masthmagaa.com:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್​-ಬಾಲ್ಟಿಸ್ತಾನಕ್ಕೆ ಇಮ್ರಾನ್ ಸರ್ಕಾರ ನಡೆಸಿದ ಚುನಾವಣೆಯಲ್ಲಿ ಅವರದ್ದೇ ಪಾಕಿಸ್ತಾನ್ ತೆಹ್ರೀಕ್​-ಎ-ಇನ್ಸಾಫ್ (PTI) ಪಕ್ಷ ಬಹುತೇಕ ಗೆಲುವು ಸಾಧಿಸಿದೆ. ಆದ್ರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಾಗಿದೆ ಅಂತ ಅಲ್ಲಿನ ಜನ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆದು, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗೆ ಪಾಕಿಸ್ತಾನ್​ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್​-ನವಾಝ್  ಪಕ್ಷಗಳು ಕೂಡ ಬೆಂಬಲ ಸೂಚಿಸಿವೆ ಎನ್ನಲಾಗ್ತಿದೆ.

ಅಂದ್ಹಾಗೆ 23 ವಿಧಾನಸಭಾ ಕ್ಷೇತ್ರಗಳಿರುವ ಗಿಲ್ಗಿಟ್​-ಬಾಲ್ಟಿಸ್ತಾನ ಎಲೆಕ್ಷನ್​ ರಿಸಲ್ಟ್ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ, ಮತ ಎಣಿಕೆ ಪೂರ್ಣಗೊಂಡಿದ್ದು ಇಮ್ರಾನ್​ ಖಾನ್ ಅವರ ಪಿಟಿಐ ಪಕ್ಷ  10 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 7 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನ್​ ಪೀಪಲ್ಸ್ ಪಾರ್ಟಿ (PPP) – 3, ಪಾಕಿಸ್ತಾನ್ ಮುಸ್ಲಿಂ ಲೀಗ್​-ನವಾಝ್ (PML-N) – 2 ಮತ್ತು ಪಿಟಿಐ ಜೊತೆ ಮೈತ್ರಿ ಮಾಡಿಕೊಂಡಿರುವ MWM ಪಕ್ಷ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ ಅಂತ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

ಅತಿ ಹೆಚ್ಚು ಕ್ಷೇತ್ರಗಳನ್ನ ಗೆದ್ದಿರುವ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಗಿಲ್ಗಿಟ್​-ಬಾಲ್ಟಿಸ್ತಾನದಲ್ಲಿ ಸರ್ಕಾರ ರಚಿಸೋದು ಬಹುತೇಕ ಪಕ್ಕಾ ಆಗಿದೆ. ಇದರ ಪರಿಣಾಮ ಗಿಲ್ಗಿಟ್​-ಬಾಲ್ಟಿಸ್ತಾನ ಪಾಕಿಸ್ತಾನದ 5ನೇ ಪ್ರಾಂತ್ಯವಾಗಲಿದೆ. ಅಲ್ಲಿ ವಾಸಿಸುತ್ತಿರುವ 12 ಲಕ್ಷ ಜನರ ಮೇಲೆ ಪಾಕ್ ರಾಜಕೀಯ ಹಿಡಿತ ಸಾಧಿಸಲಿದೆ. ಭಾರತದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾಕಂದ್ರೆ ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ಬರುವ ಗಿಲ್ಟಿಟ್​-ಬಾಲ್ಟಿಸ್ತಾನ ತನ್ನದು ಅನ್ನೋದು ಭಾರತದ ವಾದ. ಭಾರತದ ಈಗಿನ ಭೂಪಟದಲ್ಲಿ ಲಡಾಖ್​ ಕೇಂದ್ರಾಡಳಿತ ಪ್ರದೇಶದಲ್ಲೇ ಗಿಲ್ಟಿಟ್-ಬಾಲ್ಟಿಸ್ತಾನ ಕೂಡ ಬರುತ್ತೆ. ಅಲ್ಲಿನ ಜನ ಕೂಡ ಭಾರತದೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಆದ್ರೀಗ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ಗೆದ್ದಿರೋದ್ರಿಂದ ಮುಂದೇನು ಅನ್ನೋ ಪ್ರಶ್ನೆ ಮೂಡಿದೆ. ಪಾಕ್​ನ ಚೆಡ್ಡಿ ದೋಸ್ತ್​ ರೀತಿ ಇರುವ ಚೀನಾಗೂ ಇದೇ ಬೇಕಿತ್ತು. ಗಿಲ್ಗಿಟ್-ಬಾಲ್ಟಿಸ್ತಾನದ ಮೇಲೆ ಪಾಕಿಸ್ತಾನ​ ಸಂಪೂರ್ಣ ನಿಯಂತ್ರಣ ಸಾಧಿಸಿದ್ರೆ ‘ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್​’ (CPEC) ಯೋಜನೆ ಕೂಡ ಸುಗಮವಾಗಲಿದೆ. ಚೀನಾದ ಒತ್ತಡದಿಂದಲೇ ಇಮ್ರಾನ್ ಖಾನ್ ಸರ್ಕಾರ ಗಿಲ್ಗಿಟ್​-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತ್ಯದ ಸ್ಥಾನಮಾನ ನೀಡಿ ಚುನಾವಣೆ ನಡೆಸಲು ಮುಂದಾಗಿದ್ದು.

-masthmagaa.com

Contact Us for Advertisement

Leave a Reply