masthmagaa.com:

2018ರಲ್ಲಿ ನಡೆದ ಇಂಟೀರಿಯರ್ ಡಿಸೈನರ್​ ಮತ್ತು ಆತನ ತಾಯಿಯ ಆತ್ಮಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಂದ ಅರೆಸ್ಟ್ ಆಗಿದ್ದ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್​ನಲ್ಲಿ ಗೆಲುವು ಸಿಕ್ಕಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಅರ್ನಬ್ ಮತ್ತು ಇನ್ನಿಬ್ಬರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮೂವರಿದಂಲೂ ತಲಾ 50 ಸಾವಿರ ರೂಪಾಯಿ ಬಾಂಡ್ ಅನ್ನು ಬರೆಸಿಕೊಂಡು ತಕ್ಷಣವೇ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಕೋರ್ಟ್​ ಸೂಚಿಸಿದೆ. ಇಷ್ಟೇ ಅಲ್ಲ, ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್​ಗೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್​ ಮಹಾರಾಷ್ಟ್ರ ಸರ್ಕಾರಕ್ಕೂ ಕಠಿಣ ಸಂದೇಶ ರವಾನಿಸಿದೆ. ‘ವೈಯಕ್ತಿಕ ಸ್ವಾತಂತ್ರ್ಯವನ್ನ ನಿರಾಕರಿಸಿರುವ ಪ್ರಕರಣದಲ್ಲಿ ಹೈಕೋರ್ಟ್​ ಸರಿಯಾಗಿ ನಡೆದುಕೊಂಡಿಲ್ಲ. ಒಂದ್ವೇಳೆ ಇವತ್ತು ಸುಪ್ರೀಂಕೋರ್ಟ್​ ಮಧ್ಯಪ್ರವೇಶಿಸದಿದ್ದರೆ ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ವಿನಾಶಗೊಳಿಸುವ ಹಾದಿಯಲ್ಲಿ ಹೋಗುತ್ತಿದ್ದೆವು. ಯಾರದ್ದಾದ್ರೂ ಬಾಯಿ ಮುಚ್ಚಿಸಬೇಕು ಅಂದ್ರೆ ನಮ್ಮ ರಾಜ್ಯ ಸರ್ಕಾರಗಳು ಈ ರೀತಿ ಮಾಡೋದಾ..? ನಿಮಗೆ ಇಷ್ಟ ಇಲ್ಲ ಅಂದ್ರೆ ಆ ಚಾನಲ್ ನೋಡಬೇಡಿ. ನಾನು ಕೂಡ ಆ ಚಾನಲ್ ನೋಡಲ್ಲ. ಇಂತಹ ವಿಚಾರದಲ್ಲಿ ವ್ಯಕ್ತಿಯನ್ನ ಟಾರ್ಗೆಟ್​ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸಿದ್ರೆ, ಅಂಥವರಿಗೆ ಸುಪ್ರೀಂಕೋರ್ಟ್ ಇದೆ ಅನ್ನೋ ಸಂದೇಶವನ್ನ ರವಾನಿಸೋಣ’ ಅಂತ ಜಸ್ಟಿಸ್ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಸುಪ್ರೀಂಕೋರ್ಟ್ ಆದೇಶದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.

-masthmagaa.com

Contact Us for Advertisement

Leave a Reply