಮಾಡೋಕೆ ಶುರು ಮಾಡಿದ್ರು. ಮದ್ರಾಸ್ ಮೋಟಾರ್ಸ್ ಮೊದಲಿಗೆ 350 ಸಿಸಿಯಿದ್ದ ನನ್ನನ್ನು ಮಾರಾಟ ಮಾಡಿದ್ರು. ನನ್ನ ಬಿಡಿಭಾಗಗಳನ್ನು ಇಂಗ್ಲೆಂಡ್‍ನಿಂದಲೇ ತರಿಸಿಕೊಳ್ಳಲಾಗ್ತಿತ್ತು. ನಂತರ 1962ರಲ್ಲಿ ನನ್ನ ಎಲ್ಲಾ ಬಿಡಿಭಾಗಗಳನ್ನು ಭಾರತದಲ್ಲೇ ಉತ್ಪಾದಿಸೋಕೆ ಶುರು ಮಾಡಲಾಯ್ತು. ಈ ನಡುವೆ ಇಂಗ್ಲೆಂಡ್‍ನಲ್ಲಿ ನನ್ನ ಕಂಪನಿಗೆ ಭಾರಿ ಲಾಸ್ ಆಯ್ತು. ಹೀಗಾಗಿ 1971ರಲ್ಲಿ ನನ್ನ ತವರಿಗೆ ಬೀಗ ಹಾಕಲಾಯ್ತು. ಅಂದ್ರೆ ಇಂಗ್ಲೆಂಡ್‍ನಲ್ಲಿ ನನ್ನ ಉತ್ಪಾದನೆಯೇ ನಿಂತು ಹೋಯ್ತು. ಅಂದ್ರೆ ಅಲ್ಲಿ ಉತ್ಪಾದನೆ ನಿಲ್ಲಿಸಿಬಿಟ್ರು.

ಆದ್ರೆ ಭಾರತದಲ್ಲಿ ನನ್ನ ಉತ್ಪಾದನೆಯನ್ನು ಮುಂದುವರಿಸಲಾಯ್ತು. ಭಾರತದಲ್ಲೂ ನನ್ನ ಸಂಸ್ಥೆಗೆ ನಷ್ಟವಾಗ್ತಾ ಇತ್ತು. ಹೀಗಾಗಿಯೇ ಕಂಪನಿ 1994ರಲ್ಲಿ ಈಚರ್ ಗ್ರೂಪ್‍ನಲ್ಲಿ ಲೀನವಾಯ್ತು. ಇದಾದ ಬಳಿಕ ಈಚರ್ ಗ್ರೂಪ್ ಮಾಲೀಕ ವಿಕ್ರಂ ಲಾಲ್ ಅವರ ಪುತ್ರ ಸಿದ್ಧಾರ್ಥ್ ಪಾಲ್ 2000ನೇ ಇಸವಿಯಲ್ಲಿ ಹೊಸ ಹೊಸ ಔಟ್‍ಲೆಟ್‍ಗಳನ್ನು ಸ್ಥಾಪಿಸಿ, ಮಾರ್ಕೆಟಿಂಗ್ ಮೂಲಕ ನನ್ನ ಮಾರಾಟವನ್ನು ಹೆಚ್ಚಿಸಿದ್ರು. ಸಿದ್ಧಾರ್ಥ್ ಸಮಯಕ್ಕೆ ತಕ್ಕಂತೆ ನನ್ನ ಡಿಸೈನ್ ಕೂಡ ಚೇಂಜ್ ಮಾಡ್ತಾ ಬಂದ್ರು. ಆಗಾಗ ನನ್ನ ಸಂಸ್ಥೆ ವಿವಿಧ ಬೈಕ್ ರೇಡ್‍ಗಳನ್ನು ಆಯೋಜಿಸುತ್ತೆ. ಇದ್ರಿಂದ ಜನರಲ್ಲೂ ನನ್ನ ಬಗ್ಗೆ ಕ್ರೇಜ್ ಹೆಚ್ಚಾಗುತ್ತೆ. ಈಗ ಕೇವಲ ಭಾರತ ಮಾತ್ರವಲ್ಲ.. ಅಮೆರಿಕ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳಲ್ಲಿ ನನ್ನ ಮಾರಾಟವಾಗುತ್ತೆ. ನನಗೆ ಅಭಿಮಾನಿಗಳಿದ್ದಾರೆ. ವರ್ಷವೊಂದರಲ್ಲಿ ಲಕ್ಷಗಟ್ಟಲೆ ಜನ ಬಂದು ನನ್ನನ್ನು ಖರೀದಿಸ್ತಾರೆ..
-masthmagaa.com

Contact Us for Advertisement

Leave a Reply