ಡಿಕೆ ಡಿಚ್ಚಿ, ಸಿದ್ದು ಗುಟುರು, ಕಾಂಗ್ರೆಸ್‌ನಲ್ಲಿ ಜೋರಾಗ್ತಿದೆಯಾ ಭಿನ್ನರಾಗ?

masthmagaa.com:

ರಾಜ್ಯ ಕಾಂಗ್ರೆಸ್‌ನಲ್ಲಿ ಇದ್ದ ಭಿನ್ನರಾಗ ಈಗ ದೊಡ್ಡದಾಗಿ ಕೇಳೋಕೆ ಶುರುವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನಡುವಿನ ಒಳಜಗಳ ಮತ್ತಷ್ಟು ತೀವ್ರವಾಗುವ ವಾತವರಣ ಉಂಟಾಗಿದೆ. ಭಾನುವಾರ ನಡೆದ ಒಕ್ಕಲಿಗ ಸಮಾವೇಶದಲ್ಲಿ ಕೆಪಿಸಿಸಿ ಪ್ರೆಸಿಡೆಂಟ್‌ ಡಿಕೆಶಿ ಆಡಿರೋ ಮಾತು ಕಾಂಗ್ರೆಸ್‌ ಪಾಳಯದಲ್ಲಿ ಸಿದ್ದು ಹಾಗೂ ಡಿಕೆಶಿ ಬೆಂಬಲಿಗರ ನಡುವೆ ದೊಡ್ಡ ಕೋಲಾಹಲ ಉಂಟು ಮಾಡಿದೆ. ಸಮಾವೇಶದಲ್ಲಿ ಮಾತನಾಡಿದ ಡಿಕೆ, ಎಸ್ಎಂ ಕೃಷ್ಣ ಅವರ ನಂತರ ಒಕ್ಕಲಿಗ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲಿ ಸಮುದಾಯ ಈ ಅವಕಾಶ ಮಿಸ್‌ ಮಾಡ್ಕೋಬಾರ್ದು’ ಅಂತ ಹೇಳಿದ್ರು. ಇದೇ ಈಗ ಎರಡು ಬಣಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ. ಇತ್ತ ಸಿದ್ದರಾಮಯ್ಯ ಕೂಡ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದು ಡಿಕೆಗೆ ಮೆಜಾರಿಟಿಯ ಬಾಣ ಬಿಟ್ಟಿದ್ದಾರೆ. ಖಾಸಗೀ ಮಾಧ್ಯಮವೊಂದಕ್ಕೆ ಸಂದರ್ಶನದಲ್ಲಿ ಮಾತನಾಡಿರೋ ಸಿದ್ದು ʻMLAಗಳು ಯಾರಿಗೆ ಬೆಂಬಲ ಕೊಡ್ತಾರೋ, ಹೈಕಮಾಂಡ್‌ ಯಾರನ್ನ ಹೇಳುತ್ತೋ ಅವರು ಮುಖ್ಯಮಂತ್ರಿ ಆಗ್ತಾರೆ. ಆಸೆ ಪಡೋದ್ರಲ್ಲಿ ತಪ್ಪೇನು ಇಲ್ಲ. ಅವರ ಸಮುದಾಯದವರ ಹತ್ರ ಅವರು ಕೇಳ್ಕೊಂಡಿದ್ದಾರೆ. ಅದ್ರಲ್ಲೇನು ತಪ್ಪಿಲ್ಲ. ಹಂಗಂತ ಆಸೆ ಪಟ್ಟೋರೆಲ್ಲ ಸಿಎಂ ಕೂಡ ಆಗೋಕಾಗಲ್ಲ. ನನಗೆ ಅವಕಾಶ ಬಂದ್ರೆ ನಾನು ಕೂಡ ಬಿಡೋಲ್ಲ ಅಂತ ಗುಟುರು ಹಾಕಿದ್ದಾರೆ. ಇನ್ನು ಸಿದ್ದುಗೆ ಟಕ್ಕರ್‌ ಕೊಡೋ ರೀತಿ ಮಾತನಾಡಿರೋ ಡಿಕೆ ʻನಮ್ಮಲ್ಲಿ ಬಣ ರಾಜಕೀಯ ಇಲ್ಲ. ನಾವು ಸಾಮೂಹಿಕವಾಗಿ ಚುನಾವಣೆಗೆ ಹೋಗ್ತೀವಿ. ನಾನೇನು ಸನ್ಯಾಸಿ ಅಲ್ಲ ನಾನು ಖಾವಿ ತೊಟ್ಕೊಂಡು ಕೂತಿಲ್ಲ. ಹೈಕಮಾಂಡ್‌ ಹೇಳಿದಂತೆ ಕೇಳ್ತೀವಿ ಅಂತ ಉತ್ತರ ಕೊಟ್ಟಿದ್ದಾರೆ. ಇತ್ತ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಚರ್ಚೆ ನಡೆತೀರೋದಕ್ಕೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು ಸಿಎಂ ಕುರ್ಚಿ ಖಾಲಿ ಇಲ್ಲ. ಇಬ್ಬರು ಭ್ರಮೆಯಲ್ಲಿದ್ದಾರೆ ಅಂತ ಕುಟುಕಿದ್ದಾರೆ.

-masthmagaa.com

Contact Us for Advertisement

Leave a Reply