ಇರಾನ್‌-ಪಾಕ್‌ ಮಾತುಕತೆ! ಕಾಶ್ಮೀರ ವಿಚಾರ ಮುಂದಿಟ್ಟ ಪಾಕ್‌!

masthmagaa.com:

ಕಂಡ ಕಂಡವರ ಜೊತೆ ಕಾಶ್ಮೀರದ ರಾಗ ಹಾಡ್ತಿರೋ ಪಾಕಿಸ್ತಾನಕ್ಕೆ ಈಗ ಇರಾನ್‌ ಕೂಡ ದೊಡ್ಡ ಮುಖಭಂಗ ಮಾಡಿದೆ. ಕಾಶ್ಮೀರದ ವಿಚಾರದಲ್ಲಿ ನಾವಿಲ್ಲ ಅಂತ ಇರಾನ್ ಸೈಲೆಂಟ್‌ ಆಗಿ ಕೈ ತೊಳ್ಕೊಂಡಿದೆ. ನಿನ್ನೆ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪಾಕ್‌ಗೆ ಭೇಟಿ ನೀಡಿ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಜೊತೆ ಮಾತುಕತೆ ನಡೆಸಿದ್ರು. ಇತ್ತೀಚಿಗಷ್ಟೇ ಒಬ್ರ ಮೇಲೊಬ್ರು ಏರ್‌ಸ್ಟ್ರೈಕ್‌ ಮಾಡ್ಕೊಂಡು ಜಗಳ ಆಡಿದ್ರಲ್ಲ…ಸೋ ಅದನ್ನ ತಣ್ಣಗೆ ಮಾಡೋಣ ಅಂತ ಈ ಭೇಟಿಯಾಗಿತ್ತು. ಆದ್ರೆ ಆ ಸಭೆಯಲ್ಲೂ ಪಾಕ್‌ ಕಾಶ್ಮೀರದ ವಿಚಾರ ಹಿಡ್ಕೊಂಡು ನೇತಾಡಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಿದೆ. ಭಾರತ ಕಾಶ್ಮೀರ ಮುಸ್ಲಿಮರನ್ನ ಹೀನಾಯವಾಗಿ ನಡೆಸಿಕೊಳ್ತಿದೆ. ಇದರ ಬಗ್ಗೆ ದಯವಿಟ್ಟು ಮಾತಾಡಿ ಅಂತ ಇರಾನ್‌ ಬಳಿ ಪಾಕ್‌ ಪಿಎಂ ಅಲವತ್ತುಕೊಂಡಿದ್ದಾರೆ. ಆದ್ರೆ ಇರಾನ್‌ ಅಧ್ಯಕ್ಷರಿಂದ ಈ ಬಗ್ಗೆ ಯಾವುದೇ ಕಾಮೆಂಟ್‌ ಬಂದಿಲ್ಲ. ಕಾಶ್ಮೀರ ವಿಚಾರವಾಗಿ ಅವರು ಮಾತೇ ಆಡಿಲ್ಲ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ ಭೇಟಿ ವೇಳೆ ಪಾಲೇಸ್ತೇನ್‌ ವಿಚಾರ ಕೂಡ ಚರ್ಚೆ ಆಗಿದ್ದು ಅದರ ಬಗ್ಗೆ ಮಾತ್ರ ಇರಾನ್‌ ರಿಯಾಕ್ಟ್‌ ಮಾಡಿದೆ, ಪ್ಯಾಲೆಸ್ತೀನರ ದಬ್ಬಾಳಿಕೆ ವಿರುದ್ಧ ಹೋರಾಡೋರಿಗೆ ಇರಾನ್‌ ಸಪೋರ್ಟ್‌ ನೀಡುತ್ತೆ ಅಂತ ಹೇಳಿದ್ದಾರೆ . ಅದನ್ನ ಬಿಟ್ರೆ ಕಾಶ್ಮೀರದ ಪದವನ್ನೇ ತೆಗೆದಿಲ್ಲ ಅಂತ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ನಿಮ್ಮ ಅರ್ಥ ಇಲ್ಲದ ಹಳೇ ರಾಗ ಕೇಳೋರು ಯಾರೂ ಅಲ್ಲ ಅನ್ನೋ ಮೆಸೇಜನ್ನ ಇರಾನ್‌ ಪಾಕಿಸ್ತಾನಕ್ಕೆ ಕೊಟ್ಟಂತಾಗಿದೆ. ಕೆಲ ದಿನಗಳ ಹಿಂದೆ ಕೂಡ ಪಾಕಿಸ್ತಾನ ಸೌದಿ ಅರೇಬಿಯಾ ಜೊತೆಗೆ ಇದೇ ವಿಚಾರವಾಗಿ ಚರ್ಚೆಮಾಡಿತ್ತು. ಆದ್ರೆ ಸೌದಿ ಯುವರಾಜ ಕಿಂಗ್‌ ಸಲ್ಮಾನ್‌ ಭಾರತದ ಜೊತೆಗೆ ಚೆನ್ನಾಗಿರಿ ಅಂತ ಶೆಹಬಾಜ್‌ಗೆ ಬುದ್ದಿ ಹೇಳಿ, ತಲೆ ಸವರಿ ಕಳುಹಿಸಿದ್ರು. ಸುನ್ನಿ ದೇಶಗಳ ದೊಡ್ಡಣ್ಣ ನೋಡಿ! ಸೋ ಅವರೇ ಹೇಳಿದ ಮೇಲೆ ಪಾಕ್‌ ಒಂದಷ್ಟು ದಿನ ಮೆತ್ತಗಾಗಬೋದು ಅಂತ ಹೇಳಲಾಗ್ತಿತ್ತು. ಅದಕ್ಕೆ ತಕ್ಕಂತೆ ಮೊನ್ನೆ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಸುಧಾರಣೆ ಆಗಬೇಕು ಅಂತ ಶೆಹಬಾಜ್‌ ಅವರ ಅಣ್ಣನ ಮಗಳು, ಪಂಜಾಬ್‌ ಸಿಎಂ ಕೂಡ ಆಗಿರೋ ಮರ್ಯಮ್‌ ನವಾಜ್‌ ಅವ್ರು ಒಂದಷ್ಟು ಪಾಸಿಟಿವ್‌ ಹೇಳಿಕೆ ಕೊಟ್ಟಿದ್ರು. ಆದ್ರೆ ಅದ್ಯಾಕೋ ಇರಾನ್‌ ಅಧ್ಯಕ್ಷರನ್ನ ಕಂಡ ಕೂಡಲೇ ಪಾಕ್‌ ಪಿಎಂ ಬಾಯಿ ನಿಂತಿಲ್ಲ. ಮತ್ತೆ ಕಾಶ್ಮೀರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇಲ್ಲಿ ಪಾಕಿಸ್ತಾನದ ಐಡಿಯಾ ಏನಂದ್ರೆ, ಹೇಗೂ ಇರಾನ್‌ ಭಾರತದ ಜೊತೆಗೆ ಚೆನ್ನಾಗಿದೆ. ಚಹಬಾರ್‌ ಬಂದರನ್ನೂ ಇರಾನ್‌ ಭಾರತಕ್ಕೆ ಕೊಟ್ಟಿದೆ. ಸೋ ಇವರಿಬ್ರ ಮಧ್ಯೆ ಜಗಳ ಅಂಟಾಕಿದ್ರೆ ನಂಗೂ ಒಳ್ಳೇದು, ನನ್ನ ಪಕ್ಕದಲ್ಲಿ ಭಾರತ ಬಂದು ಕೂರೋದು ತಪ್ಪುತ್ತೆ.. ಹಾಗೇ ನಾಳೆ ಮುಸ್ಲಿಂ ದೇಶಗಳ ಮನಸ್ಸಲ್ಲಿ ಭಾರತದ ವಿರುದ್ದ ಒಂದು ವಿಷಬೀಜವನ್ನ ಬಿತ್ತಬೋದು ಅನ್ನೋ ಯೋಚನೆಯಲ್ಲಿ ಪಾಕ್‌ ಇತ್ತು. ಆದ್ರೆ ಪಾಕ್‌ ಕನಸಿಗೆ ಇರಾನ್‌ ತಣ್ಣೀರು ಹಾಕಿದೆ. ಭಾರತದ ವಿರುದ್ದ ಒಂದೇ ಒಂದು ಪದ ಮಾತಾಡಿಲ್ಲ. ಅಂದ್ಹಾಗೆ ಇರಾನ್‌ ಹಾಗೂ ಭಾರತದ ಸಂಬಂಧ ಕೂಡ ಚೆನ್ನಾಗೇ ಇದೆ. ಇಸ್ರೇಲ್‌ ವಿಚಾರದಲ್ಲಿ ಎರಡೂ ದೇಶಗಳ ನಿಲುವು ಬೇರೆ ಇದ್ರೂ ವ್ಯಾಪಾರ ಕ್ಷೇತ್ರ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಹಾಗೂ ಇರಾನ್‌ಗಳು ಒಬ್ರಿಗೊಬ್ರು ಸಹಕಾರವನ್ನ ಹೊಂದಿವೆ. ಮೊನ್ನೆ ಕೂಡ ಇಸ್ರೇಲ್‌ ಜೊತೆಗಿನ ಕಾಳಗದ ಟೈಮಲ್ಲಿ ಇರಾನ್‌ ಹಾಗೂ ಭಾರತ ಮಾತುಕತೆ ಮಾಡಿದ್ರು. ಮಿಡಲ್‌ ಈಸ್ಟ್ ಪರಿಸ್ಥಿತಿ ಬಗ್ಗೆ ಇರಾನ್‌ ಭಾರತಕ್ಕೆ ಹೇಳಿದೆ ಅಂತ ಭಾರತದಲ್ಲಿನ ಇರಾನ್‌ ರಾಯಭಾರಿ ಸ್ಟೇಟ್‌ಮೆಂಟ್‌ ಕೊಟ್ಟಿದ್ರು. ಸೋ ಅಷ್ಟರ ಮಟ್ಟಿಗೆ ಎರಡೂ ದೇಶಗಳು ಚೆನ್ನಾಗಿವೆ. ಹೀಗಾಗಿನೇ ಇದಕ್ಕೆ ಬತ್ತಿ ಇಡೋ ಕೆಲಸಕ್ಕೆ ಪಾಕ್‌ ಪ್ರಯತ್ನ ಮಾಡಿತ್ತು. ಅದು ಫೇಲ್‌ ಆಗಿದೆ. ಇನ್ನು ಇರಾನ್‌ ಮತ್ತು ಪಾಕ್‌ ಭೇಟಿ ವೇಳೆ ಕಾಶ್ಮೀರ ವಿಚಾರವಾಗಿ ಪಾಕ್‌ಗೆ ಮುಖಭಂಗವಾದ್ರೂ, ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಸೋ ಬಗ್ಗೆ ಮಾತುಕತೆ ನಡೆಸಿವೆ. ಜೊತೆಗೆ ಭಯೋತ್ಪಾದನೆ ನಿರ್ಮೂಲನೆಗೆ ಜಂಟಿ ಪ್ರಯತ್ನ ನಡೆಸೋಕೆ ಒಪ್ಪಿಕೊಂಡಿವೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಇಬ್ರಾಹಿಂ ರೈಸಿ, ʻಉಭಯ ದೇಶಗಳ ಸಂಬಂಧವನ್ನ ಇನ್ನೂ ಹೆಚ್ಚು ಬಲಪಡಿಸೋ ಬಗ್ಗೆ ಕಮಿಟ್‌ ಆಗಿದ್ದೇವೆ. ನಮ್ಮ ನಡುವಿನ ವ್ಯಾಪಾರದ ಪ್ರಮಾಣವನ್ನ 10 ಬಿಲಿಯನ್‌ ಡಾಲರ್‌ ಅಂದ್ರೆ 83 ಸಾವಿರ ಕೋಟಿ ರೂಪಾಯಿ ಹೆಚ್ಚಿಸೋಕೆ ಒಪ್ಪಂದ ಮಾಡ್ಕೊಂಡಿದ್ದೀವಿʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply