ರಾಜ್ಯದಲ್ಲಿ ಮುನಿದ ವರುಣ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌!

masthmagaa.com:

ರಾಜ್ಯದಲ್ಲಿ ಹಲವು ಕಡೆ ಇವತ್ತೂ ಮಳೆಯಾಗಿದೆ. ಅದರಲ್ಲೂ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಮೇಲೆ ವರುಣ ಮುನಿಸಿಕೊಂಡವರಂತೆ ಅಬ್ಬರಿಸುತ್ತಿದ್ದಾನೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಜೋರಾಗಿದೆ. ಚಿಕ್ಕಮಗಳೂರಿನ ಕಳಸ ಹಾಗೂ ಕುದುರೆಮುಖ ಸುತ್ತಮುತ್ತ ಭಾನುವಾರ ರಾತ್ರಿಯಿಂದ ಬಿಟ್ಟು ಬಿಡದೇ ಮಳೆ ಸುರೀತಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕಳಸ – ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಮಡಿಕೇರಿ ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ನಾಪೋಕ್ಲು- ಭಾಗಮಂಡಲ ಸಂಪರ್ಕ ಕಡಿತಗೊಂಡಿದೆ. ಇದರ ಜೊತೆಗೆ ಹಲವು ಕಡೆ ಭೂಕುಸಿತ ಕೂಡ ಸಂಭವಿಸಿದೆ. ಇನ್ನು ಇಂದೂ ಕೂಡ ಕೊಡಗು – ದಕ್ಷಿಣಕನ್ನಡದ ಗಡಿ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ ಅಂತ ಅಲ್ಲಿನ ಸ್ಥಳೀಯರು ಆತಂಕ ಬಿಚ್ಚಿಟ್ಟಿದ್ದಾರೆ. ಇನ್ನು ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ಎಂಬಲ್ಲಿ ಅತಿಹೆಚ್ಚು 243 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಅಧಿಕ ಮಳೆ, ಇನ್ನುಳಿದ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳ ಕೆಲವೊಂದು ಕಡೆ ವ್ಯಾಪಕ ಮಳೆ ಮತ್ತು ಉಳಿದ ಕಡೆಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಆರಂಜ್‌ ಹಾಗೂ ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ

-masthmagaa.com

Contact Us for Advertisement

Leave a Reply