masthmagaa.com:

ಕೊರೋನಾ ವೈರಸ್​​ಗೆ ಒಂದ್ಸಲ ಲಸಿಕೆ ಸಿಗಲಿ, ಎಲ್ಲವೂ ಸಹಜಸ್ಥಿತಿಗೆ ಬರಲಿ ಅಂತ ಎಲ್ಲರೂ ಕಾಯ್ತಿದ್ದಾರೆ. ಆದ್ರೆ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಲಸಿಕೆ ಅನ್ನೋದು ರಾಜಕೀಯ ವಿಚಾರ ಆಗಿಬಿಟ್ಟಿದೆ. ಏನಾಗಿದೆ ಅಂದ್ರೆ ಮುಂದಿನ ವಾರ ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ವೇಳೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಕೊರೋನಾ ಲಸಿಕೆ ಸಿಗುತ್ತಿದ್ದಂತೇ ಬಿಹಾರದ ಎಲ್ಲಾ ಜನತೆಗೂ ಅದನ್ನು ಫ್ರೀಯಾಗಿ ಕೊಡ್ತೀವಿ. ಇದು ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಮೊದಲ ಭರವಸೆ’ ಅಂತ ಹೇಳಿದ್ದಾರೆ. ಮತ್ತೊಂದುಕಡೆ ಮುಂದಿನ ವರ್ಷ ತಮಿಳುನಾಡಿನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಲಸಿಕೆ ಬಗ್ಗೆ ಮಾತನಾಡಿರೋ ತಮಿಳುನಾಡು ಸಿಎಂ ಪಳನಿಸ್ವಾಮಿ, ‘ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡ್ತೀವಿ’ ಅಂತ ಹೇಳಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿಕೆಗೆ ಭಾರಿ ಆಕ್ರೋಶ ಕೇಳಿಬಂದಿದೆ. ‘ಕೊರೋನಾ ಲಸಿಕೆ ವಿತರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಲಸಿಕೆ ಮತ್ತು ಸುಳ್ಳು ಭರವಸೆಗಳು ನಿಮಗೆ ಯಾವಾಗ ತಲುಪುತ್ತೆ ಅನ್ನೋದನ್ನು ಚೆಕ್​ ಮಾಡಲು ನಿಮ್ಮ ರಾಜ್ಯದಲ್ಲಿ ಯಾವಾಗ ಎಲೆಕ್ಷನ್ ಬರುತ್ತೆ ಅನ್ನೋದನ್ನು ನೋಡ್ಕೊಳ್ಳಿ’ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ‘ಬಿಜೆಪಿಯೇತರ ರಾಜ್ಯಗಳ ಕಥೆ ಏನು..? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಕೊರೋನಾ ಲಸಿಕೆ ಸಿಗೋದಿಲ್ವಾ..?’ ಅಂತ ಆಮ್ ಆದ್ಮಿ ಪಕ್ಷ ಹೇಳಿದೆ.

ಜನ ಕೊರೋನಾ ಬಂದು ಸಾಯ್ತಿದ್ರೆ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಅದೇ ಕೊರೋನಾವನ್ನು ಇಟ್ಟುಕೊಂಡು ರಾಜಕೀಯ ಮಾಡ್ತಿರೋದು ದುರದೃಷ್ಟಕರ.

-masthmagaa.com

Contact Us for Advertisement

Leave a Reply