ನನ್ನ ತಾಯಿ ಸೋನಿಯಾ ಗಾಂಧಿಯನ್ನ ವಿಷಕನ್ಯೆ ಅಂತಿಯಾ…ಮಿಸ್ಟರ್‌ ಯತ್ನಾಳ್‌ ನಿನ್‌ ನಾಲಿಗೆ..? ಡಿಕೆಶಿ ಕುಮಾರ್‌ ಹೇಳಿದ್ದೇನು?

masthmagaa.com:

ರಾಜ್ಯದಲ್ಲಿ ಅಧಿಕಾರ ಸ್ಥಾಪನೆಗೆ ಸ್ಪರ್ಧೆಗೆ ಬಿದ್ದಿರೋ ರಾಜಕೀಯ ನಾಯಕರು ಮತ್ತೆ ತಮ್ಮ ಕೀಳು ಭಾಷೆ ರಾಜಕಾರಣವನ್ನ ಆರಂಭ ಮಾಡಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ಮೋದಿಯವರನ್ನ ವಿಷದ ಹಾವು ಅಂತ ಕರೆದು ತೀವ್ರ ಟೀಕೆಗೆ ಗುರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಒಂದು ಕಡೆಯಾದ್ರೆ, ಇವತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ʻಮೋದಿಯವರು ವಿಷದ ಹಾವಾದ್ರೆ ಸೋನಿಯಾ ಗಾಂಧಿ ವಿಷ ಕನ್ಯೆನಾ ? ಅಂತ ಪ್ರಶ್ನೆ ಮಾಡಿದ್ದಾರೆ. ಸೋನಿಯಾ ಗಾಂಧಿ ಪಾಕಿಸ್ತಾನ ಹಾಗೂ ಚೀನಾದ ಏಜೆಂಟ್‌ ಆಗಿ ಇಡೀ ದೇಶವನ್ನ ಹಾಳ್‌ ಮಾಡಿದ್ರು. ಚಹಾ ಮಾರುವವ ದೇಶದ ಪ್ರಧಾನ ಮಂತ್ರಿಯಾಗಿದ್ದಾನೆ ಅಂತ ಅಪಮಾನ ಮಾಡಿದ್ರು. ಆ ರೀತಿ ಎಲ್ಲಾ ಮಾಡಿ ಇವತ್ತು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಮಾನವನ್ನೂ ಕಳೆದುಕೊಂಡಿದೆ ಅಂತ ಹೇಳಿದ್ದಾರೆ. ಅಲ್ದೇ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಯನ್ನ ಹುಚ್ಚ ಅಂತ ಕರೆದಿರೋ ಯತ್ನಾಳ್‌ ʻಅಲ್ಲಿ ಹುಚ್ಚ ರಾಹುಲ್‌ ಗಾಂಧಿ, ಇಲ್ಲಿ ಟಿಕ್ಕ ರಾಯರೆಡ್ಡಿ ಅಂತ ಬಸವರಾಜ ರಾಯರೆಡ್ಡಿ ಹಾಗೂ ರಾಹುಲ್‌ ಗಾಂಧಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಪಾಳಯ ಯತ್ನಾಳ್‌ ವಿರುದ್ದ ತಿರುಗಿ ಬಿದ್ದಿದೆ. ವಿಷಕನ್ಯೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ʻಆ ನನ್ನ ತಾಯಿಗೆ ಅಂದ್ರೆ ಸೋನಿಯಾ ಗಾಂಧಿಯವರಿಗೆ ಒಬ್ಬ ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ ವಿಷಕನ್ಯೆ ಅಂತ ಕರೆದಿದ್ದಾರೆ. ಮಿಸ್ಟರ್‌ ಯತ್ನಾಳ್‌.. ನಿಮ್ಮ ನಾಲಿಗೆಯನ್ನ ಯಾರು ಏನ್‌ ಮಾಡ್ತಾರೆ ಗೊತ್ತಿಲ್ಲ. ನೀನು ನನ್ನ ತಾಯಿಗೆ ವಿಷಕನ್ಯೆ ಅಂತ ಕರೆದಿರೋದನ್ನ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಇದಕ್ಕೆ ಯತ್ನಾಳ್‌ ಕ್ಷಮೆ ನಮಗೆ ಬೇಕಿಲ್ಲ, ಈ ದೇಶದ ಪ್ರಧಾನಿಗಳು ಹಾಗೂ ಈ ರಾಜ್ಯದ ಮುಖ್ಯಮಂತ್ರಿ ಇದಕ್ಕೆ ಕ್ಷಮೆ ಕೇಳಬೇಕು. ಕಾಂಗ್ರೆಸ್‌ ಕಾರ್ಯಕರ್ತರು ದಂಗೆ ಏಳುವ ಮುನ್ನ ಬಿಜೆಪಿ ಯತ್ನಾಳ್‌ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತ ಡಿಕೆ ಶಿವಕುಮಾರ್ ಆರ್ಭಟಿಸಿದ್ದಾರೆ. ಇತ್ತ ಮೋದಿಯವರನ್ನ ವಿಷಸರ್ಪ ಅಂತ ಕರೆದಿದ್ದ ಖರ್ಗೆ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಸರ್ಪ ಶಿವನ ಕೊರಳಲ್ಲಿ ಇರುತ್ತೆ. ಜಗತ್ತಿನ ಎಲ್ಲ ವಿಷವನ್ನ ಕುಡಿಯಬಲ್ಲ ನೀಲಕಂಠ ನರೇಂದ್ರ ಮೋದಿ. ಮೋದಿ ಹೆಸರು ಹೇಳಲಿಲ್ಲ ಅಂದ್ರೆ ಖರ್ಗೆಗೆ ನಿದ್ದೆ ಬರೋಲ್ಲ ಅಂತ ಬೊಮ್ಮಾಯಿ ಕೂಡ ತಿರುಗೇಟು ಕೊಟ್ಟಿದ್ದಾರೆ. ಇತ್ತ ಖರ್ಗೆಗಿಂತ ಹೆಚ್ಚಾಗಿ ನಾನು ತಿರುಗಿಸಿ ಕೆಟ್ಟ ಭಾಷೆಯಲ್ಲಿ ಟೀಕಿಸಬೋದು. ಆದರೆ ಆ ಕೆಲಸ ಮಾಡಲ್ಲ. ನಾವು ಖರ್ಗೆಯನ್ನ ತಂದೆ ಸ್ಥಾನದಲ್ಲಿ ಇಟ್ಟಿದ್ವಿ. ಈ ರೀತಿ ನೀತಿಗೆಟ್ಟು ಮಾತನಾಡ್ತಾರೆ ಅಂತ ಅನ್ಕೊಂಡಿರಲಿಲ್ಲ ಅಂತ ಮಾಜಿ ಸಚಿವ ಈಶ್ವರಪ್ಪ ಕೂಡ ವಾಗ್ಯುದ್ದಕ್ಕೆ ಎಂಟ್ರಿಯಾಗಿದ್ದಾರೆ. ಇನ್ನು ಯತ್ನಾಳ್‌ ಹೇಳಿಕೆಗೆ ಬಿಜೆಪಿಯಲ್ಲೂ ವಿರೋಧ ವ್ಯಕ್ತವಾಗಿವೆ. ಯತ್ನಾಳ್‌ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ..ಅವರ ಹೇಳಿಕೆಯನ್ನ ನಾವು ಒಪ್ಪುವುದಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಒಟ್ನಲ್ಲಿ ರಾಜ್ಯದಲ್ಲಿ ಎಲೆಕ್ಷನ್‌ ಡೇಟ್ ಹತ್ತಿರಾತ್ತಿರ ಆಗ್ತಿದ್ದಂತೆ ಎಲ್ಲಾ ನಾಯಕರ ಬಾಯಿಗಳು ಅಗಲವಾಗ್ತಾ ಹೋಗ್ತಾ ಇವೆ.

-masthmagaa.com

Contact Us for Advertisement

Leave a Reply