ರಮೇಶ್‌ ಜಾರಕಿಹೊಳಿಯವರ ಹವಾ ಹೇಗಿದೆ? ಜಾರಕಿಹೊಳಿ ಬಗ್ಗೆ ಜನ ಏನಂತಾರೆ

masthmagaa.com:

ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಹಾಗೂ ಅಷ್ಟೇ ಪ್ರಭಾವಶಾಲಿ ಜಿಲ್ಲೆ ಬೆಳಗಾವಿ. ರಾಜ್ಯದ ಅತಿದೊಡ್ಡ ಜಿಲ್ಲೆ.. ಐತಿಹಾಸಿಕವಾಗಿ ತುಂಬಾ ಮಹತ್ವವಾದ ಪಡೆದ ಜಾಗ. ರಾಜಕೀಯವಾಗಿ ಕೂಡ ಘಟಾನುಘಟಿ ನಾಯಕರ ತವರು. ಬೆಂಗಳೂರನ್ನ ಬಿಟ್ರೆ ಅತಿಹೆಚ್ಚು ವಿಧಾನಸಭಾ ಕ್ಷೇತ್ರ ಇರೋ ಜಿಲ್ಲೆ ಬೆಳಗಾವಿ. ಒಂದಲ್ಲ ಎರಡಲ್ಲ ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳು ಇಲ್ಲಿ ಇದ್ದಾವೆ. ರಾಜ್ಯ ಕಾಂಗ್ರೆಸ್‌, ಹಾಗೂ ರಾಜ್ಯ ಬಿಜೆಪಿಯ ದೊಡ್ಡ ನಾಯಕರ ಮನೆ ಬೆಳಗಾವಿ. 2019ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನ ಉರುಳಿಸಿ, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಕಾರಣಕರ್ತರಾದ ರಮೇಶ್‌ ಜಾರಕಿಹೊಳಿಯಿಂದ ಹಿಡಿದು ಲಕ್ಷ್ಮಣ ಸವದಿ, ಸತೀಶ್‌ ಜಾರಕಿಹೊಳಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್‌, ಪ್ರಕಾಶ್‌ ಹುಕ್ಕೇರಿ ತನಕ ಎಲ್ಲಾ ನಾಯಕರು ಪ್ರತಿನಿಧಿಸೋ ಜಿಲ್ಲೆ ಬೆಳಗಾವಿ. ಬೆಳಗಾವಿ-ಬಿಜೆಪಿ ಕಾಂಗ್ರೆಸ್‌ ಎರಡೂ ಪಕ್ಷಗಳಿಗೂ ಪ್ರತಿಷ್ಠೆ…ಹಾಗೇ ಇಬ್ರ ಮಧ್ಯೆ ಟಫ್‌ ಫೈಟ್‌ ಕೂಡ ಇದೆ. ಬೆಳಗಾವಿಯಲ್ಲಿ ಸಧ್ಯಕ್ಕೆ 18 ವಿಧಾನಸಭಾ ಕ್ಷೇತ್ರಗಳಿದ್ರೆ ಆ ಪೈಕಿ 13ರಲ್ಲಿ ಬಿಜೆಪಿ ಎಂಎಲ್‌ಎಗಳಿದ್ದಾರೆ. 5ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈ ಪೈಕಿ ಬಿಜೆಪಿ ಎಂಎಲ್‌ಎ ಇದ್ದ ಎರಡು ಕ್ಷೇತ್ರಗಳು ಖಾಲಿಯಾಗಿವೆ. ಆ ಕ್ಷೇತ್ರಗಳ ಶಾಸಕರ ಅಕಾಲಿಕ ನಿಧನದಿಂದ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೆಕ್‌ಟುನೆಕ್‌ ಫೈಟ್‌ ಇದೆ.

ಸಿಹಿತಿಂಡಿ ಕರದಂಟುಗಳಿಗೆ ಹೆಸರಾದ ಗೋಕಾಕ ರಾಜಕೀಯವಾಗಿ ಹೈವೋಲ್ಟೇಜ್‌ ಕ್ಷೇತ್ರ. ಕಾರಣ ಇಲ್ಲಿನ ಶಾಸಕ ರಮೇಶ್‌ ಜಾರಕಿಹೊಳಿ. ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡೋಕೆ, ಹಾಗೇ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನ ಉರುಳಿಸುವಲ್ಲಿ ನಿರ್ಣಾಯಕ ಪಾತ್ರಧಾರಿಯಾಗಿದ್ದ ರಮೇಶ್‌ ಜಾರಕಿಹೊಳಿಯವರು ಪ್ರತಿನಿಧಿಸುವ ಕ್ಷೇತ್ರ ಈ ಗೋಕಾಕ್. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಈಗ ಬಿಜೆಪಿ ಬಾವುಟ ಹಾರಾಡ್ತಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರಮೇಶ್ ಅನಂತರ ಬಿಜೆಪಿಗೆ ಹೋದ್ರು. ಈ ಕಾರಣಕ್ಕೆ 2019ರಲ್ಲಿ ಉಪಚುನಾವಣೆ ನಡೀತು. ಆಗ ಕೂಡ ರಮೇಶ್‌ ಜಾರಕಿಹೊಳಿಯವರೇ ಗೆದ್ದು ಬಿಜೆಪಿ ಬಾವುಟವನ್ನ ಹಾರಿಸ್ತಿದ್ದಾರೆ.

ಇನ್ನು ಗೋಕಾಕ್‌ ವಿಧಾನಸಭಾ ಕ್ಷೇತ್ರದ ಹಿಂದಿನ ಅಂಕಿಅಂಶಗಳನ್ನ ನೋಡಿದಾಗ ಇಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅನ್ನೋ ವಾತವರಣ ಇತ್ತು. 2004 ರಿಂದ 2013 ರ ವರೆಗೆ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡಿತ್ತು. ಆದ್ರೆ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿ ಬಿಜೆಪಿ ಬಲವರ್ಧನೆಯಾಗಿದೆ.
2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ರಮೇಶ್ ಜಾರಕಿಹೊಳಿ 90,249 ಮತಗಳನ್ನ ಪಡೆದ್ರು. ಅದೇ ತರ ರಮೇಶ್‌ ಜಾರಕಿಹೊಳಿಗೆ ಟಫ್‌ ಫೈಟ್‌ ನೀಡಿದ್ದ ಅಂದಿನ ಬಿಜೆಪಿ ಅಭ್ಯರ್ಥಿ ಅಶೋಕ್ ಪೂಜಾರಿ 75,969 ಮತಗಳನ್ನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡ್ಕೊಂಡ್ರು.
ಅದಾದ ನಂತರ ಸೀಜ್‌ ಚೇಂಜ್‌ ಆಯ್ತು. ಅಶೋಕ್‌ ಪೂಜಾರಿ ಕಾಂಗ್ರೆಸ್‌ಗೆ ಬಂದ್ರು. ರಮೇಶ್‌ ಜಾರಕಿಹೊಳಿ ಬಿಜೆಪಿಗೆ ಬಂದಿದ್ದಾರೆ. ಅಶೋಕ್ ಪೂಜಾರಿಯನ್ನ ಹೇಗಾದ್ರೂ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಅಂತ ಬಿಜೆಪಿ ತುಂಬಾ ಸರ್ಕಸ್‌ ಮಾಡ್ತು. ಆದ್ರೆ ಯೂಸ್‌ ಆಗಲಿಲ್ಲ.

2019ರಲ್ಲಿ ನಡೆದ ಉಪಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ದ ಅವರ ಸಹೋದರ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ರು. ರಮೇಶ್‌ ಜಾರಕಿಹೊಳಿ, 87,450 ವೋಟ್‌ ಗಳಿಸಿದ್ರೆ, ಲಖನ್‌ ಜಾರಕಿಹೊಳಿ 58,444 ಮತಗಳಿಸಿದ್ರು. ರಮೇಶ್‌ ಜಾರಕಿಹೊಳಿ ಅನಂತರ ಸರ್ಕಾರದಲ್ಲಿ‌ ಜಲಸಂಪನ್ಮೂಲ ಸಚಿವ ಕೂಡ ಆಗಿದ್ರು. ಸಿಡಿ ಲೀಕ್‌ ಕೇಸ್‌ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ರು. ಈ ಬಾರಿ ಕೂಡ ರಮೇಶ್‌ ಜಾರಕಿಹೊಳಿಗಿನೇ ಬಿಜೆಪಿ ಟಿಕೆಟ್‌ ಕೊಟ್ಟಿದೆ.
ಕಾಂಗ್ರೆಸ್‌ ಈ ಬಾರಿ ಅಶೋಕ್‌ ಪೂಜಾರಿ ಬಿಟ್ಟು ಮಹಾಂತೇಶ ಕಡಾಡಿಗೆ ಟಿಕೆಟ್‌ ಕೊಟ್ಟಿದೆ. ಆಮ್‌ ಆದ್ಮಿ ಪಕ್ಷದಿಂದ ಕುಮಾರ್‌ ಮಾರುತಿ ಕರೇಪ್ಪಗೋಳ್‌ ಸ್ಪರ್ಧೆ ಮಾಡ್ತಿದ್ದಾರೆ.

ಗೋಕಾಕಿನ ಜಾತಿ ಲೆಕ್ಕಚಾರಕ್ಕೆ ಬರೋದಾದ್ರೆ ಈ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ ಸ್ಥಾನವನ್ನ ಹೊಂದಿವೆ. ಅದನ್ನಹೊರತು ಪಡಿಸಿದ್ರೆ ಪರಿಶಿಷ್ಟಪಂಗಡ, ಮುಸ್ಲಿಂ, ಕುರುಬ ಮತಗಳು ಹಾಗೇ ಉಪ್ಪಾರ, ಪರಿಶಿಷ್ಟ ಜಾತಿ, ಮರಾಠ ಮತಗಳು ಸಹ ತುಂಬಾ ಇಂಪಾರ್ಟೆಂಟ್‌ ರೋಲ್‌ ನಿಭಾಯಿಸ್ತವೆ.

ಬನ್ನಿ…. ಮತದಾರರರ ಮನಸ್ಸಲ್ಲಿ ಏನಿದೆ ಅನ್ನೋದನ್ನ ಅವರ ಬಾಯಿಂದಲೇ ಕೇಳೋಣ.. ನಾವು ಮಾಡಿರೋ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ ನೋಡಿ!

-masthmagaa.com

Contact Us for Advertisement

Leave a Reply