ಚಲೋ ದೆಹಲಿ ಪ್ರತಿಭಟನೆಯಲ್ಲಿ ಒಟ್ಟಾದ ದಕ್ಷಿಣ ಭಾರತ ರಾಜ್ಯಗಳು!

masthmagaa.com:

ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗ್ತಿದೆ ಅಂತೇಳಿ ಕೇಂದ್ರದ ವಿರುದ್ಧದ ಪ್ರತಿಭಟನೆಗೆ ಕಿಚ್ಚು ಹಚ್ಚಿದ ಕರ್ನಾಟಕ ಸರ್ಕಾರದ ಜೊತೆ ಇದೀಗ ಕೇರಳ ತಮಿಳುನಾಡು ಸರ್ಕಾರಗಳೂ ಸೇರಿವೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ʻಚಲೋ ದೆಹಲಿʼ ಅಂತ ಭಾರೀ ಪ್ರತಿಭಟನೆ ನಡೆಸ್ತಿವೆ. ಮೂರು ಸರ್ಕಾರಗಳು ಕೇಂದ್ರದ ವಿರುದ್ಧ ಧ್ವನಿ ಎತ್ತಿವೆ. ಅಷ್ಟೇ ಅಲ್ದೇ ತಮ್ಮ ಡಿಮಾಂಡ್‌ನ್ನ ಈಡೇರಿಸದೇ ಇದ್ದಲ್ಲಿ, ಬೀದಿಗಿಳಿದು ಹೋರಾಟ ಮಾಡ್ಬೇಕಾಗುತ್ತೆ ಅಂತ ರಾಜ್ಯ ಕಾಂಗ್ರೆಸ್‌ ಹೇಳಿದೆ. ಅಂದ್ಹಾಗೆ ಈ ಪ್ರತಿಭಟನೆಯಲ್ಲಿ ಕೇವಲ ದಕ್ಷಿಣ ಭಾರತದ ಸರ್ಕಾರಗಳು ಮಾತ್ರವಲ್ದೇ, ಇದೀಗ ದೆಹಲಿಯ ಕೇಜ್ರಿವಾಲ್‌ ಸರ್ಕಾರ ಕೂಡ ಕೈ ಜೋಡಿಸೋ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಇನ್ನು ತೆರಿಗೆ ಹಂಚಿಕೆ ವಿಚಾರವಾಗಿ ಪ್ರತಿಭಟನೆಗಿಳಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಾಗ್ದಾಳಿ ನಡೆಸಿದ್ದಾರೆ. ಫೆಬ್ರುವರಿ 07 ರಂದು ಲೋಕಸಭೆಯಲ್ಲಿ ಮಾತನಾಡಿದ ಅವ್ರು, ʻಕಾಂಗ್ರೆಸ್‌ ಪ್ರತ್ಯೇಕವಾದಿ ಮನಸ್ಥಿತಿ ಹೊಂದಿದೆ. ದೇಶವನ್ನ ಒಡೆಯೋ ಕೆಲಸ ಮಾಡ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾದ ಹಣದ ವಿಚಾರವಾಗಿ ಸುಳ್ಳು ಕಥೆಗಳನ್ನ ಹುಟ್ಟು ಹಾಕ್ತಿದೆʼ ಅಂತ ಆರೋಪಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಮೀಸಲಿಟ್ಟ ಅನುದಾನದ ಅಂಕಿಅಂಶಗಳನ್ನ ಕೂಡ ನೀಡಿದ್ದಾರೆ. 14ನೇ ಹಣಕಾಸು ಆಯೋಗದ 5 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ 1,51,309 ಕೋಟಿ ರೂಪಾಯಿ ತೆರಿಗೆ ಹಂಚಿಕೆ ರೂಪದಲ್ಲಿ ಸಿಕ್ಕಿದೆ. ಅದೇ ಈಗಿನ 15ನೇ ಹಣಕಾಸು ಆಯೋಗದ 4 ವರ್ಷದ ಅವಧಿಯಲ್ಲೇ 1,29,854 ಕೋಟಿ ರೂಪಾಯಿ ಕರ್ನಾಟಕಕ್ಕೆ ಸಿಕ್ಕಿದೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply