NEP ಬದಲಿಗೆ SEP?: ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿದ ರಾಜ್ಯ ಸರ್ಕಾರ

masthmagaa.com:

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 2020(NEP)ಯನ್ನ ರದ್ದುಗೊಳಿಸಿರೋ ರಾಜ್ಯ ಸರ್ಕಾರ ಇದರ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ಮುಂದಾಗಿದೆ. ಇದೀಗ ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ತೋರಟ್‌ ಅಧ್ಯಕ್ಷತೆಯಲ್ಲಿ 15 ಸದಸ್ಯರ ಸಮಿತಿ ರಚಿಸಿ ಬುಧವಾರ ಆದೇಶ ಹೊರಡಿಸಿದೆ. ಈ ಬಗ್ಗೆ Xನಲ್ಲಿ ಬರೆದುಕೊಂಡಿರೋ ಸಿಎಂ ಸಿದ್ಧರಾಮಯ್ಯ “ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಪ್ರೊ. ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ʻರಾಜ್ಯ ಶಿಕ್ಷಣ ನೀತಿ ಸಮಿತಿʼಯನ್ನು ರಚಿಸಿ ಆದೇಶಿಸಲಾಗಿದೆ. ಈ ಸಮಿತಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಅವರ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನ ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ” ಅಂತ ಹೇಳಿದ್ದಾರೆ.

ಅಂದ್ಹಾಗೆ ರಾಜ್ಯ ಸರ್ಕಾರ NEP ರದ್ದುಪಡಿಸಿದ ವಿಚಾರವಾಗಿ ಮೊನ್ನೆ, ಅಂದ್ರೆ ಮಂಗಳವಾರ ಪ್ರತಿಕ್ರಿಯಿಸಿದ್ದ ಬಿಜೆಪಿ ಹಿರಿಯ ಮುಖಂಡ, ಮಾಜಿ ಸ್ಪೀಕರ್‌ ವಿಶ್ವೇಶ್ವರ್‌ ಹೆಗಡೆ ಕಾಗೇರಿ, “ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ತಜ್ಞರ ಸಲಹೆ ಪಡೆಯದೇ, ಪಾಲಕರು, ವಿದ್ಯಾರ್ಥಿಗಳ ಅಭಿಪ್ರಾಯ ಕೇಳದೇ ಪಠ್ಯಗಳನ್ನ ಬದಲಾಯಿಸಿದ್ದಾರೆ, ಎನ್‌ಇಪಿಯಲ್ಲಿ ಯಾವ ಅಂಶ ಸರಿಯಿಲ್ಲ ಅನ್ನೋದನ್ನ ಅವರು ಹೇಳ್ತಾಯಿಲ್ಲ. ಮೋದಿ ಸರ್ಕಾರ ರೂಪಿಸಿರೋ ಒಂದೇ ಕಾರಣಕ್ಕಾಗಿ ಅದನ್ನ ತೆಗೆಯಲು ಹೊರಟಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಡ ಬುದ್ಧಿಜೀವಿಗಳ ಕಪಿಮುಷ್ಠಿಯಲ್ಲಿದ್ದಾರೆ” ಅಂತ ಹೇಳಿ ಕಿಡಿಕಾರಿದ್ರು.

-amsthmagaa.com

Contact Us for Advertisement

Leave a Reply