ಲಂಚಾವತಾರ: ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ದ FIR

masthmagaa.com:

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮಗನ ಮನೆ ಹಾಗೂ ಕಚೇರಿಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಬೆನ್ನಲ್ಲೇ ವಿರೂಪಾಕ್ಷಪ್ಪ ಅವರ ನಿವಾಸದಲ್ಲೂ ಶೋಧ ಕಾರ್ಯ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರೊ ನಿವಾಸದಲ್ಲಿ 500, 200 ಹಾಗೂ 100 ರೂ. ಮುಖಬೆಲೆಯ ಕಂತೆ ಕಂತೆ ಹಣ, ಚಿನ್ನಾಭರಣ ದೊರೆತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಲಂಚ ಪ್ರಕರಣದಲ್ಲಿ ಶಾಸಕ ಮಾಡಾಳ್‌ ಮೊದಲ ಆರೋಪಿ ಅಂತ ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದಾರೆ. ಆದ್ದರಿಂದ ಬಂಧನದ ಭೀತಿ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಾಡಾಳ್‌ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿಯನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಇತ್ತ ಲಂಚ ಪ್ರಕರಣದ ಹಿನ್ನಲೆಯಲ್ಲಿ ವಿಪಕ್ಷಗಳು ಬೊಮ್ಮಾಯಿ ಸರ್ಕಾರದ ವಿರುದ್ದ ಮುಗಿಬಿದ್ದಿವೆ. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು ಅಂತ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರ ಸಾರ್ವಜನಿಕರ ಹಣವನ್ನ ದುರುಪಯೋಗಪಡಿಸಿಕೊಳ್ಳುತ್ತ ತಮ್ಮ ಪ್ರಚಾರ ಪಡೆಯುತ್ತಿದೆ. ಚುನಾವಣಾ ಆಯೋಗ ಈ ಕೂಡಲೇ ಚುನಾವಣೆ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿ ಮಾಡ್ಬೇಕು ಅಂತ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇನ್ನು ಅತ್ತ ಕಾರ್ಕಳದ ಶಾಸಕ, ಇಂಧನ ಸಚಿವ ಸುನೀಲ್‌ ಕುಮಾರ್‌ ಬೇನಾಮಿ ಆಸ್ತಿ ಮಾಡಿದ್ದಾರೆ ಅಂತ ಆರೋಪಿಸಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಉಡುಪಿಯ ಜಿಲ್ಲಾಧಿಕಾರಿಗಳು ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶಿವಪುರ ಕೆರೆಕಟ್ಟೆ ಗ್ರಾಮದಲ್ಲಿ 67 ಎಕರೆ ಕೃಷಿ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದಾರೆ. ಮುಂದೆ ಅದು ಕೈಗಾರಿಕಾ ಪ್ರದೇಶವಾಗಿ ಭೂ ಪರಿವರ್ತನೆ ಮಾಡಿ 4-5 ಪಟ್ಟು ಹೆಚ್ಚಿನ ಬೆಲೆಗೆ ಸರ್ಕಾರ ಖರೀದಿ ಮಾಡುತ್ತದೆ. 4 ಚಿಲ್ಲರೆ ಕೋಟಿಗೆ ಖರೀದಿಸುವ ಮೂಲಕ ಜಮೀನು ಹೊಂದಿರುವ ಬಡ ರೈತರಿಗೂ ಅನ್ಯಾಯ ಆಗಿದೆ. ಇದರಲ್ಲಿ ಶಾಸಕ, ರಾಜ್ಯದ ಪ್ರಭಾವಿ ಮಂತ್ರಿಗಳ ಕೈವಾಡ ಇದೆ ಅಂತ ಮುತಾಲಿಕ್ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply