ಮಿಜೋರಾಂಗೂ ಸೋಂಕಿದ ಮಣಿಪುರ ಹಿಂಸಾಚಾರ!

masthmagaa.com:

ಮಣಿಪುರದಲ್ಲಿ ಹಿಂಸಾಚಾರದ ವೇಳೆ ನಡೆದ ಒಂದೊಂದೇ ಭೀಕರ ಘಟನೆಗಳು ಬಹಿರಂಗವಾಗ್ತಿವೆ. ಇದೀಗ ಹಿಂಸಾಚಾರದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ 80 ವರ್ಷದ ವೃದ್ಧ ಪತ್ನಿಯನ್ನ ಸಜೀವ ದಹನ ಮಾಡಿರುವ ಧಾರುಣ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ಗುಂಪೊಂದು ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನ ಮನೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿದ್ದ ವಿಚಾರ ಈಗ ಬಹಿರಂಗವಾಗಿದ್ದು, ಈ ಘಟನೆ ಮೇ 28ರಂದು ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಸೆರೌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದ್‌ ಕಡೆ ಇಡೀ ದೇಶವನ್ನ ಬೆಚ್ಚಿ ಬೀಳಿಸಿದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ನಡೆದ ಅದೇ ದಿನ ಮಣಿಪುರದ ಕಾಂಗ್‌ಪೋಕ್ಷಿ ಜಿಲ್ಲೆಯಲ್ಲಿ ಮತ್ತಿಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೋಷಕರ ದೂರಿನ ಪ್ರಕಾರ, ಅಂದು ಕಾರ್ ವಾಶ್ ಗ್ಯಾರೆಜ್‌ನಲ್ಲಿ ಯುವತಿಯರು ಕೆಲಸ ಮಾಡುತ್ತಿದ್ದ ವೇಳೆ ಪುರುಷರ ದೊಡ್ಡ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ನಂತರ ಗ್ಯಾರೇಜ್ ಕೊಠಡಿಯೊಳಗೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ನಂತರ ಇಬ್ಬರನ್ನೂ ಹತ್ಯೆಗೈದು ಸಮೀಪದ ಕಾರ್ಖಾನೆಯೊಂದರ ಪಕ್ಕದಲ್ಲಿ ಶವಗಳನ್ನ ಎಸೆದುಹೋಗಿದ್ದಾರೆ ಎನ್ನಲಾಗಿದೆ. ತಮ್ಮ ಮಗಳ ಪತ್ತೆಯಾಗದಿರುವ ಬಗ್ಗೆ ದೂರು ನೀಡಿರುವ ತಾಯಿ, ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ

ಇನ್ನೊಂದ್‌ ಕಡೆ ಮಣಿಪುರ ಬಿಜೆಪಿ ಶಾಸಕರೊಬ್ರು ತಮ್ಮ ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನ ಸರಿಯಾಗಿ ಹ್ಯಾಂಡಲ್‌ ಮಾಡದ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನ ಟೀಕಿಸಿದ್ದಾರೆ. ಹಿಂಸಾಚಾರದ ಕುರಿತು ಮೋದಿಯವ್ರು ಒಂದು ಬಾರಿಯೂ ಮಾತಾಡಿರಲಿಲ್ಲ, 79 ದಿನಗಳ ನಂತ್ರ ಮಾತಾಡಿದ್ದಾರೆ. ಇಂತಹ ದೊಡ್ಡ ಹಿಂಸಾಚಾರ ನಡೆದಾಗ 79 ದಿನ ಬಿಡಿ.. ಒಂದು ವಾರ ತಡ ಮಾಡಿದ್ರುನು ಲೇಟ್‌ ಎನಿಸಲಿದೆ ಅಂತ ಬಿಜೆಪಿ ಶಾಸಕ ಪೊಲಿಯನ್‌ಲಾಲ್‌ ಹಾಕಿಪ್‌ ಹೇಳಿದ್ದಾರೆ. ಜೊತೆಗೆ ಮೋದಿಯವರ ಅಮೆರಿಕ ಪ್ರವಾಸವನ್ನ ಉಲ್ಲೇಖಿಸಿ ಪ್ರಧಾನಿಯವರು ತಪ್ಪಾದ ಆದ್ಯತೆಗಳನ್ನ ಹೊಂದಿದ್ದಾರೆ ಅಂತ ಹೇಳಿದ್ದಾರೆ. ಮೋದಿವರನ್ನ ಭೇಟಿ ಮಾಡಲು ನಾವು ಬಹಳ ಪ್ರಯತ್ನಿಸಿದ್ದು, ಅಪಾಯಿಂಟ್‌ಮೆಂಟ್‌ ಕೇಳಿದ್ರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಲ್ಲಿಯವರೆಗೂ ನಾವು ಪರಿಸ್ಥಿತಿ ಬಗ್ಗೆ ಅವರ ಬಳಿ ಮಾತಾಡಲು ಕಾಯುತ್ತಿದ್ದೇವೆ ಅಂತ ಹಾಕಿಪ್‌ ಇಂಟರ್‌ವ್ಯೂ ಒಂದ್ರಲ್ಲಿ ಹೇಳಿದ್ದಾರೆ. ಅಷ್ಟೆ ಅಲ್ದೆ ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ಬಗ್ಗೆ ಸಿಎಂ ಬಿರೇನ್‌ ಸಿಂಗ್‌ ಹೇಳಿರೋದು ಘಟನೆಯನ್ನ ಮರೆಮಾಚುವ ಪ್ರಯತ್ನ. ಯಾಕಂದ್ರೆ 99% ಹಿಂಸಾಚಾರಕ್ಕೆ ಪೊಲೀಸ್‌ ಕಮಾಂಡೋಗಳು ಮೈಥಿ ಜೊತೆಯಲ್ಲಿ ಕೈಜೋಡಿಸಿರೋದೆ ಕಾರಣ ಅಂತ ಹಾಕಿಪ್‌ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ದೇಶ ಹಾಗೂ ಕೆಲವು ವಿಚಾರ ಬಂದಾಗ ನಾವು ಪಕ್ಷವನ್ನ ಮೀರಿ ಮುಂದೆ ಹೋಗ್ಬೇಕಾಗುತ್ತೆ ಅಂತ ಹಾಕಿಪ್‌ ಹೇಳಿಕೆ ಕೊಟ್ಟಿದ್ದಾರೆ.

ಇತ್ತ ಮಣಿಪುರದ ಹಿಂಸಾಚಾರ ಮಿಜೋರಾಂಗೂ ಹಬ್ಬಿರೋ ರೀತಿ ಕಾಣ್ತಿದೆ. ಮಿಜೋರಾಂನ ಬಂಡುಕೋರರ ಸಂಘಟನೆಯೊಂದು ಅಲ್ಲಿರುವ ಮೈಥಿ ಸಮುದಾಯಕ್ಕೆ ಮಣಿಪುರದಲ್ಲಿ ದುಷ್ಕರ್ಮಿಗಳಿಂದ ನಡೆಯುತ್ತಿರುವ ಅಮಾನವೀಯ ಹಾಗೂ ನೀಚ ಕೃತ್ಯಗಳಿಂದ ಸಂಘರ್ಷ ಹೆಚ್ಚಾಗ್ತಿದ್ದು, ಮಿಜೋರಾಂ ಇನ್ಮುಂದೆ ಮೈತೇಯಿಗಳ ಪಾಲಿಗೆ ಸುರಕ್ಷಿತವಲ್ಲ” ಅಂತ ಬೆದರಿಕೆ ಒಡ್ಡಿದೆ. ಈ ಹಿನ್ನಲೆ ಅಲ್ಲಿರುವ ಮೈಥಿ ಸಮುದಾಯದವರು ಮಿಜೋರಾಂ ತೊರೆಯಲು ಪ್ರಾರಂಭಿಸಿದ್ದಾರೆ. ಅಂದ್ಹಾಗೆ ಮಿಜೋರಾಂನಲ್ಲಿರೋ ಮಿಜೋ ಸಮುದಾಯಕ್ಕೂ ಮಣಿಪುರದ ಕುಕಿ ಸಮುದಾಯಕ್ಕೂ ಗಾಢ ಸಂಬಂಧ ಇದೆ. ಹೀಗಾಗಿ ಮಿಜೋರಾಂನಲ್ಲಿರೋ ಮೈಥಿಗಳಿಗೆ ಇವ್ರು ಬೆದರಿಕೆ ಒಡ್ಡಿದ್ದಾರೆ. ಇನ್ನು ಮೈಥಿಗಳು ಮಿಜೋರಾಂನಿಂದ ಬರಲು ಪ್ರಾರಂಭಿಸಿದ ಬಳಿಕ ಮಣಿಪುರ ಸರ್ಕಾರ ವಿಮಾನ ವ್ಯವಸ್ಥೆ ಮಾಡೋದಾಗಿ ಹೇಳಿದೆ. ಮಿಜೋರಾಂ ಸರ್ಕಾರ ಮಾತ್ರ ಮೈಥಿಗಳಿಗೆ ರಕ್ಷಣೆ ನೀಡೋದಾಗಿ ಹೇಳಿದೆ.

ಮತ್ತೊಂದ್‌ ಕಡೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್‌ ಅವ್ರು ಮಣಿಪುರಕ್ಕೆ ಭೇಟಿ ನೀಡಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಾಗಿರುವ ಮಹಿಳಾ ಸಂತ್ರಸ್ತರ ಜೊತೆ ಮಾತನಾಡಿ, ಅವರಿಗೆ ಸಂತ್ವಾನ ಹೇಳಲು ಬಂದಿರೋದಾಗಿ ಹೇಳಿದ್ದಾರೆ. ಅಂದ್ಹಾಗೆ ಸ್ವಾತಿ ಅವ್ರಿಗೆ ಭದ್ರತಾ ಸಮಸ್ಯೆಯಿಂದಾಗಿ ತಮ್ಮ ಭೇಟಿ ಮುಂದೂಡುವಂತೆ ಮಣಿಪುರ ಸರ್ಕಾರ ಸೂಚಿಸಿತ್ತು. ಆದ್ರೂ ಸ್ವಾತಿ ಅವ್ರು ಮಣಿಪುರಕ್ಕೆ ಭೇಟಿ ಕೊಟ್ಟಿದ್ದಾರೆ. ಮತ್ತೊಂದ್‌ ಕಡೆ ಮಹಿಳೆಯರ ಬೆತ್ತಲೆ ಮೆರವಣಿಗೆಯನ್ನ ಖಂಡಿಸಿ ಮಣಿಪುರ, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ಕಡೆ ಪ್ರತಿಭಟನೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply