ರಾಜ್ಯದಲ್ಲಿ ನಿಲ್ಲದ ಮಳೆ ರಗಳೆ: ಜಾನುವಾರು ಮೃತಪಟ್ಟರೆ ಪರಿಹಾರ! ಎಷ್ಟು?

masthmagaa.com:

ರಾಜ್ಯದಲ್ಲಿ ಸುರಿತೀರೋ ರಣಮಳೆ ಇಂದೂ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಲಗೋಡು ಎಂಬಲ್ಲಿ ಅತಿಹೆಚ್ಚು ಅಂದ್ರೆ 209 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳ ಬಹುತೇಕ ಕಡೆ ಭಾರಿ ಮಳೆ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ಸಾಧರಣ, ಕೆಲವು ಕಡೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಬೆಳಗಾವಿ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.
– ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯಲ್ಲಿ ವರ್ಷಧಾರೆ ಹಿನ್ನೆಲೆ, ಭಾಗಮಂಡಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಸಂಪರ್ಕ‌ ಕಡಿತವಾಗಿದೆ. ಅತ್ತ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನ ನದಿಗೆ ಬಿಡಲಾಗುತ್ತಿದೆ. ಇದರಿಂದ ಕಂಪ್ಲಿ ಮತ್ತು ಗಂಗಾವತಿ ನಡುವೆ ಇರುವ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಈ ಹಿನ್ನೆಲೆ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಅದೇ ರೀತಿ ರಾಜ್ಯದ ಇನ್ನುಳಿದ ನದಿ, ಉಪನದಿಗಳು ಕೂಡ ಮೈದುಂಬಿ ಹರೀತಿದೆ. ಇನ್ನು ಹಲವು ಜಲಾಶಯಗಳು ತುಂಬಿ ಹೋಗಿದ್ದು ನದಿ ತೀರದ ಜನರಿಗೆ ಆತಂಕ ಶುರುವಾಗಿದೆ. ಹಲವು ಕಡೆ ಮನೆಗಳು ಕುಸಿದು ಜನ ಆಶ್ರಯ ಕಳೆದುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಮಳೆಯ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡೋದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆಕಳು ಎತ್ತು ಮೃತಪಟ್ಟರೆ 30 ಸಾವಿರ ರೂಪಾಯಿ, ಬೇರೆ ಬೇರೆ ಜಾನುವಾರುಗಳಿಗೆ ತಲಾ 10 ಹಾಗೂ 5 ಸಾವಿರ ಪರಿಹಾರ ನೀಡೋದಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್‌ ಹೇಳಿದ್ದಾರೆ.
– ಇತ್ತ ಪಶ್ಚಿಮ ಕರಾವಳಿ, ಮಧ್ಯ ಭಾರತದ ಎಂಟು ರಾಜ್ಯಗಳಲ್ಲಿ ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ . 22 ನದಿ ತಾಣಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚಿನ ನೀರು ಹರಿಯುವುದರಿಂದ ಪ್ರವಾಹ ಸಾಧ್ಯತೆ ಇದೆ ಅಂತ ಹೇಳಲಾಗಿದೆ. ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ತೆಲಂಗಾಣ, ಮಹಾರಾಷ್ಟ್ರ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದೆ. ಅಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ 31 ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳ ಒಳಹರಿವಿನ ಪ್ರಮಾಣ ಜಾಸ್ತಿಯಾಗಬಹುದು ಅಂತ ಮುನ್ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply