masthmagaa.com:

ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣವೀಗ ಬಾಲಿವುಡ್​ ನಟ ವಿವೇಕ್ ಒಬೆರಾಯ್​ಗೂ ಸುತ್ತಿಕೊಳ್ಳುವ ಲಕ್ಷಣ ಕಾಣುತ್ತಿದೆ. ಯಾಕಂದ್ರೆ ಇವತ್ತು ಬೆಂಗಳೂರು ಪೊಲೀಸರು ಮುಂಬೈನ ವಿವೇಕ್ ಒಬೆರಾಯ್ ಮನೆ ಮೇಲೆ ರೇಡ್ ಮಾಡಿ, ಶೋಧಕಾರ್ಯ ನಡೆಸಿದ್ದಾರೆ. ಅಂದ್ಹಾಗೆ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ವಿವೇಕ್ ಒಬೆರಾಯ್ ಅವರ ಸೋದರ ಸಂಬಂಧಿ. ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದಾರೆ. ಇದರ ನಡುವೆಯೇ ವಿವೇಕ್ ಒಬೆರಾಯ್ ಅವರ ಮನೆ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿರೋದು ಮಹತ್ವ ಪಡೆದುಕೊಂಡಿದೆ.

ಈ ಬಗ್ಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ‘ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ಆತ ವಿವೇಕ್ ಒಬೆರಾಯ್ ಮನೆಯಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ಚೆಕ್ ಮಾಡಲು ಕೋರ್ಟ್​ನಿಂದ ಸರ್ಚ್​ ವಾರಂಟ್ ಪಡೆದು ಸಿಸಿಬಿ ಪೊಲೀಸರು ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ ನಡೆಸಲು ಹೋಗಿದ್ದಾರೆ’ ಅಂತ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಆದಿತ್ಯ ಆಳ್ವ ಅವರ ಮನೆಯನ್ನು ಕೂಡ ಸಿಸಿಬಿ ಪೊಲೀಸರು ಜಾಲಾಡಿದ್ದರು. ಸ್ಯಾಂಡಲ್​ವುಡ್​ ನಟ, ನಟಿಯರಿಗೆ ಡ್ರಗ್ಸ್ ಪೂರೈಸಿರುವ ಆರೋಪ ಆದಿತ್ಯ ಆಳ್ವ ಮೇಲಿದೆ. ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply