ಲಕ್ಷ ಲಕ್ಷ ಸೈನಿಕರು ಸಮರ ಸನ್ನದ್ಧ! ಗಾಜಾ ಗಡಿ ಗಢಗಢ!

masthmagaa.com:

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಸರ್ವನಾಶದ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಾಜಾ ಪಟ್ಟಿಯನ್ನ ಸಂಪೂರ್ಣ ವಶಪಡಿಸಿಕೊ‍ಳ್ಳಲು ಮುಂದಾಗಿರುವ ಇಸ್ರೇಲ್‌, ಭಾರಿ ಪ್ರಮಾಣದಲ್ಲಿ ಯುದ್ಧಟ್ಯಾಂಕ್‌ ಮತ್ತು ಸೈನಿಕರನ್ನ ಗಾಜಾ ಬಾರ್ಡರ್‌ನಲ್ಲಿ ನಿಯೋಜಿಸಲು ಪ್ರಾರಂಭಿಸಿದೆ. ಈಗಾಗಲೇ ಹಮಾಸ್‌ ಉಗ್ರರ ಅಡಗುದಾಣಗಳನ್ನ ಟಾರ್ಗೆಟ್‌ ಮಾಡಿ ಕಾರ್ಯಚರಣೆ ನಡೆಸಲಾಗ್ತಿದೆ. ಈ ವೇಳೆ ಹಮಾಸ್‌ ಉಗ್ರರ ಒತ್ತೆಯಾಳಾಗಿದ್ದ 250 ಮಂದಿ ಇಸ್ರೇಲ್‌ ನಾಗರಿಕರನ್ನ ರಕ್ಷಣೆ ಮಾಡಲಾಗಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ. ಇನ್ನು ಇದೇ ಸಮಯದಲ್ಲಿ 60ಕ್ಕೂ ಹೆಚ್ಚು ಉಗ್ರರನ್ನ ಹತ್ಯೆ ಮಾಡಲಾಗಿದ್ದು, 26 ಹಮಾಸ್‌ ಉಗ್ರರನ್ನ ಜೀವಂತ ಸೆರೆಹಿಡಿಯಲಾಗಿದೆ. ಇವರಲ್ಲಿ ಹಮಾಸ್‌ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಮುಹಮ್ಮದ್ ಅಬು ಅಲಿಯೂ ಸೇರಿದ್ದಾನೆ. ಇನ್ನು ಗಾಜಾ ಮೇಲೆ ಇಸ್ರೇಲ್‌ ನಡೆಸಿರುವ ಏರ್‌ಸ್ಟ್ರೈಕ್‌ನಲ್ಲಿ 13 ಜನ ಇಸ್ರೇಲ್‌ ಒತ್ತೆಯಾಳುಗಳು ಮೃತಪಟ್ಟಿದ್ದಾರೆ ಅಂತ ಗಾಜಾ ಹೇಳಿದೆ. ಇಸ್ರೇಲ್‌-ಹಮಾಸ್‌ ನಡುವಿನ ಭೀಕರ ಕಾಳಗದಲ್ಲಿ ಇಸ್ರೇಲ್‌ ಸೈನಿಕರ ಸಾವಿನ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಈ ಯುದ್ಧದಲ್ಲಿ ಒಟ್ಟಾರೆಯಾಗಿ ಇಸ್ರೇಲ್‌ ಕಡೆ 1,300 ಮಂದಿ ಸಾವೀಗೀಡಾಗಿದ್ದಾರೆ. ಆ ಕಡೆ ಗಾಜಾದಲ್ಲಿ ಕನಿಷ್ಠ 1,500 ಮಂದಿ ಸಾವನ್ನಪ್ಪಿದ್ದಾರೆ.

ಇತ್ತ ಇಸ್ರೇಲ್‌ಗೆ ಬೆಂಬಲ ನೀಡೋದನ್ನ ಅಮೆರಿಕ ಕಂಟಿನ್ಯೂ ಮಾಡಿದೆ. ನಿನ್ನೆಯಷ್ಟೆ ಅಮೆರಿಕ ವಿದೇಶಾಂಗ ಸಚಿವ ಆಂಥನಿ ಬ್ಲಿಂಕನ್‌ ಇಸ್ರೇಲ್‌ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದೀಗ ಅಮೆರಿಕದ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಅವರು ಇಸ್ರೇಲ್‌ಗೆ ಬಂದಿಳಿದಿದ್ದು, ತಮ್ಮ ರಕ್ಷಣಾ ನೆರವಿನ ಕುರಿತು ಪರಿಶೀಲನೆ ನಡೆಸಿದ್ದಾರೆ. ಇನ್ನೊಂದ್‌ ಕಡೆ ಚೀನಾದಲ್ಲಿರುವ ಇಸ್ರೇಲ್‌ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಅಂತ ಇಸ್ರೇಲ್‌ ತಿಳಿಸಿದೆ. ರಾಯಭಾರಿ ಕಚೇರಿಗೆ ಬಿಗಿ ಭದ್ರತೆ ಒದಗಿಸಿದ್ದು, ಈ ಘಟನೆ ಕಚೇರಿಯ ಆವರಣದಲ್ಲಿ ನಡೆದಿಲ್ಲ ಅಂತ ಚೀನಾ ಸ್ಪಷ್ಟಪಡಿಸಿದೆ. ಇತ್ತ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿಯನ್ನ ಚೀನಾ ಖಂಡಿಸದೇ ಇರೋದಕ್ಕೆ ಚೀನಾದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನೊಂದ್‌ ಕಡೆ ಗಾಜಾ ಮೇಲೆ ಆಕ್ರಮಣ ಮಾಡಿರೋ ಇಸ್ರೇಲ್‌ ಸೇನೆ, ಬಳಿ ನಿಷೇಧಿತ ರಾಸಾಯನಿಕಗಳನ್ನ ಬಳಸುತ್ತಿದೆ ಅಂತ ಮಾನವ ಹಕ್ಕುಗಳ ವಾಚ್‌ಡಾಗ್‌ವೊಂದು ಆರೋಪಿಸಿದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಇಸ್ರೇಲ್‌ ಸೇನೆ ಆ ರೀತಿ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ನಮಗೆ ಮಾಹಿತಿಯಿಲ್ಲ ಅಂತ ಹೇಳಿದೆ. ಅತ್ತ ಗಾಜಾ ಪಟ್ಟಿಯನ್ನ ತೊರೆಯುವಂತೆ ಅಲ್ಲಿನ ಜನರಿಗೆ ಇಸ್ರೇಲ್‌ ನೀಡದ್ದ ಆದೇಶಕ್ಕೆ ರಿಯಾಕ್ಟ್‌ ಮಾಡಿರುವ ಹಮಾಸ್‌, ಯಾರು ಗಾಜಾ ಬಿಟ್ಟು ಹೋಗ್ಬೇಡಿ. ನಿಮ್ಮ ಮನೆಗಳಲ್ಲೇ ಇರಿ ಅಂತ ಹೇಳಿದೆ. ಈ ಮೂಲಕ ಹಮಾಸ್‌ ಉಗ್ರಗುಂಪುಗಳು ಪಾಲೇಸ್ತೇನಿ ಜನರನ್ನ ಶೀಲ್ಡ್‌ಗಳಾಗಿ ಬಳಸಿಕೊಳ್ಳೋ ಸೂಚನೆ ಕೊಡ್ತಾ ಇದ್ದಾರೆ.

ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿಯನ್ನ ಖಂಡಿಸಿದ್ದಾರೆ. ದೆಹಲಿಯಲ್ಲಿ ನಡೆದ P-20 ಸಭೆಯಲ್ಲಿ ಮಾತಾಡಿರುವ ಮೋದಿ, ಭಾರತ ದಶಕಗಳಿಂದ ಕ್ರಾಸ್‌ ಬಾರ್ಡರ್‌ ಭಯೋತ್ಪಾದನೆಯನ್ನು ಫೇಸ್‌ ಮಾಡ್ತಿದೆ. ಭಯೋತ್ಪಾದಕರು ಸಾವಿರಾರು ಅಮಾಯಕರನ್ನು ಕೊಂದಿದ್ದಾರೆ. ಜಾಗತಿಕವಾಗಿ ಭಯೋತ್ಪಾದನೆ ದೊಡ್ಡ ಸವಾಲಾಗಿದ್ದು, ಅದು ಮಾನವೀಯತೆಗೆ ವಿರುದ್ಧ ಅಂತ ಹೇಳಿದ್ದಾರೆ. ಇದೇ ವೇಳೆ 2001 ರಲ್ಲಿ ಭಾರತೀಯ ಸಂಸತ್ತಿನ ಮೇಲಿನ ದಾಳಿಯನ್ನ ಮೋದಿ ನೆನಪಿಸಿಕೊಂಡಿದ್ದಾರೆ. ಜಗತ್ತು ಈಗ ಒಗ್ಗಟ್ಟಿನಿಂದ ಮುನ್ನಡೆಯುವ ಅಗತ್ಯವಿದೆ. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಘರ್ಷಣೆಗಳು ಮತ್ತು ಯುದ್ಧಗಳಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಇಬ್ಬಾಗವಾಗಿರೋ ಜಗತ್ತು ಮನುಕುಲದ ಮುಂದಿರೋ ಸವಾಲುಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೀಗಾಗಿ ಭಯೋತ್ಪಾದನೆಯನ್ನು ಎದುರಿಸಲು ಎಲ್ಲ ದೇಶಗಳು ಯೋಚಿಸಬೇಕು ಅಂತ ಮೋದಿ ಕರೆ ಕೊಟ್ಟಿದ್ದಾರೆ.

ಇನ್ನೊಂದ್‌ ಕಡೆ ʻಇಸ್ರೇಲ್‌ಗೆ ಭಾರತೀಯರು ಕೊಡ್ತಿರೋ ಸಪೋರ್ಟ್‌ ನೋಡಿ ನಾವು ಭಾರತದಲ್ಲೆ ಒಂದು ಸೇನೆ ಕಟ್ಬೋದು, ಇನ್ನೊಂದು Israel Defence Force (IDF) ಯುನಿಟ್‌ನ್ನೇ ರಚನೆ ಮಾಡ್ಬೋದು ಅಂತ ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ನೋರ್‌ ಗಿಲೋನ್‌ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯವರು ದಾಳಿಯಾದ ಮೊದಲ ದಿನವೇ ಹಮಾಸ್‌ ಉಗ್ರರನ್ನ ಬಲವಾಗಿ ಖಂಡಿಸಿದ್ದಾರೆ. ಅದು ನಮಗೆ ಆಶಾವಾದ ಮತ್ತು ತುಂಬಾ ಭಾವನಾತ್ಮಕ ವಿಚಾರವಾಗಿದೆ. ನಾವು ಅದನ್ನ ಯಾವಾತ್ತಿಗೂ ಮರೆಯಲ್ಲ. ಇನ್ನು ನೆತನ್ಯಾಹು ಜೊತೆ ಮಾತಾಡಿದ ಬಳಿಕ ಮೋದಿಯವರು ಮತ್ತೊಂದು ಸ್ಟ್ರಾಂಗ್‌ ಪೋಸ್ಟ್‌ ಹಾಕಿದ್ದಾರೆ. ಇವೆಲ್ಲ ನಮಗೆ ಬಹಳ ಮುಖ್ಯವಾಗಿದ್ದು, ನಾನು ಅದಕ್ಕೆ ಕೃತಜ್ಞನಾಗಿದ್ದೇನೆ. ಭಾರತದ ಸಚಿವರೊಬ್ರು ಕರೆ ಮಾಡಿ ನಾವು ನಿಮ್ಮ ಜೊತೆಗಿದ್ದೇವೆ, ನಮ್ಮ ಬಳಿ ಉನ್ನತ ಅಧಿಕಾರಿಗಳು ಹಾಗೂ ಉದ್ಯಮಿಗಳಿದ್ದು, ಯಾವುದೇ ರೀತಿಯ ಸಹಾಯ ಬೇಕಾದ್ರು ಮಾಡ್ತೀವಿ ಅಂತ ಭರವಸೆ ನೀಡಿದ್ರು. ಜೊತೆಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಭಾರತೀಯರು ನಮಗೆ ಸಪೋರ್ಟ್‌ ಮಾಡ್ತಿದ್ದಾರೆ. ಇಸ್ರೇಲ್‌ ಪರವಾಗಿ ನಾವು ಹೋರಾಡೋಕೆ ರೆಡಿ ಇದೀವಿ ಅಂತ ಹೇಳ್ತಿದ್ದು, ಒಂದು ವಾಲಂಟೀರ್‌ ಸೇನೆಯನ್ನೇ ಫಾರ್ಮ್‌ ಮಾಡ್ಬೋದು. ಭಾರತ ಮತ್ತು ಇಸ್ರೇಲ್‌ ನಡುವಿನ ಸಂಬಂಧ ತುಂಬಾನೆ ಡೀಪ್‌ ಮತ್ತು ಎಮೋಷನಲ್‌ ಆಗಿದೆ ಅಂತ ಗಿಲೋನ್‌ ಹೇಳಿದ್ದಾರೆ. ಇದೆಲ್ಲದರ ನಡುವೆ ಪ್ಯಾಲಸ್ತೈನ್‌ಗೆ ಸಪೋರ್ಟ್‌ ಮಾಡಿ ವಾಟ್ಸಾಪ್‌ ಪೋಸ್ಟ್‌ ಹಾಕಿದ್ದ ವಿಜಯನಗರದ ಯುವಕನೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply