ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಬೃಹತ್‌ ಪ್ರತಿಭಟನೆ ರ್ಯಾಲಿಯಲ್ಲಿ ಡಿಕೆಶಿ, ಹೆಚ್‌.ಡಿ ದೇವೇಗೌಡ ಭಾಗಿ

masthmagaa.com

ಕೆಲದಿನಗಳ ಕಾಲ ಸ್ತಬ್ಧವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇವತ್ತು ಮತ್ತೆ ಭುಗಿಲೆದ್ದಿದೆ. ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ವಿಶ್ವಮಾನವ ಕುವೆಂಪು ಹೋರಾಟ ಸಮಿತಿ ಇವತ್ತು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದೆ. ನಗರದ ರೇಲ್ವೇ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಫ್ರೀಡಂ ಪಾರ್ಕ್‌ವರೆಗೆ ಸಾಗಿದೆ. ಇದ್ರಲ್ಲಿ ವಿವಿಧ ಮಠಾದೀಶರು, ಸಾಹಿತಿಗಳು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸುಪ್ರಿಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದಾರೆ. ಈ ವೇಳೆ ಪರಿಷ್ಕೃತ ಪಠ್ಯಪುಸ್ತಕಗಳನ್ನ ವಾಪಸ್‌ ಪಡೆಯುವುದು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆ, ರೋಹಿತ್‌ ಚಕ್ರತೀರ್ಥ ಬಂಧನ ಸೇರಿದಂತೆ ನಾಲ್ಕು ಬೇಡಿಕೆಗಳುಳ್ಳ ಹಕ್ಕೋತ್ತಾಯವನ್ನ ಮಂಡಿಸಲಾಗಿದೆ. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್‌ ಪರಿಷ್ಕೃತ ಪಠ್ಯಪುಸ್ತಕದ ಪ್ರತಿಯನ್ನ ವೇದಿಕೆಯಲ್ಲೇ ಹರಿದೆಸೆದು ಹಳೆ ಪಠ್ಯಪುಸ್ತಕಗಳನ್ನೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ. ಇನ್ನು ಮಾಜಿ ಪ್ರಧಾನಿ ದೇವೇಗೌಡ ಮಾತಾಡಿ, ಹುಷಾರಿಲ್ಲದ ಕಾರಣ ಈವರೆಗೆ ಹೋರಾಟದಲ್ಲಿ ಭಾಗಿಯಾಗದೇ ಇದಕ್ಕೆ ಕ್ಷಮೆ ಕೇಳಿದ್ದಾರೆ. ಜೊತೆಗೆ ಈ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪಬೇಕು. ಹೋರಾಟ ಸಮಿತಿ ಯಾವುದೇ ಸಂದರ್ಭದಲ್ಲಿ ಕರೆದರೂ ಪ್ರತಿಭಟನೆಗೆ ಬರಲು ನಾನು ಸಿದ್ದ. ಗೋಕಾಕ್‌ ಚಳುವಳಿ ಮಾದರಿಯಲ್ಲಿ ಇದು ನಡೆಯಬೇಕು. ಆಗ ವರನಟ ಡಾ.ರಾಜ್‌ಕುಮಾರ್‌ ಹೋರಾಟವನ್ನ ಮುನ್ನಡೆಸಿದ್ರು. ಈಗ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಅಂತ ಹೇಳಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿ ಮಾತಾಡಿರೋ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌, ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply