masthmagaa.com:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂಥವರಿಗೂ ಡಿಪ್ರೆಶನ್ ಆಗುತ್ತಾ? ಡಿಪ್ರೆಶನ್.. ಇದು ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಕಾಡಿರುತ್ತೆ. ಆದ್ರೆ ಇದು ಪರ್ಮನೆಂಟ್ ಅಲ್ಲ.. ಎಷ್ಟೋ ಜನ ಈ ಸಣ್ಣ ಸತ್ಯವನ್ನ ಅರ್ಥ ಮಾಡಿಕೊಳ್ಳದೆ ಜೀವನಕ್ಕೇ ಫುಲ್ ಸ್ಟಾಪ್ ಇಟ್ಟುಕೊಳ್ತಿರೋದನ್ನ ನಾವು ದಿನನಿತ್ಯ ನೋಡ್ತಿದೀವಿ. ಈ ಡಿಪ್ರೆಶನ್ ಮುಂದೆ ಸಾಮಾನ್ಯ ಜನ, ಸೆಲೆಬ್ರಿಟಿಗಳು ಎಲ್ಲರೂ ಒಂದೇ.. ಕ್ಯಾಪ್ಟನ್ ವಿರಾಟ್​ ಕೊಹ್ಲಿ ಸ್ವತಃ ತಾವೂ ಡಿಪ್ರೆಶನ್​ಗೇ ಒಳಗಾಗಿದ್ದನ್ನ ಒಪ್ಪಿಕೊಂಡಿದ್ದಾರೆ. ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಮಾರ್ಕ್ ನಿಕೋಲಸ್​​ ಜೊತೆ ಮಾತುಕತೆ ವೇಳೆ ವಿರಾಟ್ ಮನದಾಳವನ್ನ ತೆರೆದಿಟ್ಟಿದ್ದಾರೆ. ತಾವು ಅನುಭವಿಸಿದ ಕರಾಳ ನೋವಿನ ದಿನಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದು ತುಂಬಾ ಮುಖ್ಯ.. ವಿರಾಟ್ ಕ್ರಿಕೆಟ್ ಸೂಪರ್​ ಸ್ಟಾರ್ ಅನ್ನೋ ಕಾರಣಕ್ಕಲ್ಲ! ಬದಲಾಗಿ ವಿರಾಟ್​​ ಹೇಳಿಕೊಂಡಿರೋ ಪ್ರತೀ ಸಂಗತಿ ನಮ್ಮೆಲ್ಲರಿಗೂ ಅತ್ಯಂತ ಇಂಪಾರ್ಟೆಂಟ್.

2014ರ ಇಂಗ್ಲೆಂಡ್ ಪ್ರವಾಸದ ವೇಳೆ ತಾನು ಡಿಪ್ರೆಶನ್​​ಗೆ, ಮಾನಸಿಕ ಸಮಸ್ಯೆಗೆ ಒಳಗಾಗಿದ್ದೆ ಅಂತ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆಗ ಒಂಥರಾ ನಿರಾಶೆ ಆವರಿಸಿರುತ್ತೆ. ರಾತ್ರಿ ಮಲಗೋವಾಗ ಬೆಳಗ್ಗೆ ಏಳೋದೆ ಬೇಡ ಅನಿಸುತ್ತೆ. ಬೆಳಗ್ಗೆ ಎದ್ದಾಗಲೂ ಅಷ್ಟೆ, ಒಂಥರಾ ನಿರಾಶೆ, ನಿರುತ್ಸಾಹ ಆವರಿಸಿರುತ್ತೆ. ಇವತ್ತು ನಾನು ಚೆನ್ನಾಗಿ ರನ್ ಮಾಡಲ್ಲ ಅಂತ ಮೊದಲೇ ಅನಿಸಿಬಿಡುತ್ತೆ. ಯಾವುದೂ ನನ್ನ ಕೈಲಿಲ್ಲ. ಯಾರೂ ಸಹಾಯಕ್ಕೆ ಇಲ್ಲ ಅನಿಸಿಬಿಡುತ್ತೆ. ಈ ಮಾನಸಿಕ ಒತ್ತಡದಿಂದ ಹೊರ ಬರೋದು ಹೇಗೆ ಅಂತಾನೂ ಗೊತ್ತಾಗಲ್ಲ. ನನಗಂತೂ ಆಗ ಎಷ್ಟೇ ಪ್ರಯತ್ನಪಟ್ಟರೂ ಇದರಿಂದ ಹೊರಬರೋಕೆ ಆಗಿರಲಿಲ್ಲ. ಇಡೀ ಜಗತ್ತಲ್ಲಿ ನಾನು ಏಕಾಂಗಿ ಅನಿಸಿಬಿಡ್ತು ಅಂತ ಕೊಹ್ಲಿ ಹೇಳಿದ್ದಾರೆ. ನನಗೆ ಫ್ಯಾಮಿಲಿ ಜನ ಇದ್ರೂನೂ, ನಾನೊಂದು ದೊಡ್ಡ ಗುಂಪಿನ ಭಾಗ ಆಗಿದ್ರೂನೂ ಅದ್ಯಾಕೆ ಏಕಾಂಗಿ ಅನಿಸಿತೋ ಗೊತ್ತಿಲ್ಲ. ಅಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಜ್ಞರನ್ನ ಭೇಟಿ ಆಗಬೇಕು. ನಮ್ಮ ಮಾನಸಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಅದಕ್ಕೊಂದು ದಾರಿ ಹುಡುಕಲು ಅವರೇ ಸಮರ್ಥರು ಅಂತ ವಿರಾಟ್ ಹೇಳಿದ್ದಾರೆ. ನನಗೆ ಮಾತ್ರ ಅಲ್ಲ.. ಈ ಥರ ತುಂಬಾ ಜನಕ್ಕೆ ಆಗುತ್ತೆ. ಕೆಲವರು ಬಹಳ ಕಾಲ ಇದರಿಂದ ಕೊರಗಿ ಹೋಗ್ತಾರೆ ಅಂತ ವಿರಾಟ್ ಹೇಳಿದ್ದಾರೆ.

ಸ್ನೇಹಿತರೆ, ಇಲ್ಲಿ ಎಲ್ಲರಿಗೂ ಪಾಠ ಇದೆ. ಯಾಕಂದ್ರೆ 2014 ಇಂಗ್ಲೆಂಡ್​ ಪ್ರವಾಸದ ವೇಳೆ ವಿರಾಟ್ ಕೊಹ್ಲಿಗೆ ಈ ಥರ ಮಾನಸಿಕ ಸಮಸ್ಯೆ ಆಗಿತ್ತು. 5 ಟೆಸ್ಟ್​ಗಳ ಆ ಸರಣಿಯಲ್ಲಿ ವಿರಾಟ್ ಅತ್ಯಂತ ಕಳಪೆ ಆಟ ಆಡಿದ್ರು. ಭಾರತದ ಸ್ಟಾರ್ ಬ್ಯಾಟ್ಸ್​ಮನ್ ಅನ್ನೋ ಹಣೆಪಟ್ಟಿಯೊಂದಿಗೆ ಹೋಗಿದ್ದ ಕೊಹ್ಲಿ 10 ಇನ್ನಿಂಗ್ಸ್​ಗಳಲ್ಲಿ 1, 8, 25, 0, 39, 28, 0, 7, 6 ಮತ್ತು 20 ರನ್ ಗಳಿಸಿದ್ರು. ಆವರೇಜ್ ಜಸ್ಟ್ 13.50 ಅಷ್ಟೇ. ಆಗ ವಿರಾಟ್ ಕೊಹ್ಲಿಗೆ ಎಲ್ಲವೂ ಮುಗಿದೇ ಹೋಯ್ತು ಅನಿಸಿತ್ತು. ಆದ್ರೆ ಅದರ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ವಿರಾಟ್ ಹಸಿದ ಹೆಬ್ಬುಲಿಯಂತೆ ಕಾಂಗರೂಗಳ ಮೇಲೆ ಎರಗಿದ್ರು. ಧೋನಿ ಅನುಪಸ್ಥಿತಿಯಲ್ಲಿ ಕ್ಯಾಪ್ಟನ್ ಆಗಿ ಅಬ್ಬರಿಸಿದ ಕೊಹ್ಲಿ ಹಲವು ದಾಖಲೆ ಧೂಳೀಪಟ ಮಾಡಿದ್ರು. 86ರ ಆವರೇಜ್​ನಲ್ಲಿ ನಾಲ್ಕು ಟೆಸ್ಟ್​​ನಲ್ಲಿ 692 ರನ್ ಸಿಡಿಸಿದ್ರು. ಇದರಲ್ಲಿ 4 ಸೆಂಚುರಿ ಹಾಗೂ ಒಂದು ಹಾಫ್ ಸೆಂಚುರಿ ಇದ್ವು. ಸೋ ಇದರ ಅರ್ಥ ಏನು..?

– ಡಿಪ್ರೆಶನ್ ಎಲ್ಲರಿಗೂ ಅತ್ಯಂತ ಕಾಮನ್ ಆದ್ರೆ ಇದು ಪರ್ಮನೆಂಟ್ ಅಲ್ಲ.

– ಡಿಪ್ರೆಶನ್ ಆವರಿಸಿದಾಗ ಆ ಕೆಟ್ಟ ಗಳಿಗೆಯಿಂದ ಹೊರ ಬರೋ ತಾಳ್ಮೆ ನಾವು ತೊರಬೇಕು.

– ಜಗತ್ತೇ ಮುಗಿದು ಹೋಯ್ತು ಅಂತ ಕೆಟ್ಟ ನಿರ್ಧಾರ ಕೈಗೊಳ್ಳಬಾರದು.

– ಪತಿ, ಪತ್ನಿ, ಪೇರೆಂಟ್ಸ್, ಸಹೋದರ, ಸಹೋದರಿಯರು, ಫ್ರೆಂಡ್ಸ್ ಹತ್ರ ಸಮಸ್ಯೆ ಶೇರ್ ಮಾಡ್ಕೋಬೇಕು.

– ಅಗತ್ಯ ಬಿದ್ರೆ ಪ್ರೊಫೆಷನಲ್ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಬೇಕು.

ಕೆಟ್ಟ ನಿರ್ಧಾರಗಳು ಇದಾವಲಾ, ಅವು ಡಿಪ್ರೆಶನ್​ಗಿಂತಲೂ ಕೆಟ್ಟದ್ದು. ಡಿಪ್ರೆಶನ್ ಬರುತ್ತೆ ಹೋಗುತ್ತೆ.. ಜೀವ ಹೋದ್ರೆ ಬರಲ್ಲ. ಅದು ಅಮೂಲ್ಯ..

-masthmagaa.com

Contact Us for Advertisement

Leave a Reply