ಮತ್ತೆ ಭುಗಿಲೆದ್ದ ಉರಿಗೌಡ-ನಂಜೇಗೌಡ ವಿವಾದ! ಬಿಜೆಪಿಗೆ ಕುಮಾರಸ್ವಾಮಿ ತರಾಟೆ!

masthmagaa.com:

ಟಿಪ್ಪು ಹತ್ಯೆ ಮಾಡಿದ್ರು ಎನ್ನಲಾದ ಉರಿಗೌಡ ಹಾಗೂ ನಂಜೇಗೌಡರ ವಿಷಯ ಮತ್ತೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಠಿಮಾಡಿದೆ. ಇದೀಗ ಸಚಿವ, ಚಿತ್ರ ನಿರ್ಮಾಪಕ ಮುನಿರತ್ನ ತಮ್ಮ ವೃಷಭಾದ್ರಿ ಪ್ರೊಡಕ್ಶನ್ಸ್‌ ಮೂಲಕ ʻಉರಿಗೌಡ ನಂಜೇಗೌಡʼ ಕುರಿತಾದ ಸಿನಿಮಾ ಮಾಡಲು ತಯಾರಾಗಿದ್ರು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದಾರೆ. ತಮ್ಮದೇ ಬ್ಯಾನರ್‌ನಲ್ಲಿ ‘ಉರಿಗೌಡ-ನಂಜೇಗೌಡ’ ಟೈಟಲ್ ಗಾಗಿ ಮುನಿರತ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ ಒಕ್ಕಲಿಗರ ಗೌರವವನ್ನ ಬೆಳ್ಳಿತೆರೆಯ ಮೇಲೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಅಂತ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಸಿನಿಮಾ ಟೈಟಲ್‌ ರೆಜಿಸ್ಟ್ರೇಶನ್‌ಗಾಗಿ ಸಲ್ಲಿಸಿರೊ ಅರ್ಜಿಯ ಪ್ರತಿಯನ್ನ ಕೂಡ ಟ್ವಿಟರ್‌ನಲ್ಲಿ ಶೇರ್‌ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಪಿತಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನ ಅಲ್ಲೋಲ ಕಲ್ಲೋಲ ಮಾಡ್ತಿರೊ ಬಿಜೆಪಿಯ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನ ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್‌ ಅಜೆಂಡಾ ಬಿಜೆಪಿಗೆ ಇರುವುದಂತು ಸತ್ಯ ಅಂತ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇತ್ತ ಉರಿಗೌಡ ಜಗಳಕ್ಕೆ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ಎಂಟ್ರಿಯಾಗಿದಾರೆ. ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ ಹಾಗೂ ನಂಜೇಗೌಡರ ಹೆಸರಿದೆ. ಟಿಪ್ಪು ದೇಶ ವಿರೋಧಿ, ಹಿಂದೂ ವಿರೋಧಿ, ಕನ್ನಡ ವಿರೋಧಿ ಆಗಿದ್ದ. ನಂದಿ ಬೆಟ್ಟಕ್ಕೆ ಹೋದ್ರೆ ಟಿಪ್ಪು ಡ್ರಾಪ್ ಇದೆ. ಅವರ ವಿರೋಧಿಗಳನ್ನ ಕೊಲ್ಲಲು ಟಿಪ್ಪು ಡ್ರಾಪ್ ಇದೆ, ಹಿಂದೂಗಳನ್ನ ಅಲ್ಲಿ ಕೊಲ್ಲುತ್ತಿದ್ದ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇನ್ನೊಂದ್‌ ಕಡೆ ಟಿಪ್ಪುವನ್ನ ಕೊಂದಿದ್ದು ಒಕ್ಕಲಿಗರೇ ಅನ್ನೊದಕ್ಕೆ ಸಾಕ್ಷ್ಯ ಇದೆ ಅಂತೇಳಿ ಬಿಜೆಪಿ ಕಾರ್ಯಕರ್ತರು ಸಿಡಿಯೊಂದನ್ನ ಬಿಡುಗಡೆ ಮಾಡಿದ್ದಾರೆ. 70 ವರ್ಷದ ಹಿಂದಿನದು ಅಂತ ಹೇಳಲಾಗೊ ಲಾವಣಿ ಹಾಡಿನ ಸಿಡಿಯನ್ನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಪಾರ್ಸೆಲ್‌ ಮಾಡಿ ಕಳಿಸಿದ್ದಾರೆ. ಈ ಹಾಡು 1940ರಲ್ಲಿ ಮುಂಬೈ ಸ್ಟುಡಿಯೋದಲ್ಲಿ ಗ್ರಾಮಫೋನ್‌ನಲ್ಲಿ ರೆಕಾರ್ಡ್‌ ಆಗಿದೆ ಅಂತ ಹೇಳಲಾಗಿದ್ದು, ಇದ್ರಲ್ಲಿ ʻಪರಂಪರೆಯ ವಿರೋಧವಿದ್ದವರನ್ನ ಗೌಡರು ತರಿದರು ಖಡ್ಗದಲಿʼ ಅಂತ ಹೇಳಲಾಗಿದೆ. ಆದ್ರೆ ಈ ಆಡಿಯೋದಲ್ಲಿ ಎಲ್ಲಿಯೂ ಟಿಪ್ಪು ಹೆಸರಾಗ್ಲೀ, ಉರಿಗೌಡ ಅಥ್ವಾ ನಂಜೇಗೌಡರ ಹೆಸರಾಗ್ಲೀ ಇಲ್ಲ. ಕೇವಲ ಗೌಡರು ಅಂತ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply