ಮೋದಿಯಂತೆ ‘ಕೋವಾಕ್ಸಿನ್’ ಲಸಿಕೆ ಹಾಕಿಸಿಕೊಂಡ ಕೇಂದ್ರ ಆರೋಗ್ಯ ಸಚಿವ

masthmagaa.com:

ಪ್ರಧಾನಿ ಮೋದಿ ಭಾರತ್​ ಬಯೋಟೆಕ್​ ಕಂಪನಿಯ ‘ಕೋವಾಕ್ಸಿನ್​’ ಲಸಿಕೆಯನ್ನ ಹಾಕಿಸಿಕೊಂಡ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಅದೇ ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ. ದೆಹಲಿಯ ಹಾರ್ಟ್​ ಅಂಡ್ ಲಂಗ್​ ಇನ್​ಸ್ಟಿಟ್ಯೂಟ್​ಗೆ ತಮ್ಮ ಪತ್ನಿ ಜೊತೆ ಹೋಗಿ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಈ ಮೂಲಕ ಲಸಿಕೆ ಬಗ್ಗೆ, ಅದ್ರಲ್ಲೂ ಕೋವಾಕ್ಸಿನ್ ಲಸಿಕೆ ಬಗ್ಗೆ ಜನರಿಗಿರೋ ಭಯ, ಅನುಮಾನಗಳನ್ನ ತೆಗೆದು ಹಾಕೋ ಪ್ರಯತ್ನ ಮಾಡಿದ್ದಾರೆ. ಲಸಿಕೆ ಪಡೆದ ಬಳಿಕ ಮಾತನಾಡಿದ ಡಾ. ಹರ್ಷವರ್ಧನ್, ‘ನಾವು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದೇವೆ. ಕೊರೋನಾ ಲಸಿಕೆ ಸಂಜೀವಿನಿ ರೀತಿ ಕೆಲಸ ಮಾಡುತ್ತೆ. ಹನುಮಂತ ಭಾರತಕ್ಕೆ ಬಂದು ಸಂಜೀವಿನಿ ಪರ್ವತವನ್ನೇ ಹೊತ್ತೊಯ್ದರು. ಈಗ ಈ ಸಂಜೀವಿನಿ ನಿಮ್ಮ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ನಾವು ಲಸಿಕೆ ಚುಚ್ಚಿಸಿಕೊಂಡಿದ್ದಕ್ಕೆ 250 ರೂಪಾಯಿ ದುಡ್ಡು ಕೊಟ್ಟಿದ್ದೇವೆ. ಯಾರಿಗೆಲ್ಲಾ ಸಾಧ್ಯವೋ ಅವರು ಖಾಸಗಿ ಆಸ್ಪತ್ರೆಗೆ ಹೋಗಿ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ. ನಿನ್ನೆ ಒಂದೇ ದಿನ ಕೋವಿನ್ ಪ್ಲಾಟ್​​ಫಾರ್ಮ್​ನಲ್ಲಿ 34 ಲಕ್ಷ ಫಲಾನುಭವಿಗಳು ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ’ ಅಂತ ಹೇಳಿದ್ರು. ಅಂದ್ಹಾಗೆ ಈ ಹಿಂದೆ ಬ್ರೆಜಿಲ್​ಗೆ ಭಾರತ ಲಸಿಕೆ ಕಳಿಸಿದಾಗ ಅಲ್ಲಿನ ಅಧ್ಯಕ್ಷ ಜೈರ್ ಬೋಲ್ಸ್​ನಾರೋ, ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದ ರೀತಿಯಲ್ಲಿ ಟ್ವೀಟ್ ಮಾಡಿದ್ದರು.

ಇನ್ನು ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಸದ ಫಾರೂಕ್ ಅಬ್ದುಲ್ಲಾ, ಬಿಹಾರದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಉತ್ತರಪ್ರದೇಶದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಚೆನ್ನೈನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಮುಂತಾದವರು ಇವತ್ತು ಕೊರೋನಾ ಲಸಿಕೆ ಚುಚ್ಚಿಸಿಕೊಂಡರು.

-masthmagaa.com

Contact Us for Advertisement

Leave a Reply