G20: ಭಾರತಕ್ಕೆ ಬಂತು ಜಗತ್ತು!

masthmagaa.com:

ಭಾರತದ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಜಾಗತಿಕ ನಾಯಕರು ದೆಹಲಿಗೆ ಆಗಮಿಸುತ್ತಿದ್ದಾರೆ. ಇದೀಗ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ದಿಲ್ಲಿಗೆ ಬಂದಿಳಿದಿದ್ದಾರೆ. ಈ ವೇಳೆ ಮಾತಾಡಿರುವ ಸುನಾಕ್‌, ಭಾರತಕ್ಕೆ ಬಂದಿರೋದು ನಿಜವಾಗಲೂ ವಿಶೇಷವಾಗಿದೆ. ಭಾರತ ನನಗೆ ತುಂಬಾ ಹತ್ತಿರದ ಹಾಗೂ ಪ್ರಿಯವಾದ ದೇಶ. ಅಷ್ಟೆ ಅಲ್ದೆ ಎಲ್ಲೋ ಒಂದ್‌ ಕಡೆ ನನ್ನನ್ನ ಪ್ರೀತಿಯಿಂದ ಭಾರತದ ಅಳಿಯ ಅಂತ ಕರೆಯೋದನ್ನ ನೋಡಿದ್ದೇನೆ ಅಂತ ಸುನಾಕ್‌ ಹಾಸ್ಯ ಮಾಡಿದ್ದಾರೆ. ಇನ್ನು ಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್‌, ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ, ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜುಗನ್ನಾಥ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ, ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌, ವಿಶ್ವ ಸಂಸ್ಥೆ ಮಹಾಕಾರ್ಯದರ್ಶಿ ಆಂಟೊನಿಯೋ ಗುಟೆರಸ್‌ ಸೇರಿದಂತೆ ಹಲವರು ದಿಲ್ಲಿಯಲ್ಲಿ ಲ್ಯಾಂಡ್‌ ಆಗಿದ್ದಾರೆ. ಇತ್ತ IMF ಮ್ಯಾನೇಜಿಂಗ್‌ ಡೈರಕ್ಟರ್‌ ಕ್ರಿಸ್ಟಲಿನಾ ಜಾರ್ಜೀವಾ ಅವ್ರು ಸಹ ದೆಹಲಿಗೆ ಆಗಮಿಸಿದ್ದು, ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿ ಸಂತಸಪಟ್ಟಿದ್ದಾರೆ. ಇನ್ನೊಂದ್‌ ಕಡೆ ಸಭೆಗಾಗಿ ಭಾರತಕ್ಕೆ ಆಗಮಿಸಿರುವ ಲೀಡರ್ಸ್‌ನ್ನ ಪ್ರಧಾನಿ ನರೇಂದ್ರ ಮೋದಿಯವರು Xನಲ್ಲಿ ಪೋಸ್ಟ್‌ ಹಾಕುವ ಮೂಲಕ ವೆಲ್‌ಕಮ್‌ ಮಾಡಿದ್ದಾರೆ. ಜೊತೆಗೆ ಭಾರತದ ಆತಿಥ್ಯವನ್ನ ಜಾಗತಿಕ ನಾಯಕರು ಇಷ್ಟ ಪಡ್ತಾರೆ ಎಂದು ಭಾವಿಸಿದ್ದೇನೆ ಅಂತ ಹೇಳಿದ್ದಾರೆ.

ಮತ್ತೊಂದ್‌ ಕಡೆ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಚೀನಾ ನಿಯೋಗದ ವಿರುದ್ಧ ಟಿಬೆಟಿನ ಜನರು ಪ್ರತಿಭಟನೆ ನಡೆಸಿದ್ದಾರೆ. ಉತ್ತರ ದಿಲ್ಲಿಯ ಮಜ್ನು ಕಾ ತಿಲಾದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಚೀನಾ ಸರ್ಕಾರದ ವಿರುದ್ಧ ಬ್ಯಾನರ್ ಹಿಡಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಅಲ್ಲಿಗೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದು, ಪ್ರತಿಭಟನೆ ಶಾಂತಿಯುತವಾಗಿತ್ತು ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಟಿಬೆಟ್‌ನಲ್ಲಿ ಚೀನಾದ ಕಾನೂನುಬಾಹಿರ ಆಕ್ರಮಣದ ವಿರುದ್ಧ ಟಿಬೆಟ್‌ ಯುವ ಕಾಂಗ್ರೆಸ್‌ ಈ ಪ್ರತಿಭಟನೆ ನಡೆಸಿದೆ.

-masthmagaa.com

Contact Us for Advertisement

Leave a Reply