ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂಗೆ ಪ್ರಧಾನಿ ಮೋದಿ ಹೆಸರು!

masthmagaa.com:

ಗುಜರಾತ್​ನ ಮೊಟೆರಾದಲ್ಲಿರೋ ಸರ್ದಾರ್ ಪಟೇಲ್ ಸ್ಟೇಡಿಯಂನ ಹೆಸರನ್ನ ‘ನರೇಂದ್ರ ಮೋದಿ ಸ್ಟೇಡಿಯಂ’ ಅಂತ ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ಮೋದಿ ಗುಜರಾತ್​ ಸಿಎಂ ಆಗಿದ್ದಾಗ ಗುಜರಾತ್ ಕ್ರಿಕೆಟ್​ ಅಸೋಸಿಯೇಷನ್​ನ ಅಧ್ಯಕ್ಷರಾಗಿದ್ದರು. ಹೀಗಾಗಿ ಈ ಸ್ಟೇಡಿಯಂಗೆ ಮೋದಿ ಹೆಸರನ್ನೇ ಇಡಲಾಗಿದೆ. ಪ್ರಧಾನಿ ಮೋದಿ ಹೆಸರನ್ನ ಹೀಗೆ ಇಟ್ಟಿರೋದು ಬಹುಶಃ ಇದೇ ಮೊದಲು. ಅಂದ್ಹಾಗೆ ಇದು ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಹಿಂದೆ 90 ಸಾವಿರ ಸಿಟಿಂಗ್ ಕೆಪಾಸಿಟಿಯ ಆಸ್ಟ್ರೇಲಿಯಾದ ಮೆಲ್ಬರ್ನ್ಸ್ ಕ್ರಿಕೆಟ್ ಗ್ರೌಂಡ್​ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.32 ಲಕ್ಷ ಪ್ರೇಕ್ಷಕರು ಕೂರಬಹುದು. ಇದನ್ನ 63 ಎಕರೆ ಪ್ರದೇಶದಲ್ಲಿ ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣವನ್ನ ನವೀಕರಣ ಮಾಡುವ ಉದ್ದೇಶದಿಂದ 2015ರಲ್ಲಿ ಮುಚ್ಚಲಾಗಿತ್ತು. ಸದ್ಯ ನವೀಕರಣಗೊಂಡಿರೋ ಈ ಮೈದಾನದಲ್ಲಿ ಭಾರತ-ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್ (ಡೇ ನೈಟ್​ ಟೆಸ್ಟ್)​ ನಡೀತಿದೆ. ಅಹಮದಾಬಾದ್​ ಸಮೀಪದ ಮೊಟೆರಾದಲ್ಲಿ ಈ ಸ್ಟೇಡಿಯಂ ಇದೆ. ಜೊತೆಗೆ ಈ ಸ್ಟೇಡಿಯಂ ಸರ್ದಾರ್​ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್​​ ಎನ್​ಕ್ಲೇವ್​​ನ ಭಾಗ ಕೂಡ ಹೌದು. ಈ ಸ್ಪೋರ್ಟ್ಸ್​ ಎನ್​ಕ್ಲೇವ್​ಗೆ ಇವತ್ತು ಭೂಮಿ ಪೂಜೆ ನೆರವೇರಿಸಲಾಯ್ತು.

ಅಂದ್ಹಾಗೆ ನವೀಕರಣಗೊಂಡ ಈ ಸ್ಟೇಡಿಯಂ ಅನ್ನ ಇವತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮತ್ತಿತರರು ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘2018ರಲ್ಲಿ ನಾನು ಆಸ್ಟ್ರೇಲಿಯಾಗೆ ಹೋದಾಗ 90 ಸಾವಿರ ಸಿಟಿಂಗ್ ಕೆಪಾಸಿಟಿಯ ಮೆಲ್ಬರ್ನ್​ ಕ್ರಿಕೆಟ್​ ಗ್ರೌಂಡೇ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅನ್ನೋದು ನನ್ನ ಗಮನಕ್ಕೆ ಬಂತು. ಇದೀಗ 1.32 ಲಕ್ಷ ಸಿಟಿಂಗ್ ಕೆಪಾಸಿಟಿಯ ಈ ಕ್ರೀಡಾಂಗಣ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗ್ತಿರೋದಕ್ಕೆ ಹೆಮ್ಮೆ ಅನಿಸ್ತಿದೆ’ ಅಂತ ಹೇಳಿದ್ರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್​ ಎನ್​ಕ್ಲೇವ್​ ಮತ್ತು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂ ಜೊತೆಗೆ ನರನ್​ಪುರದಲ್ಲಿ ಒಂದು ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಅನ್ನ ಕೂಡ ನಿರ್ಮಿಸಲಾಗುತ್ತೆ. ಈ ಮೂರರಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡೆಯನ್ನ ಆಯೋಜಿಸಬಹುದು. ಅಹಮದಾಬಾದ್ ಭಾರತದ​ ಸ್ಪೋರ್ಟ್ಸ್​ ಸಿಟಿ ಆಗುತ್ತೆ. ಮೋದಿ ಗುಜರಾತ್ ಸಿಎಂ ಆಗಿದ್ದಾಗ ನನ್ನ ಸಲಹೆ ಮೇರೆಗೆ ಗುಜರಾತ್ ಕ್ರಿಕೆಟ್​ ಅಸೋಸಿಯೇಷನ್​ನ ಅಧ್ಯಕ್ಷ ಸ್ಥಾನ ವಹಿಸಿಕೊಂಡ್ರು. ಇಲ್ಲಿ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ನಿರ್ಮಿಸಬೇಕು ಅನ್ನೋದು ಮೋದಿಯವರ ಆಸೆಯಾಗಿತ್ತು. 1.32 ಲಕ್ಷ ಸಿಟಿಂಗ್ ಕೆಪಾಸಿಟಿಯ ಈ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಅಂತಾನೇ ಗುರುತಿಸಲ್ಪಡುತ್ತೆ’ ಅಂತ ಹೇಳಿದ್ರು.

ಇನ್ನು ಸರ್ದಾರ್ ಪಟೇಲ್ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಅಂತ ಮರುನಾಮಕರಣ ಮಾಡಿದ್ದಕ್ಕೆ ಕಾಂಗ್ರೆಸ್​ ನಾಯಕರು ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಇದು ಸರ್ದಾರ್ ಪಟೇಲ್​ಗೆ ಮಾಡಿದ ಅವಮಾನ ಅಂತೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ‘ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಯಾವತ್ತಾದ್ರೂ ಜಗತ್ತಿನ ಅತಿ ಎತ್ತರದ ಪ್ರತಿಮೆಯಾದ ಸರ್ದಾರ್​ ವಲ್ಲಭಭಾಯಿ ಪಟೇಲ್​ ಪ್ರತಿಮೆ ಬಗ್ಗೆ ಮಾತನಾಡಿದ್ದಾರಾ? ಯಾವತ್ತಾದ್ರೂ ಅಲ್ಲಿಗೆ ಹೋಗಿದ್ದಾರಾ?’ ಅಂತ ಪ್ರಶ್ನಿಸಿದ್ಧಾರೆ.

-masthmagaa.com

Contact Us for Advertisement

Leave a Reply