ರಾಜ್ಯದಲ್ಲಿ ಹೂಡಿಕೆ ಒಪ್ಪಂದ ಆಗಿಲ್ಲ: ಬೊಮ್ಮಾಯಿ ಟ್ವೀಟ್‌ಗೆ ಫಾಕ್ಸ್‌ಕಾನ್‌ ಪ್ರತಿಕ್ರಿಯೆ

masthmagaa.com:

ಇತ್ತೀಚಿಗಷ್ಟೇ ಆ್ಯಪಲ್‌ ಫೋನ್‌ ಉತ್ಪಾದಕ ಫಾಕ್ಸ್‌ಕಾನ್‌ ಕಂಪನಿ ಬೆಂಗಳೂರಿನಲ್ಲಿ ಘಟಕ ಸ್ಥಾಪಿಸಲಿದೆ, ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಅಂತ ಸಿಎಂ ಬೊಮ್ಮಾಯಿ ಟ್ವೀಟ್‌ ಮಾಡಿ ಹೇಳಿದ್ರು. ಇದೀಗ, ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಭಾರತಕ್ಕೆ ಭೇಟಿ ನೀಡಿರೋದು ನಿಜ. ಆದ್ರೆ ಭಾರತದಲ್ಲಿ ಹೊಸದಾಗಿ ಹೂಡಿಕೆ ಮಾಡುವ ಬಗ್ಗೆ ಯಾವುದೇ ಅಂತಿಮ ಒಪ್ಪಂದವನ್ನ ಮಾಡಿಕೊಂಡಿಲ್ಲ ಅಂತ ಫಾಕ್ಸ್‌ಕಾನ್‌ ಕಂಪನಿ ಸ್ಪಷ್ಟಪಡಿಸಿದೆ. ಜೊತೆಗೆ ಭಾರತದೊಂದಿಗೆ ಫಾಕ್ಸ್‌ಕಾನ್‌ನ ಪಾಲುದಾರಿಕೆಯನ್ನ ಗಟ್ಟಿಗೊಳಿಸುವ ಪ್ರಯತ್ನದ ನಿಟ್ಟಿನಲ್ಲಿ ಭಾರತಕ್ಕೆ ಭೇಟಿ ನೀಡಲಾಗಿತ್ತು. ಸೆಮಿಕಂಡಕ್ಟರ್‌ ಹಾಗೂ ಎಲೆಕ್ಟ್ರಿಕ್‌ ವಾಹನ ತಯಾರಿಕೆ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಭಾರತದ ಸಹಕಾರ ಕೇಳಲಾಗಿದೆ. ಈ ಬಗ್ಗೆ ಆಂತರಿಕ ಮಾತುಕತೆ ನಡೆಯುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವ ಕುರಿತು ಮಾಧ್ಯಮಗಳಲ್ಲಿ ಬಂದಿರೋ ಮಾಹಿತಿಯನ್ನ ಫಾಕ್ಸ್‌ಕಾನ್‌ ಬಿಡುಗಡೆ ಮಾಡಿಲ್ಲ ಅಂತ ಲಿಯು ತಿಳಿಸಿದ್ದಾರೆ. ಇನ್ನು ಫಾಕ್ಸ್‌ಕಾನ್‌ ಸ್ಪಷ್ಟನೆ ನೀಡಿದ ಬೆನ್ನಲ್ಲೇ, ಬಿಜೆಪಿ ವಿರುದ್ದ ಜೆಡಿಎಸ್‌ ಟೀಕಾಪ್ರಹಾರ ನಡೆಸಿದೆ. ಪ್ರಸ್ತುತ ರಾಜ್ಯ ಸರ್ಕಾರ ಪ್ರಚಾರ ಜಾಸ್ತಿ, ಫಲಿತಾಂಶ ನಾಸ್ತಿ ಅನ್ನೊ ನೀತಿ ಹೊಂದಿದೆ. ತೈವಾನ್‌ ಮೂಲದ ಫಾಕ್ಸ್‌ಕಾನ್ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದಿದೆ ಅಂತ ಸಿಎಂ ಹಾಗೂ ಇಬ್ಬರು ಸಚಿವರು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಂಡರು. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಅಂತ ಕೈಯ್ಯಲ್ಲಿ ಸಹಿಪತ್ರಗಳನ್ನ ಹಿಡಿದು ಮಾಧ್ಯಮಗಳಿಗೆ ಪೋಸ್‌ ಕೊಟ್ರು ಅಂತ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇತ್ತ ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯಿಸಿ ಸಿಎಂ ಬೊಮ್ಮಾಯಿ ರಾಜ್ಯದ ಜನರನ್ನ ಮಿಸ್‌ ಲೀಡಿಂಗ್‌ ಮಾಡ್ತಿದ್ದಾರಾ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply