ರಾಜ್ಯ ಸೇರಿದಂತೆ ಅಬ್ಬರಿಸುತ್ತಿದ್ದಾನೆ ವರುಣ! ಗುಜರಾತ್‌ನಲ್ಲಿ ಪ್ರವಾಹದ ಭೀತಿ!

masthmagaa.com:

ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೀತಾನೆ ಇದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಮಾನ ಇಲಾಖೆ ಹೇಳಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಎಂಬಲ್ಲಿ ಗರಿಷ್ಠ 188 ಮಿ.ಮೀ ಮಳೆಯಾಗಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಭಾರಿ ಮಳೆಯಾಗಲಿದೆ. ಮಲೆನಾಡು ಕೆಲವು ಕಡೆ ಸಾಧರಣ ಉಳಿದೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಧರಣ ಕೆಲವು ಕಡೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಗಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್ ಘೋಷಿಸಿದೆ. ಬೆಳಗಾವಿ, ಧಾರವಾಡ, ಹಾವೇರಿ ಹಾಸನ ಕೊಡುಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕರಾವಳಿ, ಉತ್ತರ ಕನ್ನಡ ಭಾಗಗಳಲ್ಲಿ ಮಳೆಯಿಂದಾಗಿ ಜನರು ತತ್ತರಿಸಿದ್ದಾರೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ಕೆಲವೆಡೆ ಆಸ್ತಿಪಾಸ್ತಿ ಹಾನಿಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕೆಆರ್‌ಎಸ್‌ ಡ್ಯಾಮಿನಿಂದ 72 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಹಿನ್ನಲೆ ಕಾವೇರಿ ನದಿ ತೀರದ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ರಂಗನತಿಟ್ಟು ನಡುಗಡ್ಡೆಗಳು ಕೂಡ ಮುಳುಗಡೆಯಾಗಬಹುದು ಎಂದು ಹೇಳಲಾಗ್ತ ಇದೆ. ಹಾರಂಗಿ ಜಲಾಶಯದಿಂದ ಕೂಡ 21 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಹಿನ್ನಲೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾರಂಗಿ-ಸೋಮವಾರಪೇಟೆ ರಸ್ತೆ ಮುಳುಗಡೆಯಾಗಿದ್ದು, ಕುಶಾಲನಗರ ಪಟ್ಟಣ ಪಂಚಾಯಿತಿ ಇಂದ ನದಿಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ. ದಕ್ಷಿಣ ಜಿಲ್ಲೆಯ ಪಂಜಿಕಲ್ಲು ಬಳಿ ಅಪಾಯದ ಸ್ಥಿತಿಯಲ್ಲಿದ್ದ ಗುಡ್ಡದ ಮತ್ತೊಂದು ಭಾಗ ಕುಸಿದಿರೋದಾಗಿ ವರದಿಯಾಗಿದೆ. ಮಂಗಳೂರಿನ ಅದ್ಯಪಾಡಿ ಬಳಿ ಮುಗೇರು ಸಂಪೂರ್ಣ ಜಲಾವೃತವಾಗಿದೆ. ಅತ್ತ ಮಳೆಯಿಂದ ಹಾಸನ-ಕೊಣನೂರು ರಸ್ತೆ ಸಂಚಾರ ಕೂಡ ಬಂದ್‌ ಆಗಿದೆ. ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಸ್ಕೆ ಎಂಬ ಗ್ರಾಮದಲ್ಲಿ ಗುಡ್ಡ ಕುಸಿದು ರಾತ್ರೋರಾತ್ರಿ 2 ಎಕರೆ ಕಾಫಿ ತೋಟ ನಾಶವಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಜೋಗ ಫಾಲ್ಸ್‌ ಬಳಿ ರಸ್ತೆಯೊಂದು ಕೊಚ್ಚಿ ಹೋಗಿದೆ. ಅತ್ತ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಅತಿಯಾದ ಮಳೆಯಿಂದ ಕೃಷ್ಣಾ ನದಿ ತೀರದ ಪ್ರದೇಶದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೆ ಚಿಕ್ಕೋಡಿ ಉಪವಿಭಾಗದಲ್ಲಿ 7 ಸೇತುವೆಗಳು ಜಲಾವೃತವಾಗಿವೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆ ಮಂಜೇ‍ಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಆಕಸ್ಮಿಕವಾಗಿ ಹೊಳಗೆ ಬಿದ್ದಿತ್ತು. ಇದ್ರಲ್ಲಿ ಕುಂಡಡ್ಕ ಮತ್ತು ಮಂಜೇಶ್ವರ್‌ ನಿವಾಸಿ ಇದ್ರು ಅವ್ರು ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಇದೀಗ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು ಇದುವರೆಗು ಯಾವುದೇ ಸುಳಿವು ಗೊತ್ತಾಗಿಲ್ಲ. ಇನ್ನು ಭಾರೀ ಮಳೆಯಿಂದ ತತ್ತರಿಸಿ ಹೊಗಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ನಾಳೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ದೇಶದ ಇತರ ಭಾಗಗಳಲ್ಲೂ ಮಳೆಯ ಅಬ್ಬರ ಕಡಿಮೆ ಏನಿಲ್ಲ. ಗುಜರಾತ್‌ ತೆಲಂಗಾಣ, ಮಹಾರಾಷ್ಟ್ರ ಕೇರಳದಲ್ಲಿ‌ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗಿತ್ತಿದ್ದು, ನದಿಗಳ ನೀರಿನ ಮಟ್ಟದ ಏರಿಕೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಹ್ಮದಾಬಾದ್‌ನಲ್ಲಿ ಒಂದೇ ರಾತ್ರಿ ಸುಮಾರು 228 ಮಿಲಿಮೀಟರ್‌ ಮಳೆಯಾಗಿದೆ. ದಕ್ಷಿಣ ಗುಜರಾತ್‌ ನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತುರ್ತು ಕಾರ್ಯಾಚರಣೆಗೆ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ್ದಾರೆ. ಇತ್ತ ಪ್ರಧಾನಿ ಮೋದಿ ಕೂಡ ಗುಜರಾತ್‌ನಲ್ಲಿ ಉಂಟಾದ ಪ್ರವಾಹದ ಪರಿಸ್ಥಿತಿಯನ್ನ ತಿಳಿಯೋದಕ್ಕೆ ಅಲ್ಲಿನ ಸಿಎಂಗೆ ಫೋನ್‌ ಮಾಡಿ ಮಾಹಿತಿ ಪಡೆದಿದ್ದಾರೆ. ನಮ್ಮ ನೆರೆಯ ತೆಲಂಗಾಣದಲ್ಲೂ ಮಳೆ ಜೋರಾಗಿದೆ. ಮಳೆಯ ನೀರಿನ ರಭಸಕ್ಕೆ ಮನೆ, ರಸ್ತೆ, ಎಲ್ಲವೂ ನಾಶವಾಗಿವೆ. ಕೃಷಿ ಭೂಮಿ ಆಸ್ತಿಪಾಸ್ತಿ ಹಾನಿಯಾಗಿದೆ. ಇನ್ನೂ ಮೂರು ದಿನಗಳಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ತೆಲಂಗಾಣ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಜನರನ್ನ ಸುರಕ್ಷಿತ ಸ್ಥಳಗಳಿಗೆ ತಲುಪಿಸೋಕೆ ರಕ್ಷಣಾ ತಂಡಗಳನ್ನ ನಿಯೋಜನೆ ಮಾಡಲಾಗಿದೆ. ತೆಲಂಗಾಣಕ್ಕೆ ಇನ್ನೂ ಮುಂದಿನ ನಾಲ್ಕೈದು ದಿನಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply