ಮಳೆಯಿಂದ ಒಂದು ತಿಂಗಳಲ್ಲಿ 12 ಸಾವು: ಮುಖ್ಯಮಂತ್ರಿ ಬೊಮ್ಮಾಯಿ

masthmagaa.com:

ಸಾಮಾನ್ಯವಾಗಿ ಮುಂಗಾರುಮಳೆ ಜೂನ್‌ ಮೊದಲವಾರದಲ್ಲಿ ರಾಜ್ಯ ಪ್ರವೇಶ ಮಾಡ್ತಾ ಇತ್ತು. ಆದ್ರೆ ಕಳೆದು 2-3 ವರ್ಷಗಳಿಂದ ಇದ್ರಲ್ಲಿ ಬದಲಾವಣೆಯಾಗಿದ್ದು ಜೂನ್‌ ಮೊದಲವಾರದಲ್ಲಿ ವರುಣ ತೋರುತಿದ್ದ ಆರ್ಭಟ ಈಗ ಜುಲೈನ ಮೊದಲ ವಾರಕ್ಕೆ ಶಿಫ್ಟ್‌ ಆಗಿದೆ. ಪರಿಣಾಮ ರಾಜ್ಯಾದ್ಯಂತ ವಿಪರೀತ ಮಳೆ ಸುರೀತಾ ಇದೆ. 8 ದಿನಗಳ ನಿರಂತರ ಮಳೆಗೆ ಹಲವೆಡೆ ಮನೆ, ರಸ್ತೆಗಳು ಜಲಾವೃತವಾಗಿವೆ. ಇನ್ನು ಕಳೆದ 24 ಗಂಟೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾ ಎಂಬಲ್ಲಿ ಅತಿಹೆಚ್ಚು 260 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಭಾರಿ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳ ಕೆಲವು ಕಡೆ ಸಾಧಾರಣ ಇನ್ನುಳಿದಂತೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇನ್ನುಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಲಿದೆ. ಇನ್ನು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಬೀದರ್‌, ಯಾದಗಿರಿ, ಕಲಬುರಗಿ, ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ಇನ್ನು ಮಳೆ ಸಂಬಂಧ ಇವತ್ತು ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ. ನಂತ್ರ ಮಾತಾಡಿದ ಅವ್ರು, ಕರಾವಳಿ, ಮಲೆನಾಡು ಮತ್ತು ಕೆಲವು ಬಯಲುಸೀಮೆ ಪ್ರದೇಶದಲ್ಲಿ ವಾಡಿಕೆಗಿಂತ ಅತಿಹೆಚ್ಚು ಮಳೆಯಾಗಿದೆ. ಹೀಗಾಗಿ 13 ಜಿಲ್ಲೆಗಳಲ್ಲಿ ಅದ್ರಲ್ಲೂ 17 ತಾಲೂಕುಗಳಲ್ಲಿ ಪ್ರವಾಹ ಬಂದಿದೆ. ಇದುವರೆಗು ಒಂದು ತಿಂಗಳಲ್ಲಿ ಮಳೆಯಿಂದ ಸುಮಾರು 12 ಜನ ಸಾವನ್ನಪ್ಪಿದ್ದಾರೆ. ಮುಂದಿನ ಮೂರ್ನಾಲ್ಕು ದಿನ ವ್ಯಾಪಕ ಮಳೆ ಆಗುತ್ತೆ ಅಂತ ಮಾಹಿತಿ ನೀಡಿದ್ದಾರೆ. ಜೊತೆಗೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ 10 ಸಾವಿರ ರುಪಾಯಿ ಪರಿಹಾರ ಘೋಷಿಸಿದ್ದಾರೆ.

ಇನ್ನು ಮಳೆಯಿಂದ ಎಲ್ಲೆಲ್ಲಿ ಏನೇನಾಯ್ತು ಅಂತ ಕ್ವಿಕ್‌ ಆಗಿ ನೋಡೋದಾದ್ರೆ…

*ಉಡುಪಿ ಜಿಲ್ಲೆ ಬೈಂದೂರಿನ ಸೇನಾಪುರ ಗ್ರಾಮ ಸಂಪೂರ್ಣ ಜಲಾವೃತ ಆಗಿದೆ. ಪಾಪನಾಶಿನಿ ನದಿ ಮೇರೆ ಮೀರಿ ಹರೀತಾ ಇದ್ದು ಅಲೆಯೂರಿನ ಬಳಿ 500 ಎಕರೆ ಭತ್ತ ನಾಶವಾಗಿದೆ. ನಾಡಗಡ್ಡೆ, ಅಳವೆಗಡ್ಡೆ, ತಗ್ಗರಸೆ ಎಂಬ ಗ್ರಾಮಗಳು ಜಲಾವೃತವಾಗಿದ್ದು ನೀರಿನಲ್ಲಿ ಸಿಲುಕಿರುವ ಗ್ರಾಮಸ್ಥರನ್ನ ಬೋಟ್‌ ಮೂಲಕ ರಕ್ಷಿಸಲಾಗಿದೆ. ಇನ್ನು ಕುಕ್ಕಾಲುಕಿಂಡಿ ಅಣೆಕಟ್ಟಿಗೆ ಮುಳುಗಡೆ ಭೀತಿ ಎದುರಾಗಿದೆ. ಅತ್ತ ಸೀತಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರೀತಾ ಇದ್ದು ಉಪ್ಪೂರು ಎಂಬ ಗ್ರಾಮದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ.

*ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಬಳಿ ಹುತ್ತಿನಗದ್ದೆ ಎಂಬಲ್ಲಿ ಭಾರೀ ಭೂ ಕುಸಿತ ಆಗಿದ್ದು ಸುಮಾರು ನೂರು ಅಡಿ ಭೂಮಿ ಬಾಯ್ತೆರದಿದೆ, ಇದ್ರಿಂದ ಶಾಂತಿಕುಡಿ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ ಆಗಿದೆ.

*ಮಂಗಳೂರು ಮಡಿಕೇರಿಯಲ್ಲೂ ಮಳೆ ಆರ್ಭಟ ಜೋರಾಗಿದ್ದು ಸುಳ್ಯದ ಬಳಿ ಗುಡ್ಡ ಕುಸಿದಿರೋದು ವರದಿಯಾಗಿದೆ.
*ಕಾರವಾರದಲ್ಲಿ ಮಹಾಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾಗಿದ್ದು ಸುಮಾರು 5 ಕಿ.ಮೀವರೆಗೆ ವಾಹನಗಳು ನಿಂತಿರೋದು ವರದಿಯಾಗಿದೆ.

*ಅತ್ತ ಕೊಡಗಿನಲ್ಲಿ ಕೂಡ ಭೂಕುಸಿತ ಮುಂದುವರೆದಿದ್ದು ಮೊಣ್ಣಂಗೇರಿ ಎಂಬ ಗ್ರಾಮದ ಬಳಿ ಮನೆ ಮೇಲೆ ಮಣ್ಣು ಕುಸಿತ ಆಗಿದೆ. ಇನ್ನು ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

*ಇನ್ನು ಮಲೆನಾಡಿನ ಮಳೆ ಅಬ್ಬರಕ್ಕೆ ತುಂಗಭದ್ರ ನದಿ ಉಕ್ಕಿ ಹರೀತಾ ಇದ್ದು ಹರಿಹರದ ಉಕ್ಕಡಗಾತ್ರಿ ಸ್ನಾನಗೃಹ ಜಲಾವೃತವಾಗಿದೆ.

*ಜಲಾನಯನ ಪ್ರದೇಶ ಹಾಗು ಮಲೆನಾಡಿನಲ್ಲಿ ವ್ಯಾಪಕ ಮಳೆ ಆಗ್ತಾ ಇರೋದ್ರಿಂದ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಳವಾಗ್ತಿದೆ. ಇದೀಗ ಎರಡೇ ದಿನದಲ್ಲಿ ಆಣೆಕಟ್ಟಿಗೆ 12 ಟಿಎಂಸಿಗಿಂತಲೂ ಅಧಿಕ ನೀರು ಹರಿದು ಬಂದಿದೆ ಅಂತ ವರದಿಯಾಗಿದೆ.

*ಒಟ್ಟಾರೆ ಮಳೆಯಿಂದ ದಕ್ಷಿಣ ಕನ್ನಡದಲ್ಲಿ 250 ಹೆಕ್ಟೇರ್‌ ಜಮೀನು ಜಲಾವೃತವಾಗಿದೆ. 92 ಕಿ.ಮೀ ರಸ್ತೆ ಮತ್ತು ಮೂರು ಸೇತುವೆಗಳಿಗೆ ಹಾನಿಯಾಗಿದೆ. ಅತ್ತ ಶಿವಮೊಗ್ಗದಲ್ಲೂ 285 ಹೆಕ್ಟೇರ್‌ ಮತ್ತು ಹಾಸನದಲ್ಲಿ 70 ಹೆಕ್ಟೇರ್‌ ಬೆಳೆ ನಾಶವಾಗಿದೆ. ಒಟ್ಟಾರೆ ಉಡುಪಿ, ಕಾರವಾರ, ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ 50 ಕೋಟಿಗೂ ಅಧಿಕ ಆಸ್ತಿ ನಷ್ಟವಾಗಿದೆ.

*ಇನ್ನು ಅತ್ತ ಗಡಿನಾಡ ಜಿಲ್ಲೆ ಬೆಳಗಾವಿಯಲ್ಲೂ ಮಳೆ ಜನರ ನಿದ್ದೆಗೆಡಸಿದೆ. ಕೃಷ್ಣ, ದೂದ್‌ಗಂಗಾ, ಘಟಪ್ರಭಾ ನದಿಗಳ ಒಳಹರಿವು ಹೆಚ್ಚಾಗಿದೆ ಇದ್ರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

*ಇನ್ನು ಅತ್ತ ನಾಲ್ಕೈದು ದಿನಗಳಲ್ಲಿ ಕೆಆರ್‌ಎಸ್‌ ಭರ್ತಿಯಾಗೋ ನಿರೀಕ್ಷೆ ಇರೋದ್ರಿಂದ ಜುಲೈ ತಿಂಗಳಲ್ಲೇ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಲಾಗುವುದು ಅಂತ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply