ನೀರು, ಗಾಳಿಯಲ್ಲೂ ಅಪಾಯಕಾರಿ ವಸ್ತು ಪತ್ತೆ! ರಾಜ್ಯದಲ್ಲಿ ʻವಿಕಿರಣʼ ಭೀತಿ!

masthmagaa.com:

ಇತ್ತೀಚೆಗೆ ತಾನೆ ರಾಜ್ಯದ ನದಿಗಳಲ್ಲಿ ಮಾಲಿನ್ಯಕಾರಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿವೆ ಅನ್ನೋ ಸುದ್ದಿ ಬಂದಿತ್ತು. ಇದೀಗ ರಾಜ್ಯದಲ್ಲಿ ಗಾಳಿ ನೀರಿನಲ್ಲೂ ವಿಷಕಾರಿ ವಸ್ತುಗಳು ಪತ್ತೆಯಾಗಿರೋ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ ಮತ್ತು ಪಾವಗಡ ಸೇರಿದಂತೆ ಬೆಂಗಳೂರಿನ ಹೊರವಲಯದಲ್ಲಿ ಗಾಳಿ ಮತ್ತು ನೀರಿನಲ್ಲಿ ಅಪಾಯಕಾರಿ, ವಿಕಿರಣಶೀಲ ರೆಡಾನ್ ಇರುವುದನ್ನ ಭಾರತೀಯ ವಿಜ್ಞಾನ ಸಂಸ್ಥೆ IISc ಸಂಶೋಧಕರು ಪತ್ತೆಹಚ್ಚಿದ್ದಾರೆ. ಆರಂಭಿಕ ಅಧ್ಯಯನಗಳ ಪ್ರಕಾರ ಬೆಂಗಳೂರಿನ ಕೆಲವು ಭಾಗಗಳಲ್ಲಿ ರೆಡಾನ್ ಪ್ರತಿ ಲೀಟರ್‌ಗೆ 30ರಿಂದ 60 ಮೈಕ್ರೋಗ್ರಾಂನಷ್ಟು ಇರೊ ಬದಲಾಗಿ 1000 ಮೈಕ್ರೋಗ್ರಾಂಗಳಷ್ಟು ಕಂಡುಬಂದಿದೆ. ರೆಡಾನ್‌ ಅನ್ನೋದು ವಿಕಿರಣಶೀಲ ವಸ್ತುವಾಗಿದ್ದು, ಸ್ವಾಭಾವಿಕವಾಗಿ ಯುರೇನಿಯಂನಿಂದ ಬಿಡುಗಡೆಯಾಗುತ್ತೆ. ಹೀಗಾಗಿ ಯುರೇನಿಯಂ ಕೂಡ ಹೆಚ್ಚಾಗಿರ್ಬೋದು ಅಂತ ಸಂಶೋಧನೆ ನಡೆಸಲಾಗಿದೆ. ಆಗ ಮತ್ತೊಂದು ಬೆಚ್ಚಿಬೀಳಿಸುವ ಅಂಶ ಅಂದ್ರೆ, ಅಂತರ್ಜಲದಲ್ಲಿ ಪ್ರತಿ ಲೀಟರ್‌ಗೆ 60 ಮೈಕ್ರೋಗ್ರಾಂ ಮಿತಿಯಲ್ಲಿ ಇರಬೇಕಿದ್ದ ಯುರೇನಿಯಂ ಈಗ ಪ್ರತಿ ಲೀಟರ್‌ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 8 ಸಾವಿರ ಮೈಕ್ರೋಗ್ರಾಮ್‌ನಷ್ಟು ಇರೋದು ಕಂಡುಬಂದಿದೆ. ಅದ್ರಲ್ಲೂ ಬೆಂಗಳೂರಿನ ಹೊರವಲಯಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿಯಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ 5 ರಿಂದ 6 ಸಾವಿರ ಮೈಕ್ರೋಗ್ರಾಂನಷ್ಟು ಯುರೇನಿಯಂ ಇದೆ ಅಂತ ಸಂಶೋಧಕರು ತಿಳಿಸಿದ್ದಾರೆ. ಇನ್ನು ರೆಡಾನ್‌ ವಿಕಿರಣದಿಂದ ಆರೋಗ್ಯದ ಮೇಲೆ ಅನೇಕ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಶ್ವಾಸಕೋಶದ ಹಾನಿಗೆ ಕಾರಣವಾಗಿ, ಶ್ವಾಸಕೋಶದ ಕ್ಯಾನ್ಸರ್‌ ಕೂಡ ಬರಬಹುದು. ವಾತಾವರಣದಲ್ಲಿ ಹೆಚ್ಚಿನ ಯುರೇನಿಯಂ ಇರೋದ್ರಿಂದ ಮೂತ್ರನಾಳದ ಮೇಲೆ ಪರಿಣಾಮ ಬೀರಲಿದ್ದು, ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಅಂತ ಸಂಶೋಧಕರು ತಿಳಿಸಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್‌ ವಿಚಾರ ಅಂದ್ರೆ ಅಂತರ್ಜಲದಲ್ಲಿ ಈ ವಿಷಕಾರಿ ವಸ್ತುಗಳು ಇರೋ ವಿಚಾರ ಗ್ರೌಂಡ್‌ವಾಟರ್‌ ಬೋರ್ಡ್‌ ಅಧಿಕಾರಿಗಳಿಗೆ ಈ ಮುಂಚೆನೇ ಗೊತ್ತಿತ್ತು, ಆದ್ರುನೂ ಅವ್ರು ಹೆಚ್ಚಿನ ಅಧ್ಯಯನ ನಡೆಸಿಲ್ಲ ಎನ್ನಲಾಗಿದೆ. ಇನ್ನು ವೇಸ್ಟ್‌ವಾಟರ್‌ನ್ನ ರಿವರ್ಸ್‌ ಆಸ್ಮೋಸಿಸ್‌ ಮಾಡೋ ಘಟಕಗಳಲ್ಲಿ ಕೂಡ ಹೆಚ್ಚಿನ ಮಟ್ಟದ ಯುರೇನಿಯಂ ಕಂಡುಬಂದಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply