ಪುಷ್ಪ ಸಿನಿಮಾ ವಿವಾದ: ಕನ್ನಡಕ್ಕೆ ಅಪಮಾನ!?

masthmagaa.com:

ಡಬ್ಬಿಂಗ್ ಬರಬೇಕು, ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಬೇಕು, ಆಗ ಮಾತ್ರ ನಮ್ಮತನ ಅನ್ನೋದು ಉಳಿದುಕೊಳ್ಳುತ್ತೆ, ಪರಭಾಷಾ ಸಿನಿಮಾಗಳನ್ನ ಕನ್ನಡದಲ್ಲೇ ನೋಡೋದ್ರಿಂದ ಬೇರೆ ಭಾಷೆಯ ಸಿನಿಮಾಗಳನ್ನ ಅದೇ ಭಾಷೆಯಲ್ಲಿ ನೋಡೋಕೆ ಕನ್ನಡಿಗರು ಮನಸ್ಸು ಮಾಡಲ್ಲ. ನಮ್ಮ ಭಾಷೆನೂ ಉಳಿಯತ್ತೆ. ಹಾಗಾಗಿ ಡಬ್ಬಿಂಗ್ ಬೇಕು. ಇದು ಒಂದು ವಾದ.

ಡಬ್ಬಿಂಗ್ ಯಾವುದೇ ಕಾರಣಕ್ಕೂ ಬರಬಾರದು, ಡಬ್ಬಿಂಗ್ ಬಂದ್ರೆ ಕನ್ನಡದ ಕಲಾವಿದರಿಗೆ ದೊಡ್ಡ ಪೆಟ್ಟು ಬೀಳತ್ತೆ, ಡಬ್ಬಿಂಗ್ ಬಂದ್ರೆ ಬೇರೆ ಭಾಷೆಯ ಸಿನಿಮಾಗಳನ್ನ ಕನ್ನಡಕ್ಕೆ ರೀಮೇಕ್ ಮಾಡೋಕೆ ಆಗಲ್ಲ, ಜೊತೆಗೆ ಕನ್ನಡಕ್ಕೆ ಡಬ್ಬಾದ ಪರಭಾಷಾ ಚಿತ್ರಗಳನ್ನೇ ಕನ್ನಡಿಗರು ನೋಡೋಕೆ ಶುರು ಮಾಡಿಬಿಟ್ರೆ ಕನ್ನಡ ಸಿನಿಮಾಗಳ ಬೆಳವಣಿಗೆಗೆ ತೊಡಕಾಗುತ್ತೆ. ಹಾಗಾಗಿ ಡಬ್ಬಿಂಗ್ ಬೇಡ. ಇದು ಇನ್ನೊಂದು ವಾದ.
ಸಧ್ಯಕ್ಕೆ ಈ ಪರ ವಿರೋಧದ ನಡುವೆಯೂ ಕರ್ನಾಟಕದಲ್ಲಿ ಡಬ್ಬಿಂಗ್ ಶುರು ಆಗಿದೆ. ಅಂದ್ರೆ ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ಬಾಗಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗ್ತಾ ಇವೆ. ತೆಲುಗಿನ  ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾ ಕೂಡ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದೆ. ಆದರೆ ಪುಷ್ಪ ಸಿನಿಮಾದ ಕನ್ನಡ ವರ್ಷನ್ ಬಿಡುಗಡೆಯಾಗಿರೋದು ಕೇವಲ 2  ಚಿತ್ರಮಂದಿರಗಳಲ್ಲಿ ಮಾತ್ರ ಉಳಿದಂತೆ ಕರ್ನಾಟಕದಾದ್ಯಂತ ಸುಮಾರು 300+ ಸೆಂಟರ್ ಗಳಲ್ಲಿ ತೆಲುಗು ವರ್ಷನ್ ಬಿಡುಗಡೆಯಾಗಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಪುಷ್ಪ ಸಿನಿಮಾದ ತೆಲುಗು ವರ್ಷನ್ ಭಾನುವಾರದ ತನಕ ಬಹುತೇಕ ಬುಕ್ ಆಗಿದೆ.
ಒಂದು ಪರಭಾಷೆಯ ಸಿನಿಮಾ ತಂಡ ತಮ್ಮ ಸಿನಿಮಾವನ್ನ ಕನ್ನಡಕ್ಕೆ ಡಬ್ ಮಾಡುವ ನಿರ್ಧಾರ ಯಾಕೆ ಮಾಡತ್ತೆ!? ತಮ್ಮ ಸಿನಿಮಾ ಕನ್ನಡಿಗರಿಗೆ ಅವರ ಭಾಷೆಯಲ್ಲೇ ನೋಡುವ ಹಾಗೆ ಆಗಲಿ, ಕನ್ನಡದಲ್ಲೇ ನೋಡಿ ಖುಷಿ ಪಡ್ಲಿ ಅನ್ನೋ ಕಾರಣಕ್ಕೆ. ಆದ್ರೆ ಪುಷ್ಪ ಸಿನಿಮಾದ ಕನ್ನಡ ಅವತರಣಿಕೆ ಬಿಡುಗಡೆಯಾಗಿರೋದು ಎರಡೇ ಸೆಂಟರ್ ನಲ್ಲಿ. ತೆಲುಗು ವರ್ಷನ್ ಬಿಡುಗಡೆ ಆಗಿದ್ದು 300+ ಸ್ಕ್ರೀನ್ಸ್ ನಲ್ಲಿ. ಹಾಗಾದ್ರೆ ಕನ್ನಡಕ್ಕೆ ಡಬ್ ಮಾಡಿದ ಉದ್ದೇಶ ಆದರೂ ಏನು?
ಈಗಾಗಲೇ ಇದರ ವಿರುದ್ಧ ಡಬ್ಬಿಂಗ್ ಪರ ಕನ್ನಡಿಗರು ಸೋಶಿಯಲ್ ಮೀಡಿಯಾ ದಲ್ಲಿ ಪುಷ್ಪ ಚಿತ್ರತಂಡಕ್ಕೆ ಬ್ಯಾಟಿಂಗ್ ಶುರು ಮಾಡಿದ್ದಾರೆ. ನಿಮ್ಮ ಸಿನಿಮಾವನ್ನ ಕನ್ನಡದಲ್ಲೇ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ರೆ ನೋಡ್ತೀವಿ ಇಲ್ಲಾಂದ್ರೆ ಬಾಯ್ಕಾಟ್ ಮಾಡ್ತೀವಿ ಅಂತ ಬಹುತೇಕ ಜನರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಆಮೇಲೆ ಇನ್ನೊಂದು ವಿಷಯ ಕನ್ನಡ ವರ್ಷನ್ ಬಿಡುಗಡೆ ಆಗಿರುವ ಎರಡು ಚಿತ್ರಮಂದಿರಗಳಲ್ಲೇ ಟಿಕೆಟ್ ಬುಕಿಂಗ್ ಆಗದೇ ಸೀಟು ಎಲ್ಲ ಖಾಲಿ ಖಾಲಿ ಹೊಡೀತಾ ಇದೆ. ಇನ್ನೊಂದು ಕಡೆ ಏನು 300+ ಸ್ಕ್ರೀನ್ಸ್ ನಲ್ಲಿ ತೆಲುಗು ವರ್ಷನ್ ರಿಲೀಸ್ ಆಗಿದೆಯೋ, ಅಲ್ಲೆಲ್ಲ ಭಾನುವಾರದ ತನಕವೂ ಟಿಕೆಟ್ ಬಹುತೇಕ ಬುಕ್ ಆಗಿವೆ. ಹಾಗಾದ್ರೆ ಈ ಡಬ್ಬಿಂಗ್ ಪರವಾದ ಮಾಡುತ್ತಿದ್ದ ಕನ್ನಡಿಗರೆಲ್ಲಾ ಎಲ್ಲಿ ಹೋದ್ರು?ಅವರು ಕೂಡ ತೆಲುಗು ವರ್ಷನ್ ಅನ್ನೆ ಬುಕ್ ಮಾಡಿಕೊಂಡ್ರಾ? ಗೊತ್ತಿಲ್ಲ.
ಈ ಪರಿಸ್ಥಿತಿಯನ್ನ ಅರ್ಥೈಸಿಕೊಳ್ಳೋದು ಹೇಗೆ? ಆಮೇಲೆ ಬಹಳ ಮುಖ್ಯವಾಗಿ ಪುಷ್ಪ ಸಿನಿಮಾ ತಂಡದಿಂದ ಅಲ್ಲು ಅರ್ಜುನ್, ರಶ್ಮಿಕ ಮನದನ್ನ ಮತ್ತು ಡಾಲಿ ಧನಂಜಯ್ ಮೂರು ಜನ ಸೇರಿ ಮೊನ್ನೆ ಅಷ್ಟೇ ಪುಷ್ಪ ಸಿನಿಮಾದ ಕನ್ನಡ ವರ್ಷನ್ ನ ಪ್ರೀ ರಿಲೀಸ್ ಈವೆಂಟ್ ಕೂಡ ಮಾಡಿದ್ರು. ಈವೆಂಟ್ ಗೆ ಅಲ್ಲು ಅರ್ಜುನ್ ಪ್ರೈವೇಟ್ ಜೆಟ್ ಅಲ್ಲಿ ಬಂದಿದ್ರು. ಬರೀ ಎರಡೇ ಥೇಟರ್ ಅಲ್ಲಿ ಬಿಡುಗಡೆ ಮಾಡುವ ಉದ್ದೇಶ ಇದ್ದಿದ್ರೆ ಇಷ್ಟೆಲ್ಲಾ ಖರ್ಚು ಮಾಡಿ ಡಬ್ಬಿಂಗ್ ಮಾಡಿ, ಪ್ರೀ ರಿಲೀಸ್ ಈವೆಂಟ್ ಮಾಡೋ ಉದ್ದೇಶ ಆದ್ರೂ ಏನಿತ್ತು.? ಕನ್ನಡದಲ್ಲೂ ನಮ್ ಸಿನಿಮಾ ಬರ್ತಾ ಇದೆ ಅಂತ ಪ್ರಮೋಟ್ ಮಾಡೋ ನೆಪದಲ್ಲಿ ತೆಲುಗು ವರ್ಷನ್ ಅನ್ನೇ ಪ್ರಮೋಟ್ ಮಾಡೋದೇ ಉದ್ದೇಶ ಆಗಿತ್ತ? ಈ ಎಲ್ಲ ಗೊಂದಲಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಾತ್ರ ಏನು? ಯಾವುದು ಸ್ಪಷ್ಟ ಇಲ್ಲ. ಒಟ್ಟಾರೆ ಇವತ್ತಿನ ಈ ಪರಿಸ್ಥಿತಿಗೆ ಯಾರನ್ನು ದೂರಬೇಕೋ ಗೊತ್ತಿಲ್ಲ.
-masthmagaa.com
Contact Us for Advertisement

Leave a Reply