ಹಳೆ ಸಂಸತ್ತಿಗೆ ವಿದಾಯ ಹೇಳಿದ ಸಂಸದರು! ಹೊಸ ಸಂಸತ್ತಿನಲ್ಲಿ ವಿಶೇಷ ಕಲಾಪ!

masthmagaa.com:

ಸುಮಾರು 7 ದಶಕಗಳ ನಂತರ ಭಾರತ ತನ್ನ ಸಂಸತ್‌ನ್ನ ಬದಲಾಯಿಸಿದ್ದು, ಅಧಿಕೃತವಾಗಿ ಹೊಸ ಸಂಸತ್‌ ಭವನಕ್ಕೆ ಕಾಲಿಟ್ಟಿದೆ. ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನ ಮಂಡಿಸೋ ಮೂಲಕ ಹೊಸ ಸಂಸತ್‌ ಭವನದ ಕಾರ್ಯಕಲಾಪಗಳನ್ನ ಆರಂಭಿಸಲಾಗಿದೆ. ಹಳೆ ಸಂಸತ್ತಿಗೆ ವಿದಾಯ ಹೇಳುವ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಸಭೆಯನ್ನ ಉದ್ಧೇಶಿಸಿ ಮಾತನಾಡಿದ್ದಾರೆ. ಈ ವೇಳೆ ಇಂದು ನಾವು ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಸ ಭವಿಷ್ಯದ ಆರಂಭ ಮಾಡುತ್ತಿದ್ದೇವೆ. ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುವ ಸಂಕಲ್ಪದೊಂದಿಗೆ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ ಅಂತ ಹೇಳಿದ್ದಾರೆ. ಇದೇ ವೇಳೆ ಹಳೆಯ ಸಂಸತ್ ಕಟ್ಟಡವನ್ನು ʻಸಂವಿಧಾನ ಸದನ್ʼ ಎಂದು ಕರೆಯಲಾಗುವುದು ಅಂತ ಮೋದಿ ಅನೌನ್ಸ್‌ ಮಾಡಿದ್ದಾರೆ. ಇನ್ನು ಹೊಸ ಸಂಸತ್‌ ಭವನಕ್ಕೆ ತೆರಳುವ ಮೊದಲು ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಒಟ್ಟಾಗಿ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಮೋದಿ ಹಾಗೂ ಎಲ್ಲಾ ಸಂಸದರು ಕಾಲ್ನಡಿಗೆಯಲ್ಲಿ ಹೊಸ ಸಂಸತ್ ಕಟ್ಟಡಕ್ಕೆ ತೆರಳಿದ್ದು, ಅಧಿಕೃತವಾಗಿ ಹೊಸ ಪಾರ್ಲಿಮೆಂಟ್‌ನಲ್ಲಿ ಇಂದು ಅಧಿವೇಶನ ಆರಂಭವಾಗಿದೆ. ಇತ್ತ ಹೊಸ ಕಟ್ಟಡದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮಾತಾಡಿರುವ ಮೋದಿ, ಎಲ್ಲಾ ಸದಸ್ಯರಿಗೆ ಸ್ವಾಗತ ಕೋರಿದ್ದಾರೆ. ಜೊತೆಗೆ ಬಹುದಿನಗಳ ಊಹಾಪೋಹಗಳಿಗೆ ತೆರೆ ಎಳೆದಿರುವ ಕೇಂದ್ರ ಸರ್ಕಾರ ಇಂದು ಸಂಸತ್ತಿನಲ್ಲಿ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆ ಸ್ಥಾನಗಳಲ್ಲಿ ಮೀಸಲಿಡುವ ಮಹತ್ವದ ಮಸೂದೆ ಮಂಡಿಸಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇಖಡ 33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದಾರೆ. ಇನ್ನು ಈ ಪ್ರಸ್ತಾಪಿತ ಮಸೂದೆ ಅಂಗೀಕಾರವಾದರೂ 2024ರ ಲೋಕಸಭೆ ಚುನಾವಣೆಯಿಂದಲೇ ಅಸ್ತಿತ್ವಕ್ಕೆ ಬರುವುದು ಸಾಧ್ಯವಿಲ್ಲ. 2029ರ ಬಳಿಕ ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.

ಇತ್ತ ಈ ಮಸೂದೆಯ ಕ್ರೆಡಿಟ್‌ಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಬಿಗ್‌ ಫೈಟ್‌ ಶುರುವಾಗಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 2010ರಲ್ಲಿ ನಾವು ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದೆವು. ಹೀಗಾಗಿ ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಅಂತ ಹೇಳಿದ್ದಾರೆ. ಜೊತೆಗೆ ಮಹಿಳಾ ಮೀಸಲಾತಿ ಬಿಲ್​ನಲ್ಲಿ ಒಬಿಸಿ ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅತ್ತ ಈ ಮಸೂದೆ ನಮ್ಮದು ಅಂತ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply