ಹಿರಿಯ ನಟ ಶಂಕರರಾವ್ ನಿಧನ!

masthmagaa.com:

ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಹಿರಿಯ ನಟ ಶಂಕರರಾವ್ (83 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರು ಅರಕೆರೆಯಲ್ಲಿನ ಸ್ವಗೃಹದಲ್ಲಿ ಇಂದು ಇಹಲೋಕ ತ್ಯಜಿಸಿದರು. ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದರಾದ ಶಂಕರ್ ರಾವ್‌ ನೂರಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಹತ್ತಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1972ರಿಂದ ಇತ್ತೀಚಿನವರೆಗೂ ಅವರು ‘ನಟರಂಗ’ ರಂಗತಂಡದ ಸಕ್ರಿಯ ಕಲಾವಿದರಾಗಿದ್ದರು.

ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ ರಾವ್‌ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್‌ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ‘ಕಲಾಕುಂಜ’, ‘ನಟರಂಗ’ ರಂಗತಂಡಗಳ ಹಲವು ನಾಟಕಗಳಲ್ಲಿ ನಟಿಸುತ್ತಾ ಬಂದರು. ‘ನಟರಂಗ’ದ ಬಹುತೇಕ ಎಲ್ಲಾ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಕನಕೋಟೆ, ತೊಘಲಕ್‌, ಮೃಚ್ಛಕಟಿಕ ಪೋಲಿ ಕಿಟ್ಟಿ.. ಅವರ ಕೆಲವು ಪ್ರಮುಖ ನಾಟಕಗಳು. ಎಂ.ಆರ್.ವಿಠಲ್ ನಿರ್ದೇಶನದ ‘ಯಾರ ಸಾಕ್ಷಿ?’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಂಕರರಾವ್‌ ಕಾಕನಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್‌ 123, ಮೂಗನಸೇಡು, ಕಲ್ಯಾಣ ಮಂಟಪ.. ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸೆಕೆಂಡ್‌ ಹ್ಯಾಂಡ್ ಸದಾಶಿವ, ಪಲ್ಲವಿ, ಫೊಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ, ಪಾಪ ಪಾಂಡು, ಸಿಲ್ಲಿಲಲ್ಲಿ.. ಅವರು ಅಭಿನಯಿಸಿರುವ ಕೆಲವು ಪ್ರಮುಖ ಧಾರಾವಾಹಿಗಳು. ಶಂಕರ ರಾವ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಮಾ ಕಳೆದ ವರ್ಷ ನಿಧನರಾಗಿದ್ದರು. ಶಂಕರ್ ರಾವ್ ನಿಧನಕ್ಕೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.

-masthmagaa.com

Contact Us for Advertisement

Leave a Reply