masthmagaa.com:

ಉಗ್ರರ ಪೋಷಣೆ ನಿಲ್ಲಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನ 2021ರ ಫೆಬ್ರವರಿವರೆಗೆ ಗ್ರೇ ಲಿಸ್ಟ್​ನಲ್ಲೇ​ (ಬೂದು ಪಟ್ಟಿ) ಮುಂದುವರಿಯಲಿದೆ ಅಂತ ಫೈನಾನ್ಷಿಯಲ್​ ಆ್ಯಕ್ಷನ್ ಟಾಸ್ಕ್ ಫೋರ್ಸ್​ (FATF) ಹೇಳಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಪಾಕ್​ಗೆ ನೀಡಿದ್ದ 27 ಅಂಶಗಳ ಭಯೋತ್ಪಾದನೆ ನಿಗ್ರಹ ಕಾರ್ಯಸೂಚಿಯಲ್ಲಿ ಕೇವಲ 21 ಅಂಶಗಳನ್ನು ಮಾತ್ರ ಪೂರೈಸಿದೆ. ಉಳಿದ 6 ಅಂಶಗಳನ್ನು ಜಾರಿಗೆ ತರುವಲ್ಲಿ ಪಾಕ್​ ವಿಫಲವಾಗಿದೆ. ಹೀಗಾಗಿ ಅದು ಗ್ರೇ ಲಿಸ್ಟ್​ನಲ್ಲಿ ಮುಂದುವರಿಯಲಿದೆ ಅಂತ FATF ಹೇಳಿದೆ. ಇದನ್ನೇ ಮುಂದುವರಿಸಿದ್ರೆ ಪಾಕಿಸ್ತಾನವನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸೋದಾಗಿ FATF ಎಚ್ಚರಿಸಿದೆ.

ಏನಿದು ಗ್ರೇ ಲಿಸ್ಟ್..?

ಫೈನಾನ್ಷಿಯಲ್​ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಒಟ್ಟು ಎರಡು ಪಟ್ಟಿಗಳನ್ನು ಮೆಂಟೇನ್ ಮಾಡುತ್ತೆ. ಒಂದು ಬ್ಲಾಕ್ ಲಿಸ್ಟ್, ಮತ್ತೊಂದು ಗ್ರೇ ಲಿಸ್ಟ್.. ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನ ನಿಗ್ರಹಿಸುವ ಜಾಗತಿಕ ಪ್ರಯತ್ನದಲ್ಲಿ ಸಹಕಾರ ನೀಡದ ದೇಶಗಳನ್ನು ಬ್ಲಾಕ್​ ಲಿಸ್ಟ್​ಗೆ ಸೇರಿಸಲಾಗುತ್ತದೆ. ಇಂತಹ ರಾಷ್ಟ್ರಗಳು ಆರ್ಥಿಕ ನಿರ್ಬಂಧಕ್ಕೆ ಒಳಗಾಗುತ್ತವೆ. ಸದ್ಯ ಇರಾನ್ ಮತ್ತು ಉತ್ತರ ಕೊರಿಯಾ ಈ ಬ್ಲಾಕ್​ ಲಿಸ್ಟ್​ನಲ್ಲಿವೆ.

ಮತ್ತೊಂದು ಕಡೆ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಹರಿದು ಹೋಗುತ್ತಿದ್ದರೂ FATF ಜೊತೆಗೆ ಸೇರಿಕೊಂಡು ಅದನ್ನು ನಿಗ್ರಹಿಸಲು ಬದ್ಧವಾಗಿರುವ ದೇಶಗಳನ್ನು ಗ್ರೇ ಲಿಸ್ಟ್​ಗೆ ಸೇರಿಸಲಾಗುತ್ತೆ. ಸದ್ಯ 18 ದೇಶಗಳು ಈ ಪಟ್ಟಿಯಲ್ಲಿವೆ. ಅಲ್ಬೇನಿಯಾ, ಬಹಾಮಾಸ್, ಬಾರ್ಬೊಡಾಸ್, ಬೋಟ್ಸ್ವಾನಾ, ಕಾಂಬೋಡಿಯಾ, ಘಾನಾ, ಐಸ್​ಲ್ಯಾಂಡ್​, ಜಮೈಕಾ, ಮಾರಿಷಸ್, ಮಂಗೋಲಿಯಾ, ಮ್ಯಾನ್ಮಾರ್, ನಿಕರಗಾವ, ಪನಾಮ, ಪಾಕಿಸ್ತಾನ, ಸಿರಿಯಾ, ಉಗಾಂಡ, ಯೆಮೆನ್ ಮತ್ತು ಜಿಂಬಾಂಬ್ವೆ ದೇಶಗಳು ಗ್ರೇ ಲಿಸ್ಟ್​ನಲ್ಲಿವೆ. ಇಂತಹ ದೇಶಗಳಿಗೆ FATF ಭಯೋತ್ಪಾದನೆ ನಿಗ್ರಹ ಕಾರ್ಯಸೂಚಿಗಳನ್ನ ಬಿಡುಗಡೆ ಮಾಡುತ್ತದೆ. ಅದನ್ನು ಸರಿಯಾಗಿ ಜಾರಿಗೆ ತಂದರೆ ಗ್ರೇ ಲಿಸ್ಟ್​ನಿಂದ ಆ ದೇಶವನ್ನು ತೆಗೆದು ಹಾಕಲಾಗುತ್ತದೆ. ಇಲ್ಲದಿದ್ದರೆ ಹಾಗೇ ಮುಂದುವರಿಯುತ್ತದೆ. ಈಗ ಪಾಕಿಸ್ತಾನದ ಕಥೆ ಕೂಡ ಅದೇರೀತಿ ಆಗಿದೆ. 2018ರಿಂದ ಪಾಕ್​ ಗ್ರೇ ಲಿಸ್ಟ್​ನಲ್ಲೇ ಇದೆ.

ಆರಂಭದಲ್ಲಿ ಮನಿ ಲಾಂಡರಿಂಗ್ ಅಥವಾ ಅಕ್ರಮ ಹಣ ವರ್ಗಾವಣೆಯನ್ನ ತಡೆಯಲು ಮಾತ್ರ FATF ರಚನೆಯಾಯ್ತು. ಆದ್ರೆ 2001ರಲ್ಲಿ ಅಮೆರಿಕದ WTC ಕಟ್ಟಡ ಮೇಲೆ ಅಲ್​-ಖೈದಾ ಉಗ್ರ ಸಂಘಟನೆ ದಾಳಿ ಮಾಡಿದ ನಂತರ FATF ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿ ಟೆರರ್​ ಫೈನಾನ್ಸಿಂಗ್​ ಮೇಲೆ ನಿಗಾ ಇಡಲು ಆರಂಭಿಸಿತು. 1989ರಲ್ಲಿ ಸ್ಥಾಪನೆಯಾದ FATFನ ಕೇಂದ್ರ ಕಚೇರಿ ಪ್ಯಾರಿಸ್​ನಲ್ಲಿದೆ.

-masthmagaa.com

Contact Us for Advertisement

Leave a Reply