ತೆಲಂಗಾಣ: ಚಲಿಸುತ್ತಿದ್ದ ರೈಲಿಗೆ ಬೆಂಕಿ! ಸಿನಿಮೀಯ ರಕ್ಷಣೆ!

masthmagaa.com:

ಇತ್ತೀಚೆಗಷ್ಟೆ ಒಡಿಶಾದಲ್ಲಿ ಭೀಕರ ತ್ರಿವಳಿ ರೈಲು ಅಪಘಾತ ಸಂಭವಿಸಿ 290ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದೀಗ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬಳಿ ಚಲಿಸುತ್ತಿದ್ದ ಹೌರಾ-ಸಿಕಂದರಾಬಾದ್ ಫಲಕ್​ನುಮಾ ಎಕ್ಸ್​ಪ್ರೆಸ್​ ರೈಲಿನ 3 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಗೊತ್ತಾಗ್ತಿದ್ದಂತೇ ರೈಲನ್ನ ತಕ್ಷಣವೇ ನಿಲ್ಲಿಸಲಾಗಿದ್ದು, ಪ್ರಯಾಣಿಕರು ಬೋಗಿಯಿಂದ ಹೊರಗೆ ಹಾರಿದ್ದಾರೆ. ಇದೇ ವೇಳೆ ಇತರ ಬೋಗಿಗಳಿಗೆ ಬೆಂಕಿ ಹರಡದಂತೆ ತಪ್ಪಿಸೋಕೆ ರೈಲಿನ 3 ಬೋಗಿಗಳನ್ನ ಬೇರ್ಪಡಿಸಲಾಗಿದೆ. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದ್ರೆ ರೈಲಿನ ಈ 3 ಬೋಗಿಗಳು ಮಾತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಘಟನಾ ಸ್ಥಳಕ್ಕೆ ರೈಲ್ವೆ, ಪೊಲೀಸ್‌ ಹಾಗೂ ಫೈರ್‌ ಡಿಪಾರ್ಟ್‌ಮೆಂಟ್‌ ಅಧಿಕಾರಿಗಳು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಅಂತ ತೆಲಂಗಾಣ DGP ಮಾಹಿತಿ ನೀಡಿದ್ದಾರೆ. ಒಟ್ಟು 18 ಬೋಗಿಗಳಿದ್ದ ರೈಲಿನಲ್ಲಿ 11 ಬೋಗಿಗಳನ್ನ ಬೇರೆ ಮಾಡಲಾಗಿದ್ದು, 7 ಬೋಗಿಗಳಿಗೆ ಬೆಂಕಿ ವ್ಯಾಪಿಸಿದೆ. ಅದ್ರಲ್ಲಿ 3 ಮಾತ್ರ ಕಂಪ್ಲೀಟ್‌ ಹಾನಿಯಾಗಿವೆ. ಇನ್ನೊಂದ್‌ ಕಡೆ ಒಡಿಶಾದ ತ್ರಿವಳಿ ರೈಲು ಅಪಘಾತ ಕೇಸ್‌ಗೆ ಸಂಬಂಧಿಸಿದಂತೆ 3 ಜನರನ್ನ CBI ಬಂಧಿಸಿದೆ. ಬಂಧಿತ ರೈಲ್ವೆ ಉದ್ಯೋಗಿಗಳ ಮೇಲೆ ಉದ್ದೇಶಪೂರ್ವಕವಲ್ಲದ ಕೊಲೆ ಹಾಗೂ ಸಾಕ್ಷಿನಾಶ ಆರೋಪವನ್ನ ಹೊರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಸುರಕ್ಷತಾ ಆಯುಕ್ತರು ಸಲ್ಲಿಸಿದ್ದ ವರದಿಯಲ್ಲಿ, ಹ್ಯೂಮನ್‌ ಎರರ್‌ ಮತ್ತು ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಅಂತ ಹೇಳಿತ್ತು. ಇದೀಗ ಮೂರು ಜನರನ್ನ ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply