ಮಯನ್ಮಾರ್‌ ಸೇನಾಡಳಿತದ ಯಶಸ್ಸಿಗೆ ಚೀನಾನೇ ಕಾರಣ! ವರದಿಯಲ್ಲಿ ಹೇಳಿದ್ದೇನು?

masthmagaa.com:

ಮಯನ್ಮಾರ್‌ನಲ್ಲಿದ್ದ ಪ್ರಜಾಪ್ರಭುತ್ವ ಆಡಳಿತವನ್ನ ಕೊನೆಗಿಳಿಸಿ ಅಲ್ಲಿನ ಜುಂಟಾ ಮಿಲಿಟರಿ ಅಧಿಕಾರ ವಹಿಸಿಕೊಂಡು ಇವತ್ತಿಗೆ 2 ವರ್ಷ ಆಗಿದೆ. ತಮ್ಮ ಆಡಳಿತದ 2ನೇ ವಾರ್ಷಿಕೋತ್ಸವವನ್ನ ಸೇನೆ ಆಚರಿಸುತ್ತಿದೆ. ಜೊತೆಗೆ ಸೇನೆ ಮುಂದಿನ ಎಲೆಕ್ಶನ್‌ಗೆ ಕೂಡ ರೆಡಿಯಾಗಿದ್ದು, ಇಂದು ಅದ್ರ ಬಗ್ಗೆ ಅನೌನ್ಸ್ ಮಾಡೋ ನಿರೀಕ್ಷೆಯಿದೆ ಎನ್ನಲಾಗಿದೆ. ತಾವು ಮಯನ್ಮಾರ್‌ ಆಡಳಿತ ವಹಿಸಿಕೊಂಡ 2ನೇ ವರ್ಷಕೋತ್ಸವವನ್ನ ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳೋಕೆ ಸೇನಾ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆದ್ರೆ ಇದನ್ನ ವಿರೋಧಿಸಿ ಅಲ್ಲಿನ ಪ್ರಜಾಪ್ರಭುತ್ವ ಪರ ಆಕ್ಟಿವಿಸ್ಟ್‌ಗಳು ವ್ಯಾಪಾರ ವಹಿವಾಟುಗಳನ್ನ ಬಂದ್‌ ಮಾಡುವಂತೆ ಕರೆಕೊಟ್ಟಿವೆ. ಇದೇ ವೇಳೆ ಸೇನೆ ವಿರುದ್ಧ ಪ್ರತಿಭಟನೆ ಮತ್ತು ಹಿಂಸಾಚಾರ ಹೆಚ್ಚಾಗೋ ಸಾಧ್ಯತೆ ಇದೆ ಅಂತ ಮಯನ್ಮಾರ್‌ನಲ್ಲಿರೋ ಅಮೆರಿಕ ರಾಯಭಾರಿ ಕಚೇರಿ ಎಚ್ಚರಿಸಿದೆ. ಜೊತೆಗೆ ಸೇನೆಯ ವಾರ್ಷಿಕೋತ್ಸವವನ್ನ ಟಾರ್ಗೆಟ್‌ ಮಾಡಿ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ ಕೆಲ ನೂತನ ನಿರ್ಬಂಧಗಳನ್ನ ಸೇನೆಯ ಮೇಲೆ ಹೇರಿವೆ. ಇನ್ನೊಂದ್‌ ಕಡೆ ಮಯನ್ಮಾರ್‌ನಲ್ಲಿ ಅಲ್ಲಿನ ಜನರ ವಿರೋಧದ ನಡುವೆಯೂ ಸೇನೆ ಆಡಳಿತದಲ್ಲಿ ಹಿಡಿತ ಸಾಧಿಸಿರೋದಕ್ಕೆ ಚೀನಾ ಮಾಡ್ತಿರೋ ಸಹಾಯ ಒಂದು ಮುಖ್ಯ ಕಾರಣ ಅಂತ ತಿಳಿದು ಬಂದಿದೆ. ಮಯನ್ಮಾರ್‌ನ ಸೇನಾ ಆಡಳಿತಕ್ಕೆ ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನ ವಿಸ್ತರಿಸಿದೆ ಅಂತ ಯುರೋಪ್‌ ಏಷ್ಯಾ ಫೌಂಡೇಷನ್‌ ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ಮಯನ್ಮಾರ್‌ ಅಧ್ಯಕ್ಷೆ ಆಂಗ್‌ ಸಾನ್‌ ಸೂಕಿ ಅವ್ರನ್ನ ಅಧಿಕಾರದಿಂದ ಕೆಳಗಿಳಿಸಿ ಸೇನೆ ಅಲ್ಲಿನ ಅಧಿಕಾರ ತೆಗೆದುಕೊಂಡ್ಮೇಲೆ ಅಲ್ಲಿನ ಜನ್ರು ಪ್ರತಿಭಟನೆಯನ್ನ ಮಾಡ್ತಿದಾರೆ. ಜೊತೆಗೆ ಜಗತ್ತಿನ ಇತರ ದೇಶಗಳು ಮಯನ್ಮಾರ್‌ ಸೇನಾ ಆಡಳಿತದ ಜೊತೆಗೆ ಮಾತುಕತೆ ನಡೆಸೋಕೆ ಹಿಂದೆ ಸರಿದ ಹೊತ್ತಲ್ಲಿ ಮಯನ್ಮಾರ್‌, ಚೀನಾಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿತ್ತು. ಅದೇ ರೀತಿ 2022ರ ಜುಲೈನಲ್ಲಿ ಚೀನಾ ವಿದೇಶಾಂಗ ಸಚಿವರಾಗಿದ್ದ ವಾಂಗ್‌ ಯಿ ಅವ್ರು ಮಯನ್ಮಾರ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ರು ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ನಲ್ಲಿ ಜನರ ವಿರೋಧದ ನಡುವೆಯೂ ಮಯನ್ಮಾರ್‌ನಲ್ಲಿ ಜುಂಟಾ ಅಧಿಕಾರ ನಡೆಸ್ತಾ ಇದೆ ಅಂದ್ರೆ ಅದಕ್ಕೆ ಚೀನಾದ ಸಪೋರ್ಟ್‌ ಕಾರಣ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply