ಹಮಾಸ್‌ ಜೊತೆ ಪ್ಯಾಲೆಸ್ತೀನ್‌ ಪತ್ರಕರ್ತನ ಲಿಂಕ್‌! ಇಸ್ರೇಲ್‌ ಆರೋಪ!

masthmagaa.com:

ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ UNRWA ಏಜೆನ್ಸಿ ಹಮಾಸ್‌ ಜೊತೆ ಸೇರ್ಕೊಂಡಿದೆ ಅಂತ ಆರೋಪ ಮಾಡಿದ ಇಸ್ರೇಲ್‌, ಇದೀಗ ಮತ್ತೊಂದು ಹೊಸ ಆರೋಪ ಮಾಡಿದೆ. ಪತ್ರಕರ್ತನೊಬ್ಬ ಹಮಾಸ್‌ ಜೊತೆ ಸೇರ್ಕೊಂಡಿದ್ದಾನೆ ಅಂತ ಇದೀಗ ಇಸ್ರೇಲ್‌ ಸೇನೆ ಆರೋಪಿಸಿದೆ. ಈತ ಮೊಹಮ್ಮದ್‌ ವಶಾ ಅಂತ ಗುರುತಿಸಲಾಗಿದ್ದು, ಕತಾರ್‌ನ ಅಲ್‌ ಜಜ಼ೀರಾದಲ್ಲಿ (Al Jazeera) ಜರ್ನಲಿಸ್ಟ್‌ ಆಗಿ ಕೆಲಸ ಮಾಡ್ತಿದ್ದಾನೆ ಎನ್ನಲಾಗಿದೆ. ಹೀಗಂತ ಇಸ್ರೇಲ್‌ ರಕ್ಷಣಾ ಪಡೆಯ ವಕ್ತಾರ ಕೇವಲ ಬಾಯ್ಮಾತಿಗಷ್ಟೇ ಆರೋಪ ಮಾಡ್ತಿಲ್ಲ. ವಿತ್‌ ಎವಿಡೆನ್ಸ್‌ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವ್ರು, ʻಕೆಲ ವಾರಗಳ ಹಿಂದೆ ಉತ್ತರ ಗಾಜಾ ಪಟ್ಟಿಯಲ್ಲಿರೋ ಹಮಾಸ್‌ ಕ್ಯಾಂಪ್‌ ಒಳಗಡೆ ಇಸ್ರೇಲ್‌ ರಕ್ಷಣಾ ಪಡೆ ಕಾರ್ಯಚರಣೆ ನಡೆಸಿತ್ತು. ಈ ವೇಳೆ ಮೊಹಮ್ಮದ್‌ ವಶಾಗೆ ಸೇರಿದ ಲ್ಯಾಪ್‌ಟಾಪ್‌ ಪತ್ತೆಯಾಗಿದೆ. ಸಿಕ್ಕ ಲ್ಯಾಪ್‌ಟಾಪ್‌ನ ಚೆಕ್‌ ಮಾಡಿದ ನಂತ್ರ ವಶಾ ಹಾಗೂ ಹಮಾಸ್‌ ಉಗ್ರರಿಗೆ ಲಿಂಕ್‌ ಇರೋ ಕೆಲ ಇಮೇಜ್‌ಗಳು ಸಿಕ್ಕಿವೆ.ಈ ಮೊಹಮ್ಮದ್‌ ವಶಾ ಹಮಾಸ್‌ ಆ್ಯಂಟಿ ಟ್ಯಾಂಕ್‌ ಮಿಸೈಲ್‌ ಯೂನಿಟ್‌ನ ಪ್ರಮುಖ ಕಮಾಂಡರ್‌ ಕೂಡ ಆಗಿದ್ದಾನೆ. 2022ರ ಟೈಮ್‌ಲ್ಲಿ ಈತ ಹಮಾಸ್‌ ಉಗ್ರ ಸಂಘಟನೆ ಜೊತೆ ಕೆಲಸ ಮಾಡೋಕೆ ಸ್ಟಾರ್ಟ್‌ ಮಾಡಿದ್ದಾನೆʼ ಅಂತ ಆರೋಪಿಸಿದ್ದಾರೆ. ಇನ್ನು ಗಾಜಾದಲ್ಲಿ ದಾಳಿ ಮುಂದುವರೆಸಿರೋ ಇಸ್ರೇಲ್‌ ಪಡೆಗಳು ಇದೀಗ ಇಬ್ಬರು ಇಸ್ರೇಲ್‌ ಒತ್ತೆಯಾಳುಗಳ ರಕ್ಷಣೆ ಮಾಡಿದೆ ಅಂತ ಹೇಳ್ಕೊಂಡಿದೆ. ಗಾಜಾದ ರಫಾ ನಗರದಲ್ಲಿ ಬಿಲ್ಡಿಂಗ್‌ ಮೇಲೆ ದಾಳಿ ನಡೆಸಿ ತಮ್ಮ ಇಬ್ಬರು ಒತ್ತೆಯಾಳುಗಳನ್ನ ರಕ್ಷಣೆ ಮಾಡಿದೆ. ಆದ್ರೆ ಈ ವೇಳೆ ಕನಿಷ್ಠ 7 ಪ್ಯಾಲಸ್ತೀನ್‌ ನಾಗರಿಕರು ಇಸ್ರೇಲ್‌ ದಾಳಿಗೆ ಮೃತಪಟ್ಟಿದ್ದಾರೆ ಅಂತ ಪ್ಯಾಲಸ್ತೀನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ತನ್ನಿಬ್ಬರು ಒತ್ತೆಯಾಳುಗಳನ್ನ ಇಸ್ರೇಲ್‌ ಸೇನೆ ರಕ್ಷಣೆ ಮಾಡಿದ್ರೆ, ಅತ್ತ ಇಸ್ರೇಲ್‌ ದಾಳಿಗೆ ಮತ್ತಿಬ್ಬರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply