‘ಯ’ತೀಂದ್ರಿಯ ಶಕ್ತಿ ಪತ್ತೆಹಚ್ಚಿದ HDK! ವಿವೇಕಾನಂದ ಟ್ರಾನ್ಸ್‌ಫರ್‌ ಗಲಾಟೆ ತೀವ್ರ!

masthmagaa.com:

ಲಂಚ ತಗೊಂಡು ಅಧಿಕಾರಿಗಳ ವರ್ಗಾವಣೆ ಮಾಡಲಾಗ್ತಿದೆ ಅಂತ ರಾಜ್ಯ ಸರ್ಕಾರದ ಮೇಲೆ ಆರೋಪಗಳಿರೋ ನಡುವೆಯೇ ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರು ಯಾವುದೋ ಲಿಸ್ಟ್‌ ಬಗ್ಗೆ ಮಾತಾಡಿದ್ದು ಕೋಲಾಹಲ ಸೃಷ್ಟಿಸಿತ್ತು. ಇದೀಗ ಸಂಭಾಷಣೆಯಲ್ಲಿ ಕೇಳಿ ಬಂದ ವಿವೇಕಾನಂದ ಅನ್ನೋ ಹೆಸರಿನ ವ್ಯಕ್ತಿ ಯಾರು ಅನ್ನೋದನ್ನ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪತ್ತೆ ಹಚ್ಚಿದ್ದಾರೆ. ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಲಿಸ್ಟ್‌ನಲ್ಲಿ ಈ ವಿವೇಕಾನಂದ್‌ ಅನ್ನೋರ ಹೆಸರಿದೆ. ಈ ಲಿಸ್ಟ್‌ನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರೋ ಕುಮಾರಸ್ವಾಮಿ ವರ್ಗಾವಣೆ ದಂಧೆ ನಡೆದಿರೋದಕ್ಕೆ ಇದೇ ಸಾಕ್ಷಿ ಅಂತ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ! ಡೂಪ್ಲಿಕೇಟ್‌ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್​ಆರ್​ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ” ಅಂತ ವ್ಯಂಗ್ಯವಾಡಿದ್ದಾರೆ. “ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ..?” ಅಂತ ಸವಾಲು ಹಾಕಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕುಮಾರಸ್ವಾಮಿ, “ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ ಮತ್ತು ಕಾಂಗ್ರೆಸ್‌ ಹುಂಡಿ’ ಅನ್ನೋ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-ಟಿಸಿಎಂ​ ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-ಡಿಸಿಎಂ​ ನಿರ್ದೇಶಕ.. ಹೇಗಿದೆ? ಅಂತ ಪ್ರಶ್ನಿಸಿದ್ದಾರೆ.

ಇತ್ತ ಕುಮಾರಸ್ವಾಮಿ ಆರೋಪಕ್ಕೆ ರಿಯಾಕ್ಟ್‌ ಮಾಡಿರೋ ಸಿದ್ದರಾಮಯ್ಯ, ಯತೀಂದ್ರ ಹೇಳಿದ ವಿವೇಕಾನಂದ ಬೇರೆ, ಕುಮಾರಸ್ವಾಮಿ ಹೇಳಿದ ವಿವೇಕಾನಂದ ಬೇರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಯತೀಂದ್ರ ಹೇಳಿದ ವಿವೇಕಾನಂದ ಮೈಸೂರು ಬಿಇಒ. ಈಗ ವರ್ಗಾವಣೆ ಆಗಿರುವ ವಿವೇಕಾನಂದ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇವರು ವಿವಿ ಪುರಂಗೆ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ವರ್ಗಾವಣೆ ಆಗಿದ್ದಾರೆ. ಆದರೆ, ಹೆಚ್​ಡಿ ಕುಮಾರಸ್ವಾಮಿ ಅವರು ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಈ ಇಬ್ಬರೂ ವಿವೇಕಾನಂದಗಳಿಗೆ ಸಂಬಂಧವೇ ಇಲ್ಲ ಅಂತ ಹೇಳಿದ್ದಾರೆ.

ಅತ್ತ ತಮ್ಮ ವೈರಲ್‌ ವಿಡಿಯೋ ಬಗ್ಗೆ ಯತೀಂದ್ರ ಮೊದಲ ಸಲ ರಿಯಾಕ್ಟ್‌ ಮಾಡಿದ್ದಾರೆ. ಮುಖ್ಯಮಂತ್ರಿಯವರಿಗೆ ಕೊಟ್ಟ ಲಿಸ್ಟ್ ವರ್ಗಾವಣೆಗಳಿಗೆ ಸಂಬಂಧಿಸಿದ್ದು ಅಂತ ವಿರೋಧ ಪಕ್ಷದ ನಾಯಕರು ಯಾವ ಆಧಾರದಲ್ಲಿ ಹೇಳ್ತಾರೆ? ನಿಗಮ, ಮಂಡಳಿಗಳಿಗೆ ಪದಾಧಿಕಾರಿಗಳು, ಸಿಎಸ್ ಆರ್ ಫಂಡ್, ಬೇರೆ ಬೇರೆ ಕಮಿಟಿಗಳಿಗೆ ಪಕ್ಷದ ಕಾರ್ಯಕರ್ತರ ನೇಮಕ ಇನ್ನೂ ಹತ್ತು ಹಲವು ಲಿಸ್ಟ್‌ಗಳನ್ನು ಸಿಎಂಗೆ ಕೊಟ್ಟಿದ್ದೇನೆ. ನಾನು ಯಾವ ಲಿಸ್ಟ್ ಬಗ್ಗೆಯಾದ್ರು ಮಾತಾಡ್ಬೋದು ಅದನ್ನ ಟ್ರಾನ್ಸ್‌ಫರ್‌ ಲಿಸ್ಟ್ ಅಂತ ಹೇಗೆ ಹೇಳ್ತಾರೆ ಅಂತ ಯತೀಂದ್ರ ಪ್ರಶ್ನಿಸಿದ್ದಾರೆ. ಇದೇ ವೇಳೆ ನಾನು ಯಾವ ಲಿಸ್ಟ್‌ ಬಗ್ಗೆಯೂ ಮಾಧ್ಯಮಗಳಿಗಾಗಲೀ, ವಿರೋಧ ಪಕ್ಷದವರಿಗಾಗಲೀ ಸ್ಪಷ್ಟನೆ ನೀಡುವ ಅಗತ್ಯವೇ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply