ಹಿಂದೂಮಹಾಸಾಗರದಲ್ಲಿ ಚೀನಾದ ಬೇಹುಗಾರಿಕಾ ಹಡಗು! ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ!

masthmagaa.com:

ಅರುಣಾಚಲ, ಲಡಾಕ್‌ ಅಂತ ಭೂಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಿರೋ ಚೀನಾ ಇದೀಗ ಸಮುದ್ರದಲ್ಲೂ ಮತ್ತೆ ಪುಂಡಾಟ ಶುರು ಮಾಡಿದೆ. ಬಂಗಾಳಕೊಲ್ಲಿಯಲ್ಲಿ ಭಾರತ, ಮುಂದಿನವಾರ ಲಾಂಗ್‌ ರೇಂಜ್‌ ಮಿಸೈಲ್‌ಗಳನ್ನ ಟೆಸ್ಟ್‌ ಮಾಡೋದಕ್ಕೆ ಸಿದ್ದತೆ ನಡೆಸ್ತಿತ್ತು. ಇಂತಹ ಹೊತ್ತಲ್ಲೇ ಚೀನಾ ತನ್ನ ಬೇಹುಗಾರಿಕಾ ಹಡಗನ್ನ ಹಿಂದೂ ಮಹಾಸಾಗರಕ್ಕೆ ಇಳಿಸಿದೆ. ಇದು ಭಾರತದ ತೀವ್ರ ಕಳವಳಕ್ಕೆ ಕಾರಣವಾಗಿದೆ. ಯುವಾನ್‌ 6 ಹೆಸರಿನ ಈ ಬೇಹುಗಾರಿಕೆ ಹಡಗು 22 ಸಾವಿರ ಟನ್‌ ತೂಕವನ್ನ ಹೊಂದಿದೆ. ಸನ್ಸಾರ್‌ ಮಾಡಬಹುದಾದ ದೊಡ್ಡ ದೊಡ್ಡ ಅಂಟೇನಾಗಳು, ಅತ್ಯಾಧುನಿಕ ಬೇಹುಗಾರಿಕ ಉಪಕರಣಗಳ ವ್ಯವಸ್ಥೆ ಹೊಂದಿದೆ. ಜೊತೆಗೆ ಸ್ಯಾಟಲೈಟ್‌ ಅಥವಾ ಉಪಗ್ರಹ ಉಡಾವಣೆಗಳು, ಬ್ಯಾಲೆಸ್ಟಿಕ್‌ ಕ್ಷಿಪಣಿ ಪರೀಕ್ಷೆಗಳನ್ನ ಕೂಡ ಇದ್ರಿಂದ ಮಾನಿಟರ್‌ ಮಾಡಬೋದು. ಪ್ರಸ್ತುತ ಇಂಡೋನೇಷ್ಯಾದ ಬಾಲಿ ಸಮೀಪದಲ್ಲಿ ಹಿಂದೂಮಹಾಸಾಗರದಲ್ಲಿ ಬೀಡು ಬಿಟ್ಟಿದೆ. ಇದರ ಬೆನ್ನಲ್ಲೇ ಭಾರತ ಇದಕ್ಕೆ ಕಳವಳ ವ್ಯಕ್ತಪಡಿಸಿದೆ. ಹಲವು ರೀತಿಯ ಆಧುನಿಕ ತಂತ್ರಜ್ಞಾನ ಹೊಂದಿರೋ ಈ ಹಡಗು ಭಾರತ ಕ್ಷಿಪಣಿ ಪರೀಕ್ಷೆ ನಡೆಸಬೇಕು ಅನ್ಕೊಂಡಿರೋ ಟೈಂನಲ್ಲೇ ಭಾರತದ ಸಮೀಪದಲ್ಲೇ ಗಿರಿಕಿ ಹೊಡೀತಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೆಲವು ಮೂಲಗಳ ಪ್ರಕಾರ ಕ್ಷಿಪಣಿ ಪರೀಕ್ಷೆಯ ಮೇಲೆ ಕಣ್ಣಿಡೋಕೆ ಚೀನಾವೇ ಈ ಹಡಗು ಕಳುಹಿಸಿದೆ. ಕ್ಷಿಪಣಿಯ ವೇಗ, ಸಾಮರ್ಥ್ಯ ಮುಂತಾದವುಗಳನ್ನು ಅಧ್ಯಯನ ಮಾಡೋಕೆ ಚೀನಾ ಈ ನಿರ್ಧಾರ ಕೈಗೊಂಡಿದೆ ಅಂತ ಹೇಳಲಾಗಿದೆ. ಇತ್ತ ಈ ಕುರಿತು ಭಾರತೀಯ ನೌಕಾಪಡೆ ಕೂಡ ಅಲರ್ಟ್‌ ಆಗಿದ್ದು ಚೀನಾದ ಚಲನವಲನಗಳನ್ನ ತೀರ ಹತ್ತಿರದಿಂದ ಮಾನಿಟರ್‌ ಮಾಡ್ತಾ ಇದ್ದೀವಿ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಭಾರತ ಇದೇ ನವೆಂಬರ್‌ 10-11ಕ್ಕೆ ಬಂಗಾಳಕೊಲ್ಲಿಯಲ್ಲಿ ಕೆಲವು ಲಾಂಗ್‌ ರೇಂಜ್ ಮಿಸೈಲ್‌ ಟೆಸ್ಟ್‌ ಮಾಡೋದಕ್ಕೆ ಶೆಡ್ಯೂಲ್‌ ಹಾಕ್ಕೋಂಡಿತ್ತು. ಆ ಭಾಗದಲ್ಲಿ‌ ಅದಕ್ಕಾಗಿ ನೋ ಪ್ಲೈ ಜೋನ್‌ ಅಂತ ಘೋಷಣೆ ಮಾಡಿತ್ತು. ಇಷ್ಟೆಲ್ಲಾ ಸಿದ್ದತೆಗಳ ಮಧ್ಯೆದಲ್ಲಿಯೇ ಭಾರತದ ಪಕ್ಕದಲ್ಲೇ ಇರೋ ಇಂಡೋನೇಷ್ಯಾದ ಹತ್ರ ಹಡಗನ್ನ ಕಳುಹಿಸಿಕೊಡುವ ಮೂಲಕ ಚೀನಾ ಮತ್ತೆ ಬಾಲ ಬಿಚ್ಚಿದೆ. ಭಾರತದ ಕ್ಷಿಪಣಿ ಪರೀಕ್ಷೆಯ ಬಗ್ಗೆ, ಭಾರತದ ಕ್ಷಿಪಣಿ ಸಾಮರ್ಥ್ಯವನ್ನ ತಿಳಿಯೋಕೆ ಚೀನಾ ಈ ಬೇಹುಗಾರಿಕೆಯ ಹಡಗನ್ನ ಇಳಿಸಿರಬೇಕು ಅಂತ ಅನುಮಾನ ವ್ಯಕ್ತಪಡಿಸಲಾಗಿದೆ. ಅಂದಹಾಗೆ ಕೆಲವೇ ವಾರಗಳ ಹಿಂದೆ ಕೂಡ ಶ್ರೀಲಂಕಾದ ಹಂಬಂತೋಟ ಬಂದರಿನ ಹತ್ರ ಇದೇ ರೀತಿಯ ಬೇಹುಗಾರಿಕಾ ಹಡಗನ್ನ ಚೀನಾ ಕಳುಹಿಸಿಕೊಟ್ಟಿತ್ತು. ಇದು ಶ್ರೀಲಂಕಾ ಭಾರತ ಹಾಗೂ ಚೀನಾಗಳ ಮದ್ಯೆ ರಾಜಕೀಯವಾಗಿ ಕೂಡ ತೀವ್ರ ತಿಕ್ಕಾಟಕ್ಕೆ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply