ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹತ್ವದ ಸಾಧನೆ..! ಏನು ಗೊತ್ತಾ?

masthmagaa.com:

ಭಾರತದ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಟೋಕ್ಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಮ್ಮೆ ಪದಕ ತಂದು ಕೊಟ್ಟಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಬಿಂಗ್​​ಜಿಯಾವೋರನ್ನು 21-13, 21-15 ನೇರ ಸೆಟ್​​​ಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಮೂಲಕ ಟೋಕ್ಯೋ ಒಲಿಂಪಿಕ್ಸ್​​ನಲ್ಲಿ ಭಾರತ 2 ಪದಕ ಗೆದ್ದಂತಾಗಿದೆ. ಈ ಹಿಂದೆ ವೇಯ್ಟ್​ಲಿಫ್ಟರ್ ಮೀರಾಭಾಯಿ ಚಾನು ಸಿಲ್ವರ್ ಪದಕ ಗೆದ್ದುಕೊಂಡಿದ್ರು. ಅಂದಹಾಗೆ ಪಿವಿ ಸಿಂಧು 2016ರ ರಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಇದೀಗ ಕಂಚು ಗೆದ್ದಿದ್ದು ಒಲಿಂಪಿಕ್ಸ್​ನಲ್ಲಿ ಎರಡು ಪದಕಗಳನ್ನು ಪಡೆದ ಏಕೈಕ ಭಾರತೀಯ ಯುವತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಪಿವಿ ಸಿಂಧು ಭಾರತದ ಹೆಮ್ಮೆ. ನಮ್ಮ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಅಂತ ಹೇಳಿದ್ದಾರೆ.

ಇನ್ನು ಪುರುಷರ ವಿಭಾಗದ ಹಾಕಿ ಕ್ವಾರ್ಟರ್​​ಫೈನಲ್ ಪಂದ್ಯದಲ್ಲಿ ಭಾರತ ಬ್ರಿಟನ್​​ನ್ನು ಸೋಲಿಸಿ, ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ವಿಜಯಪತಾಕೆ ಹಾರಿಸಿದೆ. ಆಗಸ್ಟ್​​ 3ರಂದು ನಡೆಯಲಿರುವ ಸೆಮಿಫೈನಲ್​​ನಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಅಂದಹಾಗೆ ಹಾಕಿಯಲ್ಲಿ ಭಾರತ ಚಾಂಪಿಯನ್ನೇ.. 1928ರಲ್ಲಿ ಮೊದಲ ಒಲಿಂಪಿಕ್ಸ್​​ ಚಿನ್ನದ ಪದಕ ಗೆದ್ದ ಭಾರತ 1980ರವರೆಗೆ ಒಟ್ಟು 8 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕ ಗೆದ್ದಿವೆ. ಆದ್ರೆ 1980ರ ಮಾಸ್ಕೋ ಒಲಿಂಪಿಕ್ಸ್ ಬಳಿಕ ಭಾರತದ ಹಾಕಿ ತಂಡ ಈವರೆಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿಲ್ಲ..ಹೀಗಾಗಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸೆಮಿಫೈನಲ್​ಗೆ ಏರಿದಂತಾಗಿದೆ.

-masthmagaa.com

Contact Us for Advertisement

Leave a Reply