ರಷ್ಯಾ ಮೇಲೆ ಅಮೆರಿಕ ಗದಾ ಪ್ರಹಾರ: ಪ್ರತೀಕಾರದ ವಾರ್ನಿಂಗ್ ಕೊಟ್ಟ ರಷ್ಯಾ

masthmagaa.com:

ನಿನ್ನೆಯ ಫುಲ್​ ನ್ಯೂಸ್​​ನಲ್ಲಿ ರಷ್ಯಾ ಮೇಲೆ ಅಮೆರಿಕ ಕೆಲವೊಂದು ಸ್ಯಾಂಕ್ಷನ್​ಗಳನ್ನ ಹೇರುತ್ತೆ ಅಂತ ಹೇಳಿದ್ವಿ. ಆ ಸ್ಯಾಂಕ್ಷನ್​ಗಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಈಗ ಒಪ್ಪಿಗೆ ಕೊಟ್ಟಿದ್ದಾರೆ, ಸಹಿ ಹಾಕಿದ್ದಾರೆ. ಈ ಸ್ಯಾಂಕ್ಷನ್ಸ್ ಪ್ರಕಾರ, ರಷ್ಯಾದ ಕೆಲವೊಂದು ಕಂಪನಿಗಳನ್ನ ಅಮೆರಿಕ ಬ್ಲಾಕ್​ಲಿಸ್ಟ್​ಗೆ ಸೇರಿಸಿದೆ. ಅಮೆರಿಕದಲ್ಲಿದ್ದ ರಷ್ಯಾದ ಕೆಲವೊಂದು ರಾಜತಾಂತ್ರಿಕ ಅಧಿಕಾರಿಗಳನ್ನ ಗಡಿಪಾರು ಮಾಡಲಿದೆ. ಜೊತೆಗೆ ರಷ್ಯಾದ ಸೆಂಟ್ರಲ್ ಬ್ಯಾಂಕ್​, ನ್ಯಾಷನಲ್ ವೆಲ್ತ್ ಫಂಡ್ ಮತ್ತು ಆರ್ಥಿಕ ಇಲಾಖೆಯಿಂದ ಅಮೆರಿಕದ ಬ್ಯಾಂಕ್​ಗಳು ಸಾವರಿನ್ ಬಾಂಡ್​ಗಳನ್ನ ಖರೀದಿಸದಂತೆ ನಿಷೇಧ ಹೇರಿದೆ. ಇಷ್ಟೇ ಅಲ್ಲ, ಇನ್ನಷ್ಟು ಸ್ಯಾಂಕ್ಷನ್​ಗಳನ್ನ ಹೇರಬಹುದಿತ್ತು. ಆದ್ರೆ ಪರಿಸ್ಥಿತಿಯನ್ನ ಉಲ್ಬಣಗೊಳಿಸಲು ನಮಗೆ ಇಷ್ಟ ಇಲ್ಲ ಅಂತ ರಷ್ಯಾಗೆ ವಾರ್ನಿಂಗ್ ಕೊಟ್ಟಿದೆ ಅಮೆರಿಕ.

ರಷ್ಯಾ ಮೇಲೆ ಅಮೆರಿಕ ಸ್ಯಾಂಕ್ಷನ್ಸ್ ಹೇರಲು ಪ್ರಮುಖ ಕಾರಣ ಅಂದ್ರೆ, 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನ ಡೊನಾಲ್ಡ್​ ಟ್ರಂಪ್​ ಪರವಾಗಿ ವಾಲಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಯತ್ನಿಸಿದ್ರು ಅನ್ನೋ ಆರೋಪ. ಅಮೆರಿಕ ಮೇಲೆ ರಷ್ಯಾ ಸೈಬರ್ ದಾಳಿ ನಡೆಸಿದೆ ಅನ್ನೋ ಆರೋಪ. ಯುಕ್ರೇನ್​ಗೆ ರಷ್ಯಾ ಹಾಕುತ್ತಿರುವ ಬೆದರಿಕೆ, ಇತ್ಯಾದಿ ಇತ್ಯಾದಿ. ಅಮೆರಿಕದ ಸ್ಯಾಂಕ್ಷನ್ಸ್​ನಿಂದ ಉರಿದುಬಿದ್ದಿರೋ ರಷ್ಯಾ ತಕ್ಷಣ ಅಮೆರಿಕದ ರಾಯಭಾರಿಗೆ ಸಮನ್ಸ್ ನೀಡಿದೆ. ಅಲ್ಲದೆ ಪ್ರತೀಕಾರದ ಕ್ರಮಗಳ ಸರಣಿ ಶೀಘ್ರದಲ್ಲೇ ಶುರುವಾಗುತ್ತೆ ಅಂತ ಹೇಳಿದೆ. ಅಂದ್ರೆ ಅಮೆರಿಕದಂತೆ ತಾನೂ ಕೂಡ ಕೆಲವೊಂದು ಕ್ರಮ ಕೈಗೊಳ್ಳುವ ಮುನ್ಸೂಚನೆ ಕೊಟ್ಟಿದೆ ರಷ್ಯಾ. ಮೊನ್ನೆ ಮಂಗಳವಾರವಷ್ಟೇ ಪುಟಿನ್ ಜೊತೆ ಮಾತನಾಡಿದ್ದ ಜೋ ಬೈಡೆನ್, ಯುಕ್ರೇನ್​ ಗಡಿಯಲ್ಲಿ ರಷ್ಯಾ ಸೇನಾ ಜಮಾವಣೆ ಹೆಚ್ಚಿಸುತ್ತಿರೋದನ್ನ ವಿರೋಧಿಸಿದ್ರು. ಜೊತೆಗೆ ಅಮೆರಿಕ-ರಷ್ಯಾ ಬಿಟ್ಟು ಮೂರನೇ ದೇಶದಲ್ಲಿ, ಬಹುಶಃ ಯುರೋಪಿನ ದೇಶದಲ್ಲಿ ಮಾತುಕತೆ ನಡೆಸೋಣ ಅಂತ ಪುಟಿನ್​ಗೆ ಹೇಳಿದ್ದರು. ಆದ್ರೀಗ ಅಮೆರಿಕದ ಸ್ಯಾಂಕ್ಷನ್ಸ್​ನಿಂದ ಎರಡು ದೇಶಗಳ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಬೈಡೆನ್-ಪುಟಿನ್ ನಡುವೆ ಮಾತುಕತೆ ನಡೆಯೋ ಸಾಧ್ಯತೆಯನ್ನ ಮತ್ತಷ್ಟು ಕಮ್ಮಿ ಮಾಡಿದೆ. ರಷ್ಯಾ ಮೇಲೆ ಸ್ಯಾಂಕ್ಷನ್ಸ್ ಹೇರಿದ ಬಳಿಕ ಮಾತನಾಡಿದ ಜೋ ಬೈಡೆನ್, ನಮ್ಮ ಪ್ರಜಾಪ್ರಭುತ್ವದೊಳಗೆ ರಷ್ಯಾ ಹಸ್ತಕ್ಷೇಪ ಮಾಡೋದನ್ನ ಮುಂದುವರಿಸಿದ್ರೆ ಮತ್ತಷ್ಟು ಕ್ರಮಗಳನ್ನ ಕೈಗೊಳ್ಳಲು ನಾನು ರೆಡಿಯಾಗಿದ್ದೀನಿ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply