ಬಂದ್ರು ಬೈದಾಡಿಕೊಂಡ್ರು..ಹೋದ್ರು..! ಆಣೆ ಮಾಡಲೇ ಇಲ್ಲ..!

ಮೈಸೂರು: ಚಾಮುಂಡಿ ಬೆಟ್ಟದಲ್ಲೇ ಬಂದು ಆಣೆ ಮಾಡ್ತೀವಿ ಎಂದು ಬೈದಾಡಿಕೊಂಡಿದ್ದ ಜೆಡಿಎಸ್ ನಾಯಕ ಸಾರಾ ಮಹೇಶ್ ಮತ್ತು ಅನರ್ಹ ಶಾಸಕ ವಿಶ್ವನಾಥ್ ಇಬ್ಬರೂ ಇವತ್ತು ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು. ಆದ್ರೆ ಇಬ್ಬರೂ ಪೂಜೆ ಮಾಡಿಸಿಕೊಂಡು, ದೂರದಿಂದಲೇ ಪರಸ್ಪರ ಆರೋಪಿಸಿಕೊಂಡು, ಆಣೆ ಮಾಡದೆಯೇ ವಾಪಸ್ ಆಗಿದ್ದಾರೆ.

ಮೊದಲು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಚ್.ವಿಶ್ವನಾಥ್ ಮಾತನಾಡಿ, ನನ್ನನ್ನು ₹ 25 ಕೋಟಿಗೆ ಖರೀದಿಸಿದ್ದಾರೆ. ಅವರನ್ನು ಕರೆದುಕೊಂಡು ಬರುತ್ತೇನೆ ಅಂತ ಸಾರಾ ಮಹೇಶ್ ಹೇಳಿದ್ರು. ಅದಕ್ಕಾಗಿ ಬಂದಿದ್ದೇನೆಯೇ ಹೊರತು ಆಣೆ ಪ್ರಮಾಣ ಮಾಡೋಕೆ ಅಲ್ಲ ಅಂದ್ರು. ಜೊತೆಗೆ ನೀವು ನನ್ನ ಹೇಳಿಕೆಯನ್ನು ತಿರುಚಿದ್ದೀರಿ ಎಂದು ಮಾಧ್ಯಮಗಳ ವಿರುದ್ಧವೇ  ಉರಿದುರಿದು ಬಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಾರಾ ಮಹೇಶ್ ಕೂಡ, ನನ್ನ ವಿರುದ್ದ ಮಾಡಿರುವ ಆರೋಪ ನಿಜ ಎಂದು ಹಾಗೂ‌ ಅವರು ಹಣ ಪಡೆದೇ ಇಲ್ಲವೆಂದು ಆಣೆ ಮಾಡಬೇಕಿತ್ತು. ಆದ್ರೆ ಅವರು ಆಣೆ ಮಾಡದೇ ಹೋಗಿದ್ದಾರೆ. ವಿಶ್ವನಾಥ್ ಅವರನ್ನು ಖರೀದಿಸಿದವರನ್ನು ಕರೆತರುತ್ತೇನೆ ಅಂತ ನಾನೆಲ್ಲೂ ಹೇಳಿಲ್ಲ ಎಂದು ಭಾವುಕರಾಗಿ ಕಣ್ಣೀರಿಟ್ಟರು.

Contact Us for Advertisement

Leave a Reply