ನಟ ದರ್ಶನ್ ವಂಚನೆ ಪ್ರಕರಣಕ್ಕೆ ಹೊಸ ತಿರುವು: ದಲಿತನ ಮೇಲೆ ಹಲ್ಲೆ ಆಗಿದೆ ಅಂದ ಇಂದ್ರಜಿತ್ ಲಂಕೇಶ್!!

Masthmagaa.com:

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 25 ಕೋಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಅಖಾಡಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿಯಾಗಿದೆ. ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ. ಈ ಮೂಲಕ ಮಹಿಳೆ ಅರುಣಾ ಕುಮಾರಿ ಪರವಾಗಿ ಪರೋಕ್ಷವಾಗಿ ನಿಂತಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ದೂರು ನೀಡಿ ಹೊರಗೆ ಬಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂಟ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಹೊಟೇಲ್ ನಲ್ಲಿ ಇತ್ತೀಚೆಗೆ ಇದೇ ಸ್ಟಾರ್ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಹೋಗಿ ಊಟ ಪಾರ್ಟಿ ಮಾಡಿ ಪಾಪದ ದಲಿತ ಹೊಟೇಲ್ ಸಪ್ಲೈಯರ್ ಗೆ ಹೊಡೆದಿದ್ದಾರೆ. ಇದರಿಂದ ಅವನ ಕಣ್ಣು ಮಂಜಾಗಿ ಹೋಗಿದೆ, ನಂತರ ಹೋಗಿ ಪೊಲೀಸ್ ಸ್ಟೇಷನ್ ನಲ್ಲಿ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ, ಸಾಕ್ಷಿಗಳನ್ನಿಟ್ಟುಕೊಂಡೇ ಇಂದು ಗೃಹ ಸಚಿವರಿಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಇಂದ್ರಜಿತ್ ಹೇಳಿಕೆಗಳು ಸಾಬೀತಾದರೆ ಮಾತ್ರ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹೋಟೆಲ್ ಸಪ್ಲೈಯರ್ ಮೇಲೆ ಕೂಗಾಡಿರೋದು ಸತ್ಯ ಆದರೆ ಹಲ್ಲೆ ಮಾಡಿದ್ದೇನೆ ಅನ್ನೋ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಹಾಗೆ 25 ಕೋಟಿ ವಂಚನೆ ಪ್ರಕರಣವನ್ನ ಸಂಧಾನ ಮಾಡಿಕೊಂಡು ಮುಗಿಸುವ ಯಾವುದೇ ಚಿಂತನೆ ಇಲ್ಲ, ಪೋಲಿಸರ ತನಿಖೆಯ ವರದಿಗಾಗಿ ಈಗ ಕಾಯುತ್ತಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್ ಮಾಡಿರುವ ಹಲ್ಲೆ ಆರೋಪದ ಬಗ್ಗೆ ಮಾತನಾಡಿರುವ ಸಂದೇಶ್ ನಾಗರಾಜ್ ಅವರ ಪುತ್ರ ಲಾಕಡೌನ್ ಶುರುವಾಗುವ ಮೂರು ನಾಲ್ಕು ದಿನಗಳ ಹಿಂದೆ ನಮ್ಮ ಹೋಟೆಲ್ ನಲ್ಲಿ ಚಿಕ್ಕ ಗಲಾಟೆ ನಡೆದದ್ದು ನಿಜ, ದರ್ಶನ್ ಬೈದಿರೋದು ಕೂಡ ನಿಜ ಆದರೆ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ. ಹಾಗೆ ಇಂದ್ರಜಿತ್ ಲಂಕೇಶ್ ಆರೋಪದ ಪ್ರಕಾರ ಒಂದು ವಾರದ ಹಿಂದೆ ನಡೆದಿರುವ ಗಲಾಟೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ವಿಷಯವನ್ನ ಇಲ್ಲಿಗೆ ಬಿಡಿ, ಇಲ್ಲದೆ ಇದ್ರೆ ನಮ್ಮ ಹೋಟೆಲ್ ಗೆ ಮತ್ತು ದರ್ಶನ್ ಗೆ ಕೆಟ್ಟ ಹೆಸರು ಬರತ್ತೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply