ಎಲೆಕ್ಷನ್ ನಿಲ್ಲಲ್ಲ, ನಿವೃತ್ತಿ ಮಾತೇ ಇಲ್ಲ! BSY ಭಾಷಣಕ್ಕೆ ಮೋದಿ ಮೆಚ್ಚುಗೆ!

masthmagaa.com:

2023-24ನೇ ಸಾಲಿನ ಬಜೆಟ್‌ ಅಧಿವೇಶನ ಹಾಗೂ 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಇಂದು ಕೊನೆಗೊಂಡಿದೆ. ಇನ್ಮುಂದೆ ಚುನಾವಣೆ ಸ್ಪರ್ಧಿಸಲ್ಲ ಅಂದಿರೋ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಸದನದಲ್ಲಿ ಇದೇ ಕೊನೆ ದಿನವಾಗಿದೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಮತ್ತೆ ಈ ಸದನಕ್ಕೆ ಬರೋದಿಲ್ಲ. ಇದೇ ನನ್ನ ವಿದಾಯದ ಭಾಷಣ ಅಂತ ಹೇಳಿ ಯಡಿಯೂರಪ್ಪ ಅವ್ರು ಭಾವುಕರಾಗಿದ್ರು. ಜೊತೆಗೆ ನಾನು ನಿವೃತ್ತಿ ತೆಗೆದುಕೊಳ್ಳೊ ಮಾತೇ ಇಲ್ಲ, ಬಿಜೆಪಿ ಪಕ್ಷವನ್ನ ಮತ್ತೆ ಆಡಳಿತಕ್ಕೆ ತರೋಕೆ ನನ್ನ ಕೈಲಾದಷ್ಟು ಪ್ರಯತ್ನ ಮಾಡ್ತೀನಿ ಅಂತ ಹೇಳಿದ್ದಾರೆ. ಇದೇ ವೇಳೆ ತಮ್ಮ ಕೊನೆ ಭಾಷಣದಲ್ಲಿ ಬಿಜೆಪಿ ತಮ್ಮನ್ನ ಕಡೆಗಣಿಸುತ್ತಿದೆ ಅನ್ನೊ ವದಂತಿಗಳಿಗೆ ಉತ್ತರಿಸಿದ ಯಡಿಯೂರಪ್ಪ, ನನ್ನನ್ನ ಮನೆಯಲ್ಲಿ ಕೂರಿಸಬೇಕು ಅಂತ ಅಂದುಕೊಂಡಿದ್ರೆ ಅದು ಸುಳ್ಳು. ಬಿಜೆಪಿ ಹಾಗೂ ಪ್ರಧಾನಿ ಮೋದಿ ನನಗೆ ಸಾಕಷ್ಟು ಸ್ಥಾನಮಾನ ನೀಡಿದ್ದಾರೆ ಅಂತ ತಿರುಗೇಟು ನೀಡಿದ್ರು. ಹಾಗೂ ಮೋದಿ ಅವ್ರು ನೀಡಿದ ಅವಕಾಶಕ್ಕೆ ಧನ್ಯವಾದ ತಿಳಿಸಿದ್ರು. ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವ್ರ ಕಾರ್ಯವೈಖರಿಯನ್ನ ಹೊಗಳಿ, ನೀವೆಲ್ಲರೂ ಮತ್ತೊಮ್ಮೆ ಆಯ್ಕೆ ಆಗಿ ಬನ್ನಿ ಅಂತ ಹೇಳಿದ್ದಾರೆ. ಈ ವಿಡಿಯೋವನ್ನ ರಾಜ್ಯ ಬಿಜೆಪಿ ಟ್ವೀಟರ್‌ನಲ್ಲಿ ಶೇರ್‌ ಮಾಡಿತ್ತು. ಇನ್ನು ಯಡಿಯೂರಪ್ಪನವರ ಮಾಡಿದ ಭಾಷಣಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದಲ್ಲಿಯೇ ಟ್ವೀಟ್‌ ಮಾಡಿರೊ ಪ್ರಧಾನಿ, ʻಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಅನಿಸಿದೆ. ಇದ್ರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆʼ ಅಂತ ಹೇಳಿದ್ದಾರೆ. ಇತ್ತ ಸದನದಲ್ಲಿ ಪಕ್ಷದ ಶಾಸಕರು, ಮಂತ್ರಿಗಳು, ವಿರೋಧ ಪಕ್ಷದ ಶಾಸಕರು ಹೀಗೆ ಸರ್ವಪಕ್ಷ ಶಾಸಕರು ಯಡಿಯೂರಪ್ಪ ಅವರ ಬಗ್ಗೆ ವಿದಾಯದ ಭಾಷಣ ಮಾಡಿ, ಅವರ ಕಾರ್ಯವೈಖರಿಯನ್ನ ಹೊಗಳಿದ್ದಾರೆ. ಇನ್ನು 15ನೇ ವಿಧಾನಸಭೆಯಲ್ಲಿ ಒಟ್ಟು 167 ದಿನಗಳ ಕಾಲ ಕಲಾಪ ನಡೆದಿದ್ದು, 167 ದಿನಗಳಲ್ಲಿ ಒಟ್ಟು 760 ಗಂಟೆ ಅಧಿವೇಶನ ನಡೆದಿದೆ. ಈ ಅವಧಿಯಲ್ಲಿ ಒಟ್ಟು 200 ವಿಧೇಯಕಗಳ ಮಂಡನೆಯಾಗಿದೆ. ಹಾಗೇ 6,754 ಚುಕ್ಕೆ ಗುರುತಿನ ಪ್ರಶ್ನೆಗಳು, 27 ಸಾವಿರ ಚುಕ್ಕೆ ರಹಿತ ಪ್ರಶ್ನೆಗಳನ್ನು ಕೇಳಲಾಗಿದೆ.

-masthmagaa.com

Contact Us for Advertisement

Leave a Reply