ರಷ್ಯಾದಿಂದ ಆಮದು ಮಾಡಿಕೊಂಡ ತೈಲವನ್ನ ಅಮೆರಿಕಗೆ ಕೊಡ್ತಾ ಭಾರತ? ಏನಿದು ಆರೋಪ

masthmagaa.com:

ರಷ್ಯಾದಿಂದ ಆಮದು ಮಾಡಿಕೊಂಡ ತೈಲವನ್ನ ಅಮೆರಿಕಗೆ ರವಾನೆ ಮಾಡಿದ್ದರ ಕುರಿತು ಅಮೆರಿಕ ಭಾರತದ ವಿರುದ್ದ ಅಸಮಾಧಾನ ಹೊರಹಾಕಿದೆ ಅಂತ ವರದಿಯಾಗಿದೆ.. ಉಕ್ರೇನ್ ಮೇಲಿನ ದಾಳಿಯ ನಂತರ ಅಮೆರಿಕ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ, ಕಲ್ಲಿದ್ದಲು, ಇಂಧನ, ಅನಿಲ ಸೇರಿದಂತೆ ಹಲವು ಬಗೆಯ ಆಮದಿನ ಮೇಲೆ ನಿಷೇಧ ಹೇರಿದೆ. ಆಗಿದ್ರೂ ಭಾರತ ಕಚ್ಚಾ ತೈಲದ ಮೂಲ ಬಚ್ಚಿಟ್ಟು ಅಮೆರಿಕಗೆ ಸಂಸ್ಕರಿತ ಇಂಧನ ರವಾನಿಸಿದೆ. ಇದಕ್ಕೆ ಅಮೆರಿಕ ಗರಂ ಆಗಿದೆ ಅಂತ ಮಾಹಿತಿ ಸಿಕ್ತಾಯಿದೆ. ಈ ಬಗ್ಗೆ ಮಾತನಾಡಿರೋ ರಿಸರ್ವ್‌ ಬ್ಯಾಂಕ್‌ನ ಡೆಪ್ಯೂಟಿ ಗವರ್ನರ್‌ ಮೈಕೆಲ್‌ ಪಾತ್ರಾ ರಷ್ಯಾದಿಂದ ಬಂದಿದ್ದ ಟ್ಯಾಂಕರ್​ನಲ್ಲಿದ್ದ ಕಚ್ಚಾ ತೈಲವನ್ನು ಗುಜರಾತ್​ನ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಮಧ್ಯದಲ್ಲಿಯೇ ಭಾರತದ ಟ್ಯಾಂಕರ್​ಗೆ ಲೋಡ್ ಮಾಡಲಾಯಿತು. ನಂತರ ಅದನ್ನು ಸಂಸ್ಕರಿಸಿ ಅಮೆರಿಕಕ್ಕೆ ರವಾನಿಸಲಾಯಿತು ಅಂತ ಹೇಳಿದ್ದಾರೆ. ಹಡಗು ಎಲ್ಲಿಗೆ ಹೋಗ್ತಾಯಿದೆ ಅಂತ ಮಾಹಿತಿ ನೀಡದೆ ಈ ಹಡಗು ಬಂದರಿನಿಂದ ಪ್ರಯಾಣ ಮಾಡ್ತು. ಬಳಿಕ ಸಮುದ್ರ ಮಧ್ಯದಲ್ಲಿ ಈ ಹಡಗಿಗೆ ಎಲ್ಲಿಗೆ ಹೋಗಬೇಕು ಅನ್ನೋ ಮಾಹಿತಿ ನೀಡಲಾಯಿತು. ಅದರಂತೆ ಈ ಹಡಗು ಅಮೆರಿಕದ ನ್ಯೂಯಾರ್ಕ್​ಗೆ ಹೋಯ್ತು ಅಂತ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಭಾರತದಲ್ಲಿರೋ ಅಮೆರಿಕ ರಾಯಭಾರ ಕಚೇರಿ ಇದಕ್ಕೆ ತಕ್ಷಣಕ್ಕೆ ಯಾವುದೇ ಕಾಮೆಂಟ್‌ ಕೊಡೋಕಾಗಲ್ಲ ಅಂತ ಹೇಳಿದೆ. ಅಂದ್ಹಾಗೆ ಯುಕ್ರೇನ್‌ ಮೇಲೆ ದಾಳಿ ಮಾಡಿದಾಗಿನಿಂದಲೂ ಅಮೆರಿಕ ಭಾರತಕ್ಕೆ ರಷ್ಯಾ ವಿರುದ್ಧ ನಿರ್ಬಂಧ ಹೇರುವಂತೆ ಒತ್ತಾಯಿಸುತ್ತಲೇ ಇತ್ತು. ಆದರೆ ಭಾರತ ಮಾತ್ರ ಈ ಒತ್ತಡಕ್ಕೆ ಮಣಿದಿರಲಿಲ್ಲ. ರಷ್ಯಾದಿಂದ ತೈಲ ಖರೀದಿ ಮಾಡ್ತಾನೆ ಇತ್ತು. ಆದ್ರೆ ಈಗ ರಷ್ಯಾದಿಂದ ಪಡೆದ ತೈಲವನ್ನ ಅಮೆರಿಕಗೆ ಕೊಟ್ಟಿದೆ ಅನ್ನೋದು ನಿಜವಾದ್ರೆ ಇದು ಉಭಯ ದೇಶಗಳ ಸಂಬಂಧದ ಮಧ್ಯೆ ಯಾವ ರೀತಿಯ ಪರಿಣಾಮ ಬೀರಬೋದು ಅನ್ನೋದೆ ಈಗ ಕಾಡ್ತಿರೋ ಪ್ರಶ್ನೆ.

-masthmagaa.com

Contact Us for Advertisement

Leave a Reply