ರಾಜ್ಯದಲ್ಲಿ ಮೀಸಲಾತಿ ಯುದ್ಧ! ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ ಡಿಕೆಶಿ!

masthmagaa.com:

ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿರೊ ಪರಿಷ್ಕೃತ ಮೀಸಲಾತಿ ಬಗ್ಗೆ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಮೀಸಲಾತಿ ನಿರ್ಧಾರದಿಂದ ಅಲ್ಪಸಂಖ್ಯಾತರಿಗೆ ಮೋಸವಾಗಿದೆ ಅಂತ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಆರೋಪ ಮಾಡ್ತಿವೆ. ಇದೀಗ ಒಕ್ಕಲಿಗ, ಲಿಂಗಾಯತ ಪಂಚಮಸಾಲಿ ಸಮುದಾಯಗಳಿಗೆ 2ಸಿ, 2ಡಿ ಅಡಿಯಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೊಸ ಮೀಸಲಾತಿ ವಿಚಾರವಾಗಿ ನಿರ್ಮಲಾನಂದನಾಥಶ್ರೀ,ಹಾಗೂ ಜಯಮೃತ್ಯುಂಜಯ ಶ್ರೀಗಳಿಗೆ 25 ಬಾರಿ ಕರೆ​ ಮಾಡಿ ಒಪ್ಪಿಕೊಳ್ಳಿ ಅಂತ ಬಿಜೆಪಿ ಅವರು ಒತ್ತಡ ಹಾಕಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಸ್ವಾಮೀಜಿಗಳಿಗೆಲ್ಲ ಫೋನ್ ಮಾಡಿ ಈ ರೀತಿ ಒಪ್ಪಿಕೊಳ್ಳಿ ಅಂತ ಹೇಳೋದು ಸರೀನಾ. ಲಿಂಗಾಯತರು ಶೇಕಡಾ 16, ಒಕ್ಕಲಿಗರು ಶೇಕಡಾ 12 ಮೀಸಲಾತಿ ಕೇಳಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತುಕೊಂಡು ಕೊಟ್ಟಿದ್ದು ಅನ್ಯಾಯ ಮಾಡಿದಂತೆ ಅಲ್ವಾ ಅಂತ ಡಿಕೆಶಿ, ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಇತ್ತ ʻಮೀಸಲಾತಿ ಜೇನುನೊಣವಿದ್ದಂತೆ, ಅಲ್ಲಿಗೆ ಕೈ ಹಾಕಿದ್ರೆ ಕಚ್ಚಿಸಿಕೊಳ್ಳುವುದು ಖಚಿತ ಅಂತ ಕಾಂಗ್ರೆಸ್‌ನವರು ಹೇಳ್ತಾನೇ ಬಂದಿದ್ದಾರೆ. ಜೇನು ನೊಣಗಳಿಂದ ಕಚ್ಚಿಸಿಕೊಂಡರೂ ಜೇನು ಹಂಚುವ ಕೆಲಸ ಮಾಡಿದ್ದೇನೆʼ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅಲ್ದೇ ಅಲ್ಪಸಂಖ್ಯಾತ ಮುಸ್ಲಿಂರಿಗೆ ಇದ್ದ ಕೇವಲ ಶೇ.4ರಷ್ಟು ಮೀಸಲಾತಿಯನ್ನ ರದ್ದು ಪಡಿಸಿ EWSನಲ್ಲಿ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಅವ್ರಿಗೆ ಹೇಗೆ ಅನ್ಯಾಯವಾಗುತ್ತೆ. ಅಲ್ಪಸಂಖ್ಯಾತರ ಹಿತರಕ್ಷಣೆಯನ್ನ ಗಮನದಲ್ಲಿಟ್ಟುಕೊಂಡೇ ಸರ್ಕಾರ ನಿರ್ಧಾರ ಕೈಗೊಂಡಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಮೀಸಲಾತಿ ವಿಚಾರದಲ್ಲಿ ಒತ್ತಡ ಹೇರಲಾಗಿದೆ ಅನ್ನೊ ಡಿಕೆಶಿ ಆರೋಪವನ್ನ ಬೊಮ್ಮಾಯಿ ತಳ್ಳಿ ಹಾಕಿದ್ದಾರೆ. ನಾವು ನ್ಯಾಯ ಸಮ್ಮತವಾಗಿ ಮೀಸಲಾತಿ ನೀಡಿದ್ದೇವೆ. ಯಾರಿಗೂ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ. ಪ್ರಮಾಣ ಮಾಡಿ ಹೇಳ್ತಿನಿ ಯಾರಿಗೂ ಒತ್ತಡ ಹಾಕಿಲ್ಲ ಅಂತ ಡಿಕೆಶಿ ಹೇಳಿಕೆಯನ್ನ ಅಲ್ಲಗಳೆದಿದ್ದಾರೆ. ಇನ್ನು ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರೊ ಪಂಚಮಸಾಲಿ ಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ ಅಂತ ಕಾಣುತ್ತೆ. ಅವರು ಕೂಡ ನಮ್ಮ ಹೋರಾಟದ ವೇಳೆ, ಪಾದಯಾತ್ರೆಗೆ ಬಂದು ಬೆಂಬಲ ಕೊಟ್ಟಿದ್ರು. ದೂರವಾಣಿ ಮೂಲಕ ಕೂಡ ಹೋರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ರು. ಕೇಂದ್ರ ಸರ್ಕಾರ ಹಾಗೂ ಸಿಎಂ ಬೊಮ್ಮಾಯಿ ಅವರು ಮೀಸಲಾತಿ ವಿಚಾರದಲ್ಲಿ ಯಾವುದೇ ಒತ್ತಡ ಹಾಕಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply