ಜಮ್ಮು-ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ ಉಗ್ರರು! ಅವಳಿ ಸ್ಪೋಟದಲ್ಲಿ 9 ಜನರಿಗೆ ಗಾಯ!

masthmagaa.com:

ಗಣರಾಜ್ಯೋತ್ಸವ ಹತ್ತಿರ ಆಗ್ತಿದ್ದಂತೆ ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಜಾಸ್ತಿಯಾಗಿದೆ. ಇದೀಗ ಜಮ್ಮು ಕಾಶ್ಮೀರದ ನರ್ವಾಲ್‌ನಲ್ಲಿ ರೈಲ್ವೆ ಸ್ಟೇಶನ್‌ ಬಳಿ ಅವಳಿ ಸ್ಫೋಟ ಸಂಭವಿಸಿ 9 ಜನ ಗಾಯಗೊಂಡಿದ್ದಾರೆ. ಸ್ಫೋಟಕ ವಸ್ತುವನ್ನ ಕಾರ್‌ ಒಂದ್ರಲ್ಲಿ ಇರಿಸಲಾಗಿದ್ದು, ಎರಡು ಸ್ಫೋಟಗಳ ನಡುವೆ 30 ನಿಮಿಷ ಅಂತರವಿತ್ತು. ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ನಿನ್ನೆಯಷ್ಟೇ ಜಮ್ಮು-ಕಾಶ್ಮೀರಕ್ಕೆ ಎಂಟ್ರಿ ಕೊಟ್ಟಿದೆ. ಅಲ್ಲದೇ ಗಣರಾಜ್ಯೋತ್ಸವ ಕೂಡ ಹತ್ತಿರವಾಗ್ತಿದೆ. ಇದರ ನಡುವೆ ಅವಳಿ ಸ್ಫೋಟಗಳು ಸಂಭವಿಸಿರೋ ಕಾರಣ ಹೆಚ್ಚಿನ ಭದ್ರತೆಯನ್ನ ಒದಗಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರೋ ವರದಿಯಲ್ಲಿ 2018ರಲ್ಲಿ 417 ಭಯೋತ್ಪಾದಕ ಕೃತ್ಯಗಳು ಸಂಭವಿಸಿದ್ವು, ಈ ಘಟನೆಗಳು 2021ರಲ್ಲಿ 229ಕ್ಕೆ ಇಳಿಕೆ ಕಂಡಿದೆ ಅಂತ ಹೇಳಲಾಗಿತ್ತು. ಜೊತೆಗೆ ʻಉಗ್ರರ ಹಾಟ್‌ಸ್ಪಾಟ್‌ʼ ಆಗಿದ್ದ ಜಮ್ಮು-ಕಾಶ್ಮೀರ ಈಗ ʻಟೂರಿಸ್ಟ್‌ ಹಾಟ್‌ಸ್ಪಾಟ್‌ʼ ಆಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದ್ರೆ ಈ ವರ್ಷ ಹೊಸವರ್ಷದ ದಿನದಂದೇ ಉಗ್ರರ ದಾಳಿಗೆ 4 ಜನ ಬಲಿಯಾಗಿದ್ರು. 6 ಮಂದಿ ಗಾಯಗೊಂಡಿದ್ರು. ಇದೀಗ ಮತ್ತೆ ಸ್ಪೋಟ ಸಂಭವಿಸಿದೆ. ಅದ್ರಲ್ಲೂ ಜಮ್ಮುವಿನಲ್ಲಿ ಈ ಸ್ಪೋಟಗಳು ಸಂಭವಿಸ್ತಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಜಮ್ಮು-ಕಾಶ್ಮೀರದಲ್ಲಿ ಈ ಕಥೆಯಾದ್ರೆ, ಇತ್ತ ಗಣರಾಜ್ಯ ದಿನದಂದು ಭಯೋತ್ಪಾದಕ ದಾಳಿ ನಡೆಸೋದಾಗಿ SJF ಉಗ್ರ ಗುಂಪು ವಿಡಿಯೋ ಒಂದನ್ನ ಪೋಸ್ಟ್‌ ಮಾಡಿದೆ. ವಿಡಿಯೋದಲ್ಲಿ ಈ ವರ್ಷ ಭಾರತ ಆಕ್ರಮಿತ ಪಂಜಾಬ್‌ನ್ನ ಸ್ವತಂತ್ರಗೊಳಿಸಿ ಅಂತ ಉಗ್ರ ಗುಂಪಿನ ನಾಯಕ ಹೇಳಿದ್ದಾನೆ. ಜೊತೆಗೆ ಎಲ್ಲರೂ ಮನೆ ಒಳಗೆ ಇರಿ. ನಮ್ಮ ಟಾರ್ಗೆಟ್‌ ದಿಲ್ಲಿಯಾಗಿದೆ. ಜನವರಿ 26ರಂದು ಖಲಿಸ್ತಾನಿ ಧ್ವಜವನ್ನ ಹಾರಿಸುತ್ತೇವೆ. ಯಾರು ಖಲಿಸ್ತಾನಿ ಧ್ವಜವನ್ನ ಕೆಂಪು ಕೋಟೆ ಮೇಲೆ ಹಾರಾಸ್ತಾರೆ ಅವ್ರಿಗೆ 5 ಲಕ್ಷ ಡಾಲರ್‌ ಅಂದ್ರೆ ಸುಮಾರು 4.1 ಕೋಟಿ ರೂಪಾಯಿ ನೀಡೋದಾಗಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply