ಜರ್ಮನಿ ವಶದಲ್ಲಿರುವ ಭಾರತೀಯ ಹೆಣ್ಣುಮಗು! ದೇಶಕ್ಕೆ ಮರಳಿಸುವಂತೆ ಒತ್ತಾಯಿಸಿದ ಭಾರತ!

masthmagaa.com:

ಒಂದೂವರೆ ವರ್ಷದಿಂದ ಜರ್ಮನಿ ಸರ್ಕಾರ ವಶದಲ್ಲಿರುವ ಅರಿಹಾ ಶಾ ಅನ್ನೊ ಹೆಣ್ಣು ಮಗುವನ್ನ ಭಾರತೀಯ ಪೋಷಕರಿಗೆ ಮರಳಿ ನೀಡುವಂತೆ ಒತ್ತಾಯಿಸಿ ಭಾರತದಲ್ಲಿರುವ ಜರ್ಮನಿ ರಾಯಭಾರಿ ಕಚೇರಿಗೆ 59 ಸಂಸದರು ಪತ್ರ ಬರೆದಿದ್ದಾರೆ. 19 ರಾಜಕೀಯ ಪಕ್ಷಗಳ 59 ಸದಸ್ಯರು ಜಂಟಿಯಾಗಿ ಜರ್ಮನಿಗೆ ಪತ್ರ ಬರೆದಿದ್ದು, ಕೂಡಲೇ ಮಗುವನ್ನ ಅದರ ಪೋಷಕರಿಗೆ ಒಪ್ಪಿಸಬೇಕು ಅಂತ ಒತ್ತಾಯಿಸಲಾಗಿದೆ. ಅಂದ್ಹಾಗೆ 2018ರಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದ ಅರಿಹಾ ಪೋಷಕರು ಆಕೆ, 7 ತಿಂಗಳ ಮಗು ಇದ್ದಾಗ ಗುಪ್ತಾಂಗ ಭಾಗದಲ್ಲಿ ಗಾಯವಾಗಿದ್ದ ಕಾರಣಕ್ಕೆ ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದ್ರೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ ಅಂತ ಆರೋಪಿಸಿ ಪೋಷಕರ ವಿರುದ್ಧ 2021ರಲ್ಲಿ ತನಿಖೆ ನಡೆಸಲಾಗಿತ್ತು. ಇದೇ ವೇಳೆ ಅರಿಹಾಳನ್ನ ವಶಕ್ಕೆ ಪಡೆದಿದ್ದು, ಅಲ್ಲಿನ ಮಕ್ಕಳ ಯೋಗಕ್ಷೇಮ ಏಜೆನ್ಸಿ ವಶ ದಲ್ಲಿ ಇರಿಸಲಾಗಿದೆ. ಆದ್ರೆ 2022ರಲ್ಲಿ ಅಂತಹ ಯಾವುದೇ ಕೃತ್ಯ ನಡೆದಿಲ್ಲ ಅಂತ ಕೇಸ್‌ನ್ನ ಪೊಲೀಸರು ವಜಾಗೊಳಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿಯೂ ಈ ಆರೋಪವನ್ನ ನಿರಾಕರಿಸಿ ವರದಿ ನೀಡಿದೆ ಅಂತ ಸಂಸದರ ಪತ್ರದಲ್ಲಿ ತಿಳಿಸಿದ್ದಾರೆ. ಇದೀಗ ಅರಿಹಾಳ ಪೋಷಕರು ಭಾರತದಲ್ಲಿದ್ದು, ತಮ್ಮ ಮಗುವನ್ನ ವಾಪಾಸ್‌ ಕೊಡಿಸುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಇತ್ತ ಈ ಕುರಿತು ಮಾತಾಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ, ಅರಿಹಾಳನ್ನ ಭಾರತಕ್ಕೆ ಬೇಗ ಕಳುಹಿಸಲು ಅಗತ್ಯವಿರೋ ಎಲ್ಲಾ ಕ್ರಮಗಳನ್ನ ಕೈಗೊಳ್ಳುವಂತೆ ನಾವು ಜರ್ಮನಿ ಅಧಿಕಾರಿಗಳನ್ನ ಒತ್ತಾಯಿಸುತ್ತೇವೆ. ಭಾರತೀಯ ಪ್ರಜೆಯಾಗಿ ಇದು ಅರಿಹಾಳ ಹಕ್ಕು. ಹೀಗಾಗಿ ಆಕೆ ಭಾರತಕ್ಕೆ ಮರಳೋದನ್ನ ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಅಂತ ಬಾಗ್ಚಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply