ಬೋಲ್ಸೋನಾರೋ ಬೆಂಬಲಿಗರ ಆರ್ಭಟ! ಬ್ರೆಜಿಲ್‌ನಲ್ಲಿ ದೊಡ್ಡ ದಂಗೆ!

masthmagaa.com:

ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್‌ ಹೊತ್ತಿ ಉರೀತಾ ಇದೆ. ಅಲ್ಲಿನ ಸರ್ಕಾರಿ ಕಚೇರಿಗಳಾದ ಅಧ್ಯಕ್ಷರ ಭವನ, ಸಂಸತ್ತು, ಸುಪ್ರೀಂಕೋರ್ಟ್‌ ಸೇರಿ ದೇಶದ ಶಕ್ತಿ ಕೇಂದ್ರಗಳ ಮೇಲೆ ಹಾಗೂ ಇತರ ಸಚಿವಾಲಯಗಳ ಮೇಲೆ ಅಲ್ಲಿನ ಮಾಜಿ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಬೆಂಬಲಿಗರು ದಾಳಿ ಮಾಡಿದ್ದಾರೆ. ಈ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಹಸಿರು ಹಾಗೂ ಹಳದಿ ಬಣ್ಣದ ಫ್ಲ್ಯಾಗ್‌ಗಳನ್ನ ಹಿಡಿದು ಸಾವಿರಾರು ಜನ ರಾಜಧಾನಿ ಬ್ರೆಸಿಲಿಯಾದಲ್ಲಿರೊ ಬ್ರೆಜಿಲ್‌ನ ಸಂಸತ್‌ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನೆಯನ್ನ ಹತ್ತಿಕ್ಕೋಕೆ ಭದ್ರತಾ ಪಡೆಗಳು ಟಿಯರ್‌ ಗ್ಯಾಸ್‌ ಬಳಸಿದ್ದಾರೆ. ಅಧ್ಯಕ್ಷ ಲುಲಾ ಅವ್ರು ಅಲ್ಲಿನ ಸಾವೋಪೋಲೊದ ಪ್ರವಾಹ ಪೀಡಿತ ನಗರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಈ ಬೃಹತ್‌ ಬೆಳವಣಿಗೆಯಾಗಿದೆ. ಸುದ್ದಿ ತಿಳಿದು ರಾಜಧಾನಿಗೆ ಓಡಿ ಬಂದಿರೋ ಲುಲಾ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಇತ್ತ ಬ್ರೆಜಿಲ್‌ನ ಈ ಬೆಳವಣಿಗೆಗೆ ಇಡೀ ವಿಶ್ವಸಮುದಾಯ ಆತಂಕ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿ ಸೇರಿದಂತೆ ಜಗತ್ತಿನ ನಾಯಕರು ಘಟನೆಯನ್ನ ಖಂಡಿಸಿದ್ದಾರೆ. ʻಬ್ರೆಸಿಲಿಯಾದಲ್ಲಿ ಸರ್ಕಾರಿ ಸಂಸ್ಥೆಗಳ ವಿರುದ್ದ ನಡೆಯುತ್ತಿರೊ ಗಲಭೆ ಬಗ್ಗೆ ತೀವ್ರ ಕಳವಳವಿದೆ. ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನ ಎಲ್ಲರೂ ಗೌರವಿಸಬೇಕು. ಬ್ರೆಜಿಲ್‌ ನಾಯಕರಿಗೆ ಸಂಪೂರ್ಣ ಬೆಂಬಲ ನೀಡ್ತೀವೆʼ ಅಂತ ಮೋದಿ ಟ್ವೀಟ್‌ ಮಾಡಿದ್ದಾರೆ. ಇತ್ತ ಅಮೆರಿಕದ ವೈಟ್‌ಹೌಸ್‌ನ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ಮಾತನಾಡಿ, ಬ್ರೆಜಿಲ್‌ನ ಪ್ರಜಾಪ್ರಭುತ್ವವನ್ನ ಹಾಳುಮಾಡೊ ಈ ರೀತಿ ಪ್ರಯತ್ನಗಳನ್ನ ಅಮೆರಿಕ ಖಂಡಿಸುತ್ತೆ. ಬ್ರೆಜಿಲ್‌ನ ಪರಿಸ್ಥಿತಿಯನ್ನ ಅಧ್ಯಕ್ಷ ಜೋ ಬೈಡೆನ್‌ ಹತ್ತಿರದಿಂದ ಮಾನಿಟರ್‌ ಮಾಡ್ತಿದಾರೆ ಅಂತ ಹೇಳಿದ್ದಾರೆ. ಜಗತ್ತು ಘಟನೆಗೆ ಬೋಲ್ಸೊನಾರೊ ಅವ್ರತ್ತ ಬೆರಳು ತೋರಿಸ್ತಿರೊ ಹೊತ್ತಲ್ಲಿ, ದಾಳಿಯ ಹೊಣೆಯನ್ನ ಬೋಲ್ಸೊನಾರೊ ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ಅಲ್ದೇ ತಮ್ಮ ಮೇಲೆ ಮಾಡಿರೊ ಆರೋಪಗಳು ಆಧಾರರಹಿತವಾಗಿವೆ ಅಂತ ಹೇಳಿದ್ದು ತಮ್ಮ ಬೆಂಬಲಿಗರ ಕ್ರಮವನ್ನ ತಾವೇ ಖಂಡಿಸಿದ್ದಾರೆ.

ಅಂದ್ಹಾಗೆ ಅಕ್ಟೋಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೈರ್‌ ಬೋಲ್ಸೊನಾರೊ ವಿರುದ್ದ ಅಲ್ಲಿನ ಪ್ರಖ್ಯಾತ ಎಡಪಂಥೀಯ ನಾಯಕ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವಾ ಅಥ್ವಾ ಸಿಂಪಲ್‌ ಆಗಿ ಲುಲಾ ಅವ್ರು ತುಂಬಾ ಚಿಕ್ಕ ಅಂತರದಿಂದ ಗೆದಿದ್ರು. ಈ ಮುಂಚೆ 2003ರಿಂದ 2011ರವರೆಗೆ 8 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಲುಲಾ, 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ರು. ಆದರೆ ಚುನಾವಣಾ ಫಲಿತಾಂಶವನ್ನ ಬೋಲ್ಸೊನಾರೊ ಒಪ್ಪಿಕೊಂಡಿರಲಿಲ್ಲ. ಚುನಾವಣೆಯಲ್ಲಿ ಅನ್ಯಾಯ ನಡೆದಿದೆ ಅಂತ ಆರೋಪಿಸ್ತಾ ಬಂದಿದ್ರು. ಚುನಾವಣಾ ಫಲಿತಾಂಶ ಬಂದಾಗ ಕೂಡ ಬೋಲ್ಸನಾರೊ ಬೆಂಬಲಿಗರು ದೇಶಾದ್ಯಾಂತ ಪ್ರತಿಭಟನೆಗಳನ್ನ ಮಾಡಿದ್ರು. ಬೋಲ್ಸೊನಾರೊ ಅವ್ರನ್ನೇ ಮತ್ತೆ ಅಧಿಕಾರದಲ್ಲಿ ಮುಂದುವರೆಸಬೇಕು. ಲುಲಾ ಅವ್ರ ಗೆಲುವನ್ನ ಒಪ್ಪಿಕೊಳ್ಳಬಾರ್ದು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ರು. ಇನ್ನು ಇದೇ ಹೊತ್ತಿಗೆ ಜನರನ್ನ ಉದ್ದೇಶಿಸಿ ಮಾತಾಡಿದ್ದ ಬೋಲ್ಸೊನಾರೊ, ದೇಶದಲ್ಲಿ ಸಮಾಜವಾದವನ್ನ ತಡೆಗಟ್ಟುವಲ್ಲಿ ಸಶಸ್ತ್ರ ಪಡೆಗಳು ಸಮರ್ಥವಾಗಿವೆ. ಇನ್ನು ಏನು ಕಳೆದುಹೋಗಿಲ್ಲ. ಸಶಸ್ತ್ರ ಪಡೆಗಳು ಒಗ್ಗಟಾಗಿವೆ. ತಮ್ಮ ಜನರಿಗೆ, ಸಂವಿಧಾನಕ್ಕೆ ಹಾಗೂ ನಮ್ಮ ಸ್ವಾತಂತ್ರ್ಯಕ್ಕೆ ಜವಾಬ್ದಾರಿಯಾಗಿವೆ ಅಂತ ಹೇಳಿ, ಮಿಲಿಟರಿ ದಂಗೆಗೆ ಇನ್‌ಡೈರೆಕ್ಟಾಗಿ ಕರೆ ಕೋಟ್ಟಿದ್ರು. ಜೊತೆಗೆ ತಮ್ಮ ಟ್ವೀಟ್‌ಗಳ ಮೂಲಕ ಕೂಡ ಬೆಂಬಲಿಗರಿಗೆ ದಂಗೆ ಏಳುವಂತೆ ಗುಪ್ತವಾಗಿ ಮೆಸೇಜ್‌ ನೀಡಿದ್ರು ಎನ್ನಲಾಗಿದೆ. ಇನ್ನು ಅಧಿಕಾರವನ್ನ ಬಿಟ್ಟು ಕೊಡದ ಮನಸ್ಥಿತಿ ಹೊಂದಿದ್ದ ಬೋಲ್ಸನಾರೊ, ಕಳೆದ ವಾರ ಅಧ್ಯಕ್ಷ ಲುಲಾ ಅಧಿಕಾರ ಸ್ವೀಕರಿಸೋವಾಗ ದೇಶವನ್ನೇ ಬಿಟ್ಟು ಹೋಗಿದ್ರು. ಅಧಿಕೃತವಾಗಿ ಅಧಿಕಾರವನ್ನ ತಮ್ಮ ಮುಂದಿನ ಅಧ್ಯಕ್ಷರಿಗೆ ಹಸ್ತಾಂತರ ಮಾಡದೇ, ಲುಲಾ ಅವ್ರು ಅಧಿಕಾರ ಸ್ವೀಕಾರ ಮಾಡೋದನ್ನ ನೋಡೊಕಾಗಲ್ಲ ಅಂತ ದೇಶವನ್ನೇ ತೊರೆದು ಅಮೆರಿಕಗೆ ಓಡಿದ್ರು. ಅಲ್ಲಿ ತಮ್ಮ ಮಿತ್ರ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾಸವಿರೊ ಫ್ಲೋರಿಡಾಗೆ ಹೋಗಿದ್ರು. ಅಂದ್ಹಾಗೆ ಇದೇ ಹೊತ್ತಲ್ಲಿ ಅಂದ್ರೆ ಜನವರಿ 6, 2021ರಂದು ಟ್ರಂಪ್‌ರ ಬೆಂಬಲಿಗರು ಅಮೆರಿಕದ ಕ್ಯಾಪಿಟೋಲ್ ಮೇಲೆ ದಾಳಿ ಮಾಡಿದಂತೆಯೇ, ನಿನ್ನೆ ಬೋಲ್ಸೊನಾರೊ ಬೆಂಬಲಿಗರು ದಾಳಿ ಮಾಡಿದ್ದಾರೆ. ಈ ಟ್ರಂಪ್‌ ಕೂಡ ರೈಟ್‌ ವಿಂಗ್‌ ಹೀಗಾಗಿ ಇಬ್ರು ಒಟ್ಟಿಗೆ ಸೇರಿದ್ದಾರೆ ಅಂತ ಹೇಳಲಾಗ್ತಿದೆ.

ಈ ಬೋಲ್ಸೊನಾರೊ ಬ್ರೆಜಿಲ್‌ನ 38ನೇ ಅಧ್ಯಕ್ಷರಾಗಿ 2019ರಿಂದ 2022ರವರೆಗೆ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುಂಚೆ 1991ರಿಂದ 2018ರವರೆಗೆ ಸಂಸತ್‌ನ ಕೆಳಮನೆಯ ಸಂಸದರಾಗಿ ಸೇವೆ ಸಲ್ಲಿಸಿದ್ರು. ಅಲ್ದೇ ಇದಕ್ಕೂ ಮೊದಲು ಸೇನೆಯಲ್ಲಿದ್ದ ಬೋಲ್ಸೊನಾರೊ, ಸೈನಿಕರಿಗೆ ಕಡಿಮೆ ವೇತನ ನೀಡಲಾಗ್ತಿದೆ ಅಂತ ಆರ್ಟಿಕಲ್‌ ಬರೆದು ಅರೆಸ್ಟ್‌ ಆಗಿ ಫೇಮಸ್‌ ಆಗಿದ್ರು. ಫಾರ್‌ ರೈಟ್‌ ಲೀಡರ್‌ ಆಗಿರೋ ಈ ಬೋಲ್ಸೊನಾರೊ ವಿರುದ್ದ ಅವರ ಕ್ಯಾಬಿನೆಟ್‌ ಮಿನಿಸ್ಟರ್‌ಗಳೇ ತಿರುಗಿ ಬಿದಿದ್ರು. ಅಲ್ದೇ ಇವರ ಅಧಿಕಾರವಧಿಯಲ್ಲಿ ಅಮೆಜಾನ್‌ ರೇನ್‌ಫಾರೆಸ್ಟ್‌ನ್ನ ನಾಶ ಮಾಡಲಾಗ್ತಿದೆ ಅನ್ನೊ ಆರೋಪಗಳು ಕೇಳಿ ಬಂದಿದ್ವು. ಕೋವಿಡ್‌ ಟೈಮಲ್ಲಿ, ಬ್ರೆಜಿಲ್‌ನಲ್ಲಿ ಅತಿಹೆಚ್ಚು ಕೇಸ್‌ಗಳು ವರದಿಯಾಗ್ತಿದ್ದ ವೇಳೆ ಕೊರೊನಾನೇ ಬಂದಿಲ್ಲ, ಅದು ಕೇವಲ ಜ್ವರ ಅಂತ ಹೇಳಿದ್ರು. ಅಲ್ದೇ ಕೋವಿಡ್‌ ಲಸಿಕೆಗಳನ್ನ ಏಡ್ಸ್‌ಗೆ ಹೋಲಿಸಿ, ಯಾವುದೇ ಕೊರೊನಾ ಗೈಡ್‌ಲೈನ್ಸ್‌ ಫಾಲೋ ಮಾಡದೇ ಸಾಕಷ್ಟು ಟೀಕೆಗೆ ಗುರಿಯಾಗಿದ್ರು ಈ ಅಧ್ಯಕ್ಷ. ಈಗ ದಂಗೆಗೆ ಕರೆಕೊಟ್ಟು ದೇಶದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply